ಲೈಂಗಿಕ ದೌರ್ಜನ್ಯ ಪ್ರಕರಣ: ಬಾಲ ಮಂಜುನಾಥ್ ಸ್ವಾಮೀಜಿಗೆ ಮನೆ ಊಟಕ್ಕೆ ಹೈಕೋರ್ಟ್ ಅಸ್ತು
ಬೆಂಗಳೂರು, ಮೇ 10: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ತುಮಕೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಬಾಲ ಮಂಜುನಾಥ ಅವರಿಗೆ ಮಠದಿಂದ ಖಾಸಗಿ / ಮನೆ ಊಟ ಹಾಗೂ ಹಾಸಿಗೆ ಪೂರೈಕೆಗೆ ಹೈಕೋರ್ಟ್ ಅನುಮತಿಸಿದೆ.
ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿ ಹಂಗರಹಳ್ಳಿ ಗ್ರಾಮದ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ (ಶ್ರೀಮಠದ) ಪೀಠಾಧಿಪತಿ ಬಾಲ ಮಂಜುನಾಥ ಅವರಿಗೆ ಮಠದಿಂದ ಖಾಸಗಿ ಅಥವಾ ಮನೆ ಊಟ ಹಾಗೂ ಹಾಸಿಗೆ ಪೂರೈಕೆ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ.

ಹಾಗಾಗಿ ಇನ್ನು ಮುಂದೆ ಸ್ವಾಮೀಜಿಗೆ ಮನೆ ಊಟ ಸಿಗುವುದು ಖಾತ್ರಿ ಆಗಲಿದೆ. ಅದರೆ ನ್ಯಾಯಾಲಯ ಕೆಲವೊಂದು ಷರತ್ತುಗಳನ್ನು ಹಾಕಿದ್ದು, ಅವುಗಳನ್ನು ಪಾಲಿಸಲೇಬೇಕು, ಇಲ್ಲವಾದರೆ ಪೊಲೀಸರು ಆದೇಶ ಮಾರ್ಪಾಡಿಗೆ ಮನವಿ ಸಲ್ಲಿಸಬಹುದಾಗಿದೆ.
ಬಾಲ ಮಂಜುನಾಥ ಸ್ವಾಮೀಜಿ ತಮಗೆ ಮಠದಿಂದ ಖಾಸಗಿ / ಮನೆ ಊಟ ಹಾಗೂ ಹಾಸಿಗೆ ಪೂರೈಕೆಗೆ ಅನುಮತಿ ನೀಡುವಂತೆ ತುಮಕೂರು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಪೀಠ ಈ ನಿರ್ದೇಶನ ನೀಡಿದೆ.
ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಅರ್ಜಿದಾರರು ತಮ್ಮ ರಿಸ್ಕ್‌ನಲ್ಲಿ ಮಠದಿಂದ ಖಾಸಗಿ / ಮನೆ ಊಟವನ್ನು ತರಿಸಿಕೊಳ್ಳಬಹುದು. ಅದನ್ನು ಜೈಲು ಅಧಿಕಾರಿಗಳು ಪರೀಕ್ಷೆ ಮಾಡಬೇಕು. ನಂತರವೇ ಅರ್ಜಿದಾರರು ಸೇವನೆಗೆ ಅವಕಾಶ ಕಲ್ಪಿಸಬೇಕು. ಇನ್ನೂ ಅರ್ಜಿದಾರರ ತಮ್ಮದೇ ಆದ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ತುಮಕೂರು ಕಾರಾಗೃಹ ಅಧೀಕ್ಷಕರಿಗೆ ನ್ಯಾಯಪೀಠ ಸೂಚಿಸಿದೆ. ಜತೆಗೆ, ಅಗತ್ಯವಿದ್ದರೆ ಈ ಆದೇಶ ಮಾರ್ಪಾಡಿಗೆ ಜೈಲು ಅಧಿಕಾರಿಗಳು ನ್ಯಾಯಾಲಯವನ್ನು ಕೋರಬಹುದು ಎಂದು ಆದೇಶಿಸಿದೆ.
ಏನಿದು ಪ್ರಕರಣ?
ಬಾಲ ಮಂಜುನಾಥ ಸ್ವಾಮೀಜಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆಯೊಬ್ಬರು 2024ರ ಮಾರಚ್ 7 ರಂದು ಹುಲಿಯೂರುದುರ್ಗ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯವು ಸ್ವಾಮೀಜಿಯನ್ನು ಮಾರ್ಚ್ 14ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಸದ್ಯ ತುಮಕೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸ್ವಾಮೀಜಿ, ಜೈಲಿನಲ್ಲಿ ಪೂರೈಸುವ ಊಟ ತಮಗೆ ಸರಿಹೊಂದುತ್ತಿಲ್ಲ. ಇದರಿಂದ ಮಠದಿಂದ ಖಾಸಗಿ / ಮನೆ ಊಟ, ಹಾಸಿಗೆ ತರಿಸಿಕೊಳ್ಳಲು ತಮಗೆ ಅನುಮತಿ ನೀಡುವಂತೆ ಜೈಲಾಧಿಕಾರಿಗಳಿಗೆ ಕೋರಿದ್ದರು. ಅದಕ್ಕೆ ಜೈಲಾಧಿಕಾರಿಗಳು ಸಮ್ಮಿತಿಸದಕ್ಕೆ ಸ್ವಾಮೀಜಿ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications