ಬೆಂಗಳೂರಿನ ಈ ಆಸ್ತಿದಾರರಿಗೆ ಪೂರ್ವ ನಗರ ಪಾಲಿಕೆಯಿಂದ ಶಾಕ್, ಏನದು ?
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಕ್ರಮವಹಿಸಲು ಆಯುಕ್ತರಾದ ರಮೇಶ್ ಡಿ.ಎಸ್ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬುಧವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 46 ಕೆರೆಗಳು ಬರಲಿದ್ದು, ಈ ಪೈಕಿ ಒತ್ತುವರಿಯಾಗಿರುವ ಕೆರೆಗಳಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳನ್ನು ಪರಿಶೀಲಿಸಿ ಕೂಡಲೇ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಬೆಂಗಳೂರಿನ ಈ ಭಾಗದ ಆಸ್ತಿದಾರರಿಗೆ ಪಾಲಿಕೆ ಶಾಕ್ ಕೊಟ್ಟಿದೆ. ಅದರ ವಿವರ ಇಲ್ಲಿದೆ.
ಬೃಹತ್ ರಾಜಕಾಲುವೆಗಳು ಎಲ್ಲೆಲ್ಲಿ ಒತ್ತುವರಿಯಾಗಿವೆ ಎಂಬುದನ್ನು ಪಟ್ಟಿ ಮಾಡಿಕೊಂಡು ಭೂಮಾಪನ ಇಲಾಖೆ ಅಧಿಕಾರಿಗಳ ಸಹಯೋಗದೊಂದಿಗೆ ಸಮೀಕ್ಷೆ, ಮಾರ್ಕಿಂಗ್ ಹಾಗೂ ನೋಟೀಸ್ ಗಳನ್ನು ನೀಡಿ ಒತ್ತುವರಿ ತೆರವು ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಸೂಚನೆ ನೀಡಿದ್ದಾರೆ. ರಾಜಕಾಲುವೆ ಬ್ಲಾಕೇಜ್ ಇರುವ ಕಡೆ ಕೂಡಲೇ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಬಾಟೆಲ್ ನೆಕ್ ಇರುವ ಕಡೆ ಅಗಲೀಕರಣ ಮಾಡಿ ಪ್ರವಾಹವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಸೂಚನೆ ಕೊಟ್ಟಿದ್ದಾರೆ.

ಇನ್ನು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಸುಮಾರು 2 ಕಿ.ಮೀ ಉದ್ದದ ಪಾದಚಾರಿ ಮಾರ್ಗದಲ್ಲಿ ಒತ್ತುವರಿಗಳನ್ನು ತೆರವುಗೊಳಿಸಿ ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪುನಃ ಪಾದಚಾರಿ ಮಾರ್ಗಗಳ ಒತ್ತುವರಿ ಮಾಡದಂತೆ ಎಚ್ಚರಿಕೆ ಕೂಡಾ ನೀಡಲಾಗಿದೆ. ಇನ್ನು ಕೆ.ಆರ್ ಪುರಂ ಮುಖ್ಯರಸ್ತೆಯಲ್ಲಿಯೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ವೇಳಾಪಟ್ಟಿ ಸಿದ್ದಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಣ ಮರ ಮತ್ತು ಅಪಾಯ ಸ್ಥಿತಿಯಲ್ಲಿರುವ ಮರಗಳ ತೆರವು: ಇನ್ನು ಬೆಂಗಳೂರಿನ ಪೂರ್ವ ನಗರಪಾಲಿಕೆ ವ್ಯಾಪ್ತಿಯಲ್ಲಿ ಒಣ ಮರ, ಅಪಾಯ ಹಂತದಲ್ಲಿರುವ ಮರಗಳನ್ನು ಗುರುತಿಸಿ ಆದ್ಯತೆ ಮೇರೆಗೆ ತೆರವು ಕಾರ್ಯಾಚರಣೆ ನಡೆಸಬೇಕು. ಅದರ ಜೊತೆಗೆ ವಿದ್ಯುತ್ ದೀಪಗಳಿಗೆ ಅಡ್ಡಲಾಗಿರುವ, ಪಾದಚಾರಿ ಮಾರ್ಗದಲ್ಲಿ ತಲೆಗೆ ತಾಗುವಂತಹ ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
38 ಉದ್ಯಾನವನಗಳ ನಿರ್ವಹಣೆ: ಪೂರ್ವ ಪಾಲಿಕೆಯ ವ್ಯಾಪ್ತಿಯಲ್ಲಿ ತೋಟಗಾರಿಕಾ ವಿಭಾಗದಿಂದ 38 ಉದ್ಯಾನವನಗಳು ಬರಲಿವೆ. ಜೊತೆಗೆ ರಸ್ತೆ ಮಧ್ಯಭಾಗದಲ್ಲಿ ಬರುವ ಮೀಡಿಯನ್ಸ್ ಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಿದ್ದು, ಉದ್ಯಾನವನಗಳು ಹಾಗೂ ಮೀಡಿಯನ್ಸ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.












Click it and Unblock the Notifications