ಬಿಬಿಎಂಪಿ 14ಲಕ್ಷ ಹಣ ಪ್ರೇಯಸಿ ಖಾತೆಗೆ ಜಮೆ ಮಾಡಿದ್ದ ಎಸ್‌ಡಿಎ ಅಧಿಕಾರಿ
ಬೆಂಗಳೂರು ಆಗಸ್ಟ್ 24: ಪ್ರೇಯಸಿಯ ಅಗತ್ಯತೆ ಪೂರೈಸುವ ಸಲುವಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಿದ್ದ ಹಣವನ್ನು ಪ್ರೇಯಸಿಯ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದ ಬಿಬಿಎಂಪಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹಾಗೂ ಮತ್ತವನ ಪ್ರೇಯಸಿಯನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ.
ಬೆಂಗಳೂರಿನ ಥಣಿಸಂದ್ರದ ಎಕೆ ಕಾಲೋನಿಯ ನಿವಾಸಿ ಮತ್ತು ಎಸ್‌ಡಿಎ ಅಧಿಕಾರಿ ಎಂ.ಕೆ.ಪ್ರಕಾಶ್ (39) ಹಾಗೂ ಯಲಹಂಕ ಉಪನಗರದ ಬ್ಯೂಟಿಷಿಯನ್ ಆದ ಕಾಂಚನಾ (30) ಎಂಬುವವರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಪ್ರಕಾಶ್, ಬಿಬಿಎಂಪಿ ಯಲಹಂಕ ವಲಯ ಬ್ಯಾಟರಾಯನಪುರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಆಗಿ ಕೆಲಸ ಮಾಡುತ್ತಿದ್ದ. ಈತ 2021-22ನೇ ಸಾಲಿನಲ್ಲಿ ಪಾಲಿಕೆಯ ಒಟ್ಟು 14.07 ರೂ. ಹಣವನ್ನು ಪ್ರಕಾಶ್ ದುರುಪಯೋಗ ಮಾಡಿಕೊಂಡಿರುವುದಾಗಿ ಗೊತ್ತಾಗಿದೆ.
ಈ ಬಗ್ಗೆ ಪರಿಶೀಲಿಸಿದ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ (ವಿದ್ಯುತ್ ವಿಭಾಗ) ರಾಜೇಂದ್ರ ನಾಯ್ಕ್ ಅವರು ನೀಡಿದ ದೂರು ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಿದ್ದಾರೆ.

ಪಾಲಿಕೆ ಹಣದಲ್ಲಿ ಚಿನ್ನಾಭರಣ ಖರೀದಿ
ಬಂಧಿತ ಅಧಿಕಾರಿ ಪ್ರಕಾಶ್ ಯಲಹಂಕ ವಲಯ ವ್ಯಾಪ್ತಿಯ ವಾರ್ಡ್ ನಲ್ಲಿ ನಡೆಯುತ್ತಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ತನ್ನ ಮೇಲಾಧಿಕಾರಿಗಳ ಸಹಿ ಹಾಗೂ ಒಪ್ಪಿಗೆ ಪಡೆದು ಗುತ್ತಿಗೆದಾರರಿಗೆ ಚೆಕ್ ಅಥವಾ ಆರ್‌ಟಿಜಿಎಸ್ ಮುಖಾಂತರ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಆ ಹಣವನ್ನು ಗುತ್ತಿಗೆದಾರರಿಗೆ ನೀಡದೇ ತನ್ನ ಪ್ರೇಯಸಿ ಖಾತೆಗೆ ಜಮೆ ಮಾಡಿದ್ದ. ಸದ್ಯ ಹಣ ಜಮೆ ಮಾಡಿಸಿಕೊಂಡ ಪ್ರಕಾಶ್ ಪ್ರೇಯಸಿ ಕಾಂಚನಾ ಆ ಹಣದಲ್ಲಿ ಚಿನ್ನಾಭರಣಗಳನ್ನು ಖರೀದಿಸಿದ್ದಾಳೆ. ಜತೆಗೆ ಇಬ್ಬರು ಹಣವನ್ನು ಮೋಜು ಮಸ್ತಿಗಾಗಿ ಬಳಸಿಕೊಂಡಿದ್ದಾರೆ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.

ಪಾಲಿಕೆ 14.07 ಲಕ್ಷ ದುರ್ಬಳಕೆ
ಆರೋಪಿ ಪ್ರಕಾಶ್‌ಗೆ ಇತ್ತೀಚೆಗಷ್ಟೇ ಬ್ಯೂಟಿಶಿಯನ್ ಕಾಂಚನಾ ಪರಿಚಯವಾಗಿತ್ತು. ನಂತರ ಇಬ್ಬರು ಆಪ್ತರಾಗಿದ್ದರು. ಹೀಗಾಗಿ ಆಕೆಯ ಚಿನ್ನದ ಮೋಹ ತಣಿಸಲು, ಖರ್ಚು ವೆಚ್ಚ ಸರಿದೂಗಿಸಲು ಬಿಬಿಎಂಪಿ ಬ್ಯಾಂಕ್ ಖಾತೆಯಿಂದ ಚೆಕ್ ಅಥವಾ ಆರ್‌ಟಿಜಿಎಸ್‌ನಲ್ಲಿ ಹಣ ಪಾವತಿಸುವಾಗ ಪ್ರಕಾಶ್ ಪ್ರೇಯಸಿ ಕಾಂಚನಾಳ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದದ್ದು. ಆದರೆ ಪಾಲಿಕೆ ದಾಖಲೆಗಳಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ ಎಂದು ನಮೂದಿಸುತ್ತಿದ್ದ. 2021ರ ನವೆಂಬರ್‌ನಿಂದ ಈವರೆಗೆ ಪ್ರಕಾಶ್ ಇದೇ ರೀತಿ ಮಾಡಿದ್ದಾನೆ. ಒಟ್ಟು 14.07 ಲಕ್ಷ ಪಾಲಿಕೆ ಹಣ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ?
ಬಿಬಿಎಂಪಿಯ ಹಿರಿಯ ಅಧಿಕಾರಿಗಳಿಗೆ ಕಳೆದ ಜುಲೈನಲ್ಲಿ ಲೆಕ್ಕಪರಿಶೋಧನೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಆರೋಪಿ ಪ್ರಕಾಶ್ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಕೆಲಸಕ್ಕೆ ದಿಢೀರ್ ಗೈರಾಗಿದ್ದ. ಲೆಕ್ಕ ಪರಿಶೋಧನೆ ವೇಳೆ ಕೆಲವು ಲೆಕ್ಕಪತ್ರಗಳು ಹೊಂದಾಣಿಕೆಯಾಗಿಲ್ಲ. ಈ ಬಗ್ಗೆ ಅನುಮಾಗೊಂಡ ಹಿರಿಯ ಅಧಿಕಾರಿಗಳು ಬಿಬಿಎಂಪಿಯ ಬ್ಯಾಂಕ್ ಖಾತೆಯ ಹಣದ ವಿವರ (ಸ್ಟೇಟ್‌ಮೆಂಟ್) ತೆಗೆದು ನೋಡಿದ್ದಾರೆ. ಆಗ ಅಪರಿಚಿತ ಖಾತೆಗಳಿಗೆ ಬಿಬಿಎಂಪಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ.

ತಪ್ಪೊಪ್ಪಿಕೊಂಡ ಆರೋಪಿಗಳು
ಕೂಡಲೇ ಅಧಿಕಾರಿಗಳು ಎಸ್‌ಡಿಎ ಪ್ರಕಾಶ್‌ನನ್ನು ವಿಚಾರಿಸಲು ಮೊಬೈಲ್‌ಗೆ ಕರೆ ಮಾಡಿದರೂ ಆತ ಸ್ವೀಕರಿಸಿಲ್ಲ. ಪ್ರಕಾಶ್ ವರ್ತನೆ ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಹಿನ್ನೆಲೆ ಆತನ ವಿರುದ್ಧ ಪೊಲೀಸರು ದೂರು ದಾಖಲಿಸಲಾಗಿದೆ. ಈ ದೂರಿನ ಮೇರೆಗೆ ಅಮೃತಹಳ್ಳಿ ಪೊಲೀಸ್ ಅಧಿಕಾರಿಗಳು ಪಾಲಿಕೆ ಹಣ ದುರ್ಬಳಕೆ ಮಾಡಿಕೊಂಡ ಪ್ರಕಾಶ್ ಹಾಗೂ ಇದಕ್ಕೆ ಕಾರಣರಾದ ಆತನ ಪ್ರೇಯಸಿ ಕಾಂಚನಾಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಹಣ ದುರ್ಬಳಕೆ ಮಾಡಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.












Click it and Unblock the Notifications