ನೆಲಮಂಗಲ ಸಮೀಪ ಸರಣಿ ಅಪಘಾತ: ಮೂರು ಲಾರಿ ಸೇರಿ 9 ವಾಹನ ಜಖಂ
ಬೆಂಗಳೂರು, ಡಿ. 30: ರಸ್ತೆಗೆ ಅಡ್ಡ ಬಂದ ಪಾದಚಾರಿಯನ್ನು ರಕ್ಷಿಸಲು ಹೋಗಿ ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಒಂಭತ್ತು ವಾಹನಗಳು ಜಖಂ ಆಗಿವೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಆಗಿರುವ ಬಗ್ಗೆ ವರದಿಯಾಗಿಲ್ಲ. ಬೆಳಗ್ಗೆ ರಸ್ತೆಯಲ್ಲಿ ಮಂಜು ಕವಿದಿದ್ದರಿಂದ ಈ ಸರಣಿ ಅಪಘಾತ ಸಂಭವಿಸಿದೆ.
ಈಚರ್ ವಾಹನ ಚಾಲಕ ಮತ್ತು ಪಶ್ಚಿಮ ಬಂಗಾಳ ಮೂಲದ ಮಹಿಳೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ನೆಲಮಂಗಲದ ಟಿ. ಬೇಗೂರು ಸಮೀಪ ಗುರುವಾರ ಬೆಳಗ್ಗೆ ಈ ಅವಘಡ ನಡೆದದೆ. ಈ ಸರಣಿ ಅಫಘಾತದಲ್ಲಿ ಮೂರು ಲಾರಿ, ಎರಡು ಬಸ್ ಹಾಗೂ ಒಂದು ಬೊಲೆರೋ , ಈಚರ್ ಸೇರಿದಂತೆ ಒಟ್ಟು 9 ವಾಹನ ಜಖಂ ಆಗಿವೆ. ಕ್ರೇನ್ ತರಿಸಿ ಅಪಘಾತಕ್ಕೆ ಒಳಗಾಗಿದ್ದ ವಾಹನಗಳನ್ನು ತೆರವುಗೊಳಿಸಲಾಗಿದೆ.
ಈ ಅವಘಡದಿಂದ ಸುಮಾರು ನಾಲ್ಕು ಕಿ.ಮೀ.ವರೆಗೂ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ವಾಹನಗಳು ಗಂಟೆಗಟ್ಟಲೇ ರಸ್ತೆ ಮೇಲೆ ಸರದಿ ಸಾಲಲ್ಲಿ ನಿಂತಿವೆ. ನೆಲಮಂಗಲ ಸಂಚಾರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ವಾಹನಗಳ ತೆರವು ಕಾರ್ಯಾಚರಣೆ ಮಾಡಿದ್ದಾರೆ.

ಸರಣಿ ಅಪಘಾತದಲ್ಲಿ ಪಶ್ಚಿಮ ಬಂಗಾಳ ಮೂಲದ ರಾಧಿಕಾ ಎಂಬಾಕೆ ಗಂಭೀರ ಗಾಯಗೊಂಡಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ರೀತಿ ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಿನ ಜಾವ ನಡೆದಿದ್ದೇನು?
ಗುರುವಾರ ಬೆಳಗಿನ ಜಾವ ಮಂಜು ಕವಿದಿದ್ದರಿಂದ ರಸ್ತೆ ಕಾಣುತ್ತಿರಲಿಲ್ಲ. ಈ ವೇಳೆ ಪಾದಚಾರಿಯೊಬ್ಬ ಲಾರಿಗೆ ಅಡ್ಡ ಬಂದಿದ್ದು, ಅದನ್ನು ತಪ್ಪಿಸುವ ಸಲುವಾಗಿ ಲಾರಿ ಚಾಲಕ ಯತ್ನಿಸಿದ್ದಾನೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಸುಮಾರು 9 ವಾಹನ ಜಖಂಗೊಂಡಿವೆ. ಲಾರಿಯೊಳಗೆ ಖಾಸಗಿ ಬಸ್ ತೂರಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಒಂದಕ್ಕೊಂದು ಜಖಂಗೊಂಡಿದ್ದ ವಾಹನಗಳ್ನು ಕ್ರೇನ್ ಮೂಲಕ ಬಿಡಿಸಲಾಗಿದೆ. ಈ ಘಟನೆ ವೇಳೆ ಈರುಳ್ಳಿ ಲಾರಿಯ ಅಪ್ಪಳಿಸಿ ಬಿದ್ದಿದೆ. ಈಚರ್ ವಾಹನದ ಚಾಲಕ ದುರ್ಗಪ್ಪ ಕಾಲಿಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ. ಯಲ್ಲಾಪುರದ ಮೂಕಾಂಬಿಕಾ, ಜಾರ್ಖಂಡ್ ಮೂಲದ ಶಿವನಾಥ್ ಮಾಥುರ್ಗೆ ಸಣ್ಣಪುಟ್ಟ ಪುಟ್ಟ ಗಾಯಗಳಾಗಿವೆ.

ಜನರ ಪರದಾಟ:
ಇನ್ನು ಸುಮಾರು ನಾಲ್ಕು ತಾಸು ಟ್ರಾಫಿಕ್ ಜಾಮ್ ಅಗಿತ್ತು. ಕೆಲಸಕ್ಕೆ ತೆರಳುವರು ರಸ್ತೆಯಲ್ಲಿಯೇ ಪರದಾಡುವಂತಾಗಿದೆ. ಮಂಜು ಕವಿದಿದ್ದ ಕಾರಣ ರಸ್ತೆಯಲ್ಲಿ ಏನೂ ಕಾಣುತ್ತಿರಲಿಲ್ಲ. ಈ ವೇಳೆ ಲಾರಿ ಚಾಲಕ ಪಾದಚಾರಿ ತಪ್ಪಿಸಲು ಹೋಗಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಆ ನಂತರ ಸರಣಿ ಅಪಘಾತ ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ. ಈ ಕುರಿತು ನೆಲಮಂಗಲ ಸಂಚಾರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications