ಬಿಬಿಎಂಪಿ ವಿಭಜನೆಯಾಗಬೇಕೆ? ನಿಮ್ಮ ಅಭಿಪ್ರಾಯ ತಿಳಿಸಿ
ಬೆಂಗಳೂರು, ಜ. 17 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ಕುರಿತು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮೂವರು ಸದಸ್ಯರ ಸಮಿತಿ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದೆ. ಸದ್ಯ, ಜನರು ತಮ್ಮ ಅಭಿಪ್ರಾಯವನ್ನು ತಿಳಿಸಲು ವೆಬ್‌ಸೈಟ್ ಆರಂಭಿಸಲಾಗಿದೆ.
ಬಿಬಿಎಂಪಿ ವಿಭಜನೆ ಮಾಡುವ ಕುರಿತು ವರದಿ ನೀಡಲು ಸರ್ಕಾರ ರಚಿಸಿರುವ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ನೇತೃತ್ವದ ಸಮಿತಿ ಜನರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. www.bbmprestructuring.org ವೆಬ್‌ಸೈಟ್‌ಗೆ ನೀವು ಭೇಟಿ ನೀಡುವ ಮೂಲಕ ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದಾಗಿದೆ. [ಬಿಬಿಎಂಪಿ ವಿಭಜನೆ ಅನಿವಾರ್ಯ : ಸಮಿತಿ ವರದಿ]

ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಧ್ಯಂತರ ವರದಿಯನ್ನು ಕೆಲವು ದಿನಗಳ ಹಿಂದೆ ಸಲ್ಲಿಕೆ ಮಾಡಿದ್ದು, ಪಾಲಿಕೆ ವಿಭಜನೆ ಅನಿವಾರ್ಯ ಎಂದು ವರದಿಯಲ್ಲಿ ಹೇಳಿದೆ. ಅಂತಿಮ ವರದಿ ನೀಡಲು ಆರು ತಿಂಗಳ ಕಾಲಾವಕಾಶ ಕೋರಿದೆ. [ಪಾಲಿಕೆ ವಿಭಜನೆ, ಮೇಯರ್ ಹೇಳುವುದೇನು?]
ತ್ರಿ ಸದಸ್ಯರ ಸಮಿತಿಯಲ್ಲಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್, ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ ಹಾಗೂ ಹಿಂದಿನ ಬೆಂಗಳೂರು ಅಜೆಂಡಾ ಟಾಸ್ಕ್ ಪೋರ್ಸ್‌ನ ಸದಸ್ಯ ರವಿಚಂದರ್ ಇದ್ದಾರೆ. ಈ ಸಮಿತಿ ಈಗ ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಮುಂದಾಗಿದೆ.
http://t.co/h7vtW3NWmB - the interactive website on the BBMP restructuring exercise. Do participate in securing Bengaluru's future!
— Bengaluru's Future (@BBMPRestructure) December 26, 2014 2007 ರಲ್ಲಿ 226 ಚ.ಕಿ.ಮೀ ವ್ಯಾಪ್ತಿ ಹಾಗೂ 65 ಲಕ್ಷ ಜನಸಂಖ್ಯೆ ಹೊಂದಿದ್ದ ಬೆಂಗಳೂರು ಏಳು ಪುರಸಭೆಗಳು, ಒಂದು ಪಟ್ಟಣ ಪಂಚಾಯಿತಿ ಹಾಗೂ 110 ಹಳ್ಳಿಗಳ ಸೇರ್ಪಡೆಯಿಂದ 800 ಚ.ಕಿ.ಮೀ ವ್ಯಾಪ್ತಿ ಹಾಗೂ 1 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿರುವ ನಗರವಾಗಿದೆ.
ಆದ್ದರಿಂದ ನಗರಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಹಾಗೂ ಪರಿಣಾಮಕಾರಿ ಆಡಳಿತ ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವುದು ಅನಿವಾರ್ಯ ಎಂದು ಸಮಿತಿ ಮಧ್ಯಂತರ ವರದಿಯಲ್ಲಿ ಹೇಳಿದೆ. ನೀವು ನಿಮ್ಮ ಅಭಿಪ್ರಾಯವನ್ನು ತಿಳಿಸಿ.












Click it and Unblock the Notifications