ಸೆಲ್ಫಿ ತಂದ ಅವಾಂತರ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು!
ಬೆಂಗಳೂರು, ಏಪ್ರಿಲ್ 10; ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಸರ್ಕಾರಿ ನೌಕರರು, ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಕಾರ್ಯದಲ್ಲಿರುವ ಸರ್ಕಾರಿ ನೌಕರರು, ಸಿಬ್ಬಂದಿಗಳಿಗೆ ಹಲವು ನಿಯಮಗಳಿವೆ. ಅವುಗಳನ್ನು ಅವರು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಂಡು ಅಮಾನತು ಮಾಡುವ ಅವಕಾಶಗಳು ಹಿರಿಯ ಅಧಕಾರಿಗಳಿಗೆ ಇದೆ. ರಾಜಕೀಯ ಪಕ್ಷದ ಪ್ರತಿನಿಧಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ನೌಕರರೊಬ್ಬರು ಈಗ ಅಮಾನತುಗೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್. ಲತಾ ಲೆಕ್ಕ ವಿಚಕ್ಷಣ ತಂಡದ ಮುಖ್ಯಸ್ಥರಾದ ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಕ ಅಂಜನ್ ಕುಮಾರ್ ಬಿ. ಜೆ. ಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ. ಚುನಾವಣೆ ಸಂಬಂಧ ಅಂಜನ್ ಕುಮಾರ್ ಬಿ. ಜೆ. ನೆಲಮಂಗಲದ ಸೋಲೂರು ಹೋಬಳಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ಎಸ್. ಎಸ್. ಟಿ ತಂಡದ ಮುಖ್ಯಸ್ಥರಾಗಿ ನೇಮಿಸಲಾಗಿತ್ತು.
ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸುವ ಸಮಯದಲ್ಲಿ ಅಂಜನ್ ಕುಮಾರ್ ಬಿ. ಜೆ. ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಅಡಿ ಶಿಸ್ತು ಕ್ರಮ ಕೈಗೊಳ್ಳಲು 181-ನೆಲಮಂಗಲ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ವರದಿ ಪರಿಶೀಲಿಸಿ ಅಮಾನತು ಪಡಿಸಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.

ಧಾರವಾಡದಲ್ಲಿಯೂ ಅಮಾನತು; ಧಾರವಾಡದಲ್ಲಿಯೂ ಭಾನುವಾರ ಸರ್ಕಾರಿ ನೌಕರೊಬ್ಬರನ್ನು ಚುನಾವಣಾ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿತ್ತು. ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಕೂಬಳ್ಳಿ ಅಮಾನತುಗೊಂಡವರು. ನವಲಗುಂದ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಅವರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಚುನಾವಣಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಿಯೋಜಿತ ಕೆಲಸ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ, ಶೋಕಾಸ್ ನೋಟಿಸ್‌ಗೆ ನಿರ್ಲಕ್ಷ್ಯ ದ ಉತ್ತರ ನೀಡಿರುವುದು, ಚುನಾವಾಣಾ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ ಹೆಸ್ಕಾಂ ಕಾರ್ಪೋರೇಟ್ ಕಚೇರಿ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಕೂಬಳ್ಳಿಗೆ ಅಪ್ಲಿಕೇಶನ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಪ್ರತಿನಿತ್ಯ ಸದರಿ ತಂತ್ರಾಂಶದ ಮೂಲಕ ಸ್ವೀಕೃತವಾಗುವ ದೂರುಗಳನ್ನು ನಿರ್ವಹಿಸುವಂತೆ ಸೂಚಿಸಲಾಗಿತ್ತು. ಅವರು ವಹಿಸಿದ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಛೇರಿಯಿಂದ ಕಾರಣ ಕೇಳಿ ನೀಡಿದ ನೋಟಿಸ್‌ಗೆ ಅಸಂಭದ್ದ ಹೇಳಿಕೆ ನೀಡಿದ್ದಲ್ಲದೇ ಅನಾವಶ್ಯಕ ಪತ್ರ ವ್ಯವಹಾರ ಮಾಡಿದ್ದರು.
ಚುನಾವಣೆಯಂತಹ ಮಹತ್ತರ ಕಾರ್ಯದಲ್ಲಿ ಅಧಿಕಾರಿಯು ಬೇಜವಾಬ್ದಾರಿತನ, ಅವಿಧೇಯತೆ ಹಾಗೂ ಸರಕಾರಿ ನೌಕರನಿಗೆ ಸಲ್ಲದ ರೀತಿಯಲ್ಲಿ ನಡೆದು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021 3ನೇ ನಿಯಮದ (1) ನೇ ಉಪನಿಯಮದ ಖಂಡಗಳನ್ನು ಉಲ್ಲಂಘಿಸಿದ್ದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957 ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ, 1951 ರಡಿ ಕಲ್ಪಿಸಿದ ಅವಕಾಶಗಳ ಮೇರೆಗೆ ಶಿಸ್ತು ಕ್ರಮ ಜರುಗಿಸುವ ಉದ್ದೇಶದಿಂದ ತಕ್ಷಣ ಅಮಾನತ್ತುಗೊಳಿಸಿ ಆದೇಶ ಮಾಡಲಾಗಿದೆ.












Click it and Unblock the Notifications