ಕಿರುತೆರೆ ನಟಿ ಸವಿ ಮಾದಪ್ಪ ಆತ್ಮಹತ್ಯೆಗೆ ರೋಚಕ ಟ್ವಿಸ್ಟ್ : ಕಿರುಕುಳ ಕೊಟ್ಟ ನಟ ಯಾರು?
ಬೆಂಗಳೂರು, ಸೆ. 30: ಕಿರುತೆರೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಅವರ ಆತ್ಮಹತ್ಯೆ ಪ್ರಕರಣಕ್ಕೆ ಗರುವಾರ ರಾತ್ರಿ ಸ್ಫೋಟಕ ತಿರುವು ಸಿಕ್ಕಿದೆ. ಕನ್ನಡ ಹಾಗೂ ತೆಲುಗು ಕಿರುತೆರೆ ನಟನೊಬ್ಬನ ಕಿರುಕುಳವೇ ನನ್ನ ಮಗಳ ಆತ್ಮಹತ್ಯೆಗೆ ಕಾರಣ ಎಂದು ಸೌಜನ್ಯಾ ಅವರ ತಂದೆ ಮಾದಪ್ಪ ಕುಂಬಳಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಕಿರುತೆರೆ ನಟ ಯಾರು? ಆತನ ವಿರುದ್ಧ ಮೃತಳ ತಂದೆ ದೂರು ನೀಡಿದ ಕಾರಣ ಏನು ಎಂಬುದನ್ನು ಮುಂದೆ ಓದಿ.
ಇಂದು ಬೆಳಗ್ಗೆ ಕುಂಬಳಗೋಡು ಸಮೀಪದ ದೊಡ್ಡಬೆಲೆ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಕಿರುತೆರೆ ನಟಿ ಸವಿತಾ ಅಲಿಯಾಸ್ ಸವಿ ಮಾದಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡಗು ಮೂಲದ ಸವಿತಾ ಆತ್ಮಹತ್ಯೆಗೂ ಮುನ್ನ ನಾಲ್ಕು ಪುಟದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಳು. ತನ್ನ ತಂದೆ ಹಾಗೂ ತಾಯಿಯನ್ನು ಪದೇ ಪದೇ ನೆನಪಿಸಿಕೊಂಡು "ನಾನು ಊರಿಗೆ ಬರುತ್ತಿದ್ದೇನೆ ಮಮ್ಮಿ, ಆದರೆ ಈ ರೀತಿ ಅಂತ ಊಹಿಸಿರಲಿಲ್ಲ" ಎಂಬ ಮಾರ್ಮಿಕ ಪದಗಳಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಳು.
ಸವಿ ಮಾದಪ್ಪ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂಬುದು ಆಕೆ ಬರೆದಿಟ್ಟಿದ್ದ ಡೆತ್ ನೋಟ್‌ನಿಂದ ಬೆಳಕಿಗೆ ಬಂದಿತ್ತು. ಆಕೆ ನಟಿಸಿದ್ದ ಎರಡು ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಈ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಸೌಜನ್ಯ ಅವರ ತಂದೆ ದೂರು ನೀಡುವ ಮೂಲಕ ಸ್ಫೋಟಕ ತಿರುವು ನೀಡಿದ್ದಾರೆ.

ಆ ಕಿರುತೆರೆ ನಟನ ವಿರುದ್ಧ ದೂರು: ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ನನ್ನ ಮಗಳಿಗೆ ಕನ್ನಡ ಮತ್ತು ತೆಲುಗಿನ ಕಿರುತೆರೆ ನಟನೊಬ್ಬ ಪರಿಚಯವಿದ್ದ. ಮದುವೆಯಾಗುವಂತೆ ಪದೇ ಪದೇ ಕಿರುಕುಳ ನಿಡುತ್ತಿದ್ದ. ಈ ವಿಚಾರವನ್ನು ನನ್ನ ಬಳಿ ಹೇಳಿಕೊಂಡಿದ್ದಳು. ನಮಗೆ ಈ ಬಣ್ಣದ ಲೋಕವೇ ಬೇಡ ಬಂದು ಬಿಡಮ್ಮ ಎಂದೇ ಹೇಳಿದ್ದೆವು. ಆದರೆ ಮಗಳು ಏನಾದರೂ ಸಾಧನೆ ಮಾಡಬೇಕೆಂಬ ಪಣ ತೊಟ್ಟಿದ್ದಳು. ನನ್ನ ಮಗಳಿಗೆ ಪದೇ ಪದೇ ಆ ಕಿರುತೆರೆ ನಟ ಕಿರುಕುಳ ನೀಡುತ್ತಿದ್ದು, ಇಂದು ಬೆಳಗ್ಗೆ ಸಹ ಆತ ಮನೆಗೆ ಬಂದು ಕಿರುಕುಳ ನೀಡಿರುವ ಸಾಧ್ಯತೆಯಿದೆ. ಆದ್ದರಿಂದಲೇ ನನ್ನ ಮಗಳು ಸಾಯುವ ತೀರ್ಮಾನ ಕೈಗೊಂಡಿದ್ದಾಳೆ.
ಕಿರುತೆರೆ ನಟ ಹಾಗೂ ನನ್ನ ಮಗಳ ಆಪ್ತ ಸಹಾಯಕನಾಗಿದ್ದ ಮಹೇಶ್‌ನನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸವಿ ಮಾದಪ್ಪ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಈ ಕಿರುತೆರೆ ನಟನ ಹೆಸರನ್ನು ಸದ್ಯಕ್ಕೆ ಪೊಲೀಸರು ಬಹಿರಂಗಪಡಿಸಿಲ್ಲ.
ಮೃತ ಸೌಜನ್ಯಾ ಅವರ ಮರಣೋತ್ತರ ಪರೀಕ್ಷೆ ರಾಜರಾಜೇಶ್ವರಿನಗರ ಆಸ್ಪತ್ರೆಯಲ್ಲಿ ಶುಕ್ರವಾರ ನಡೆಯಲಿದ್ದು, ಆ ಬಳಿಕ ಪೋಷಕರಿಗೆ ಒಪ್ಪಿಸಲಾಗುತ್ತದೆ. ಮೃತಳ ಅಂತ್ಯ ಸಂಸ್ಕಾರವಾದ ಬಳಿಕ ಸವಿ ಮಾದಪ್ಪ ದೂರನ್ನು ಆಧರಿಸಿ ಸೌಜನ್ಯಗೆ ಕಿರುಕುಳ ನೀಡುತ್ತಿದ್ದಾನೆ ಎನ್ನಲಾದ ಕಿರುತೆರೆ ನಟನನ್ನು ಕುಂಬಳಗೋಡು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.

ಎರಡು ಸಿನಿಮಾ ಬಿಡುಗಡೆ ಅಗಲಿಲ್ಲ: ಸವಿ ಮಾದಪ್ಪ ಕಲಾವಿದೆಯಾಗಿ ಹೆಸರು ಮಾಡಲು ಮುಂದಾಗಿದ್ದಳು. ಆಕೆ ನಟನೆ ಮಾಡಿದ್ದ ಎರಡು ಸಿನಿಮಾಗಳ ಶೂಟಿಂಗ್ ಮುಕ್ತಾಯವಾಗಿ ಎರಡು ವರ್ಷಗಳೇ ಕಳೆದು ಹೋದವು. ಆದರೆ ಸಿನಿಮಾಗಳು ಮಾತ್ರ ಬಿಡುಗಡೆಯಾಗಲೇ ಇಲ್ಲ. ಈ ಬಗ್ಗೆ ತನ್ನ ಆಪ್ತರ ಬಳಿ ಹೇಳಿಕೊಂಡಿದ್ದಳು. ಸಿನಿಮಾ ಬಿಡಗಡೆಯಾಗದಿದ್ದಕ್ಕೆ ಖಿನ್ನತೆಗೆ ಒಳಗಾಗಿದ್ದಳು ಎಂಬುದು ಅವರ ಅಪ್ತರಿಂದ ಹೊರ ಬಿದ್ದಿರುವ ವಿಚಾರ.
ಮುಗಿಲು ಮುಟ್ಟಿದ ಆಕ್ರಂದನ: ಕುಶಾಲನಗರದ ಸವಿ ಮಾದಪ್ಪ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ಸೌಜನ್ಯ ಕುಟುಂಬಸ್ಥರು ಆಗಮಿಸಿದ್ದು, ಮಗಳ ದೇಹ ನೋಡಿದ ಕೂಡಲೇ ಆಕೆಯ ತಾಯಿ ಅಸ್ವಸ್ಥಗೊಂಡು ಕುಸಿದು ಬಿದ್ದರು. ಕೂಡಲೇ ಅವರನ್ನು ಹೊರಗೆ ಕರೆದುಕೊಂಡು ಬಂದು ಸಾಂತ್ವನ ಹೇಳಿದರು. ಇಂದೇ ಮರಣೋತ್ತರ ಪರಕ್ಷೆ ಮುಗಿಸಿ ಕೊಡುವಂತೆ ಪೋಷಕರು ಮನವಿ ಮಾಡಿದ್ದಾರೆ. ಕುಂಬಳಗೋಡು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications