ಶಿವರಾಮ ಕಾರಂತ ಬಡಾವಣೆ ಕಟ್ಟಡ ಮಾಲೀಕರಿಗೆ ಸಂತಸದ ಸುದ್ದಿ
ಬೆಂಗಳೂರು, ಮೇ 07: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉದ್ದೇಶಿತ ಡಾ. ಶಿವರಾಮ ಕಾರಂತ್ ಬಡಾವಣೆಯ ಸುಮಾರು 2500 ಕಟ್ಟಡಗಳನ್ನು ಸರ್ವೋಚ್ಛ ನ್ಯಾಯಾಲಯವು ಸಕ್ರಮಗೊಳಿಸಿ ಆದೇಶ ಹೊರಡಿಸಿದೆ. ಸಕ್ರಮಗೊಂಡಿರುವ ಕಟ್ಟಡಗಳಿಗೆ ಮೇ. 13 ರಂದು ನ್ಯಾ. ಎ.ವಿ. ಚಂದ್ರಶೇಖರ್ ಕಮಿಟಿ ಸಕ್ರಮ ಸರ್ಟಿಫಿಕೇಟ್ ಗಳನ್ನು ವಿತರಣೆ ಮಾಡಲಿದೆ.
ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ 2018 ಕ್ಕಿಂತ ಮುಂಚೆ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆದು ಕಟ್ಟಿದ ಕಟ್ಟಡಗಳ ಮಾಲೀಕರು ಸಲ್ಲಿಸಿದ ದಾಖಲೆಗಳ ಮೇಲೆ ಮಾನ್ಯ ಸರ್ವೋಚ್ಛ ನ್ಯಾಯಾಲಯ ಸಕ್ರಮಗೊಳಿಸಿ ಆದೇಶಿಸಿದೆ. ಇದರಿಂದ ಕಟ್ಟಡ ನೆಲಸಮ ಭೀತಿಗೆ ಒಳಗಾಗಿದ್ದ ಕಟ್ಟಡ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.

ನ್ಯಾಯಾಲಯದ ಆದೇಶದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಂಡಿದ್ದು, ಕಟ್ಟಡಗಳ ಮಾಲೀಕರಿಗೆ ಸಕ್ರಮ ಪ್ರಮಾಣ ಪತ್ರವನ್ನು ದಿನಾಂಕ 13.05.2022ರಿಂದ ವಿತರಿಸಲಾಗುವುದು. ಡಾ. ಶಿವರಾಮ ಕಾರಂತ್ ಬಡಾವಣೆ ವ್ಯಾಪ್ತಿಯ ಮೇಡಿ ಅಗ್ರಹಾರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ನೀಡಲಾಗುವುದು ಎಂದು ನ್ಯಾ. ಎ.ವಿ. ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಫಲಾನುಭವಿಗಳು ಸಕ್ರಮ ಪ್ರಮಾಣ ಪತ್ರವನ್ನು ಪಡೆಯಲು ತಮ್ಮೊಂದಿಗೆ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಆಧಾರ್‌ಕಾರ್ಡ್, ಸಮಿತಿಯಿಂದ ಸ್ವೀಕರಿಸಿರುವ ಎಸ್.ಎಂ.ಎಸ್., ಸಮಿತಿಯು ನೀಡಿರುವ ರಸೀದಿಯನ್ನು ಸಲ್ಲಿಸಬೇಕು. ಎಲ್ಲಾ ಫಲಾನುಭವಿಗಳು ಮೇಡಿ ಅಗ್ರಹಾರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಹಾಜರಾಗಲು ಹಾಗೂ ನಿಗದಿತ ದಿನಾಂಕ ಮತ್ತು ಸಮಯದ ಬಗ್ಗೆ ಎಸ್.ಎಂ.ಎಸ್. ಅನ್ನು ಕಳುಹಿಸಲಾಗುವುದು ಎಂದು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications