Save Bannerghatta: ಬಂಡೀಪುರ ಉಳಿಸಿ ಅಭಿಯಾನದ ಬೆನ್ನಲ್ಲೇ ಬನ್ನೇರುಘಟ್ಟ ಉಳಿಸಿ ಕೂಗು, ಏನಿದು ವಿಷಯ?
ಬೆಂಗಳೂರು, ಫೆಬ್ರವರಿ. 05: ನೆರೆಯ ಕೇರಳದ ನೀಲಾಂಬುರ್ ಮತ್ತು ನಂಜನಗೂಡಿಗೆ ವಯನಾಡಿನ ಮೂಲಕ ರೈಲು ಸಂಪರ್ಕ ಕಲ್ಪಿಸುವ ನೀಲಾಂಬುರ್ - ನಂಜನಗೂಡು ರೈಲ್ವೆ ಯೋಜನೆಗೆ ವೈಮಾನಿಕ ಸಮೀಕ್ಷೆ ಪೂರ್ಣಗೊಂಡ ಬೆನ್ನಲ್ಲೇ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದು 'ಬಂಡೀಪುರ ಉಳಿಸಿ' ಎಂಬ ಅಭಿಯಾನಕ್ಕೆ ನಾಂದಿ ಹಾಡಿದೆ. ಈಗ ಪರಿಸರವಾದಿಗಳು ಮತ್ತೊಂದು ಅಭಿಯಾನಕ್ಕೆ ಕರೆ ನೀಡಿದ್ದಾರೆ. ಅದೇ 'ಬನ್ನೇರುಘಟ್ಟ ಉಳಿಸಿ' ಅಭಿಯಾನ.
ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯದೊಳಗೆ (ಬಿಎನ್‌ಪಿ) ಆರು ಪಥಗಳ ಎಲಿವೇಟೆಡ್ ಹೆದ್ದಾರಿಯನ್ನು ನಿರ್ಮಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಸ್ತಾಪಿಸಿದೆ. ಇದು ಸ್ಯಾಟಲೈಟ್ ಟೌನ್‌ಶಿಪ್ ರಿಂಗ್ ರಸ್ತೆಯ (ಎಸ್‌ಟಿಆರ್‌ಆರ್) ಭಾಗವಾಗಿರುವ ಈ ಯೋಜನೆಯು ಬನ್ನೇರುಘಟ್ಟ ಮತ್ತು ಜಿಗಣಿಯನ್ನು ಸಂಪರ್ಕಿಸುವ ಅಸ್ತಿತ್ವದಲ್ಲಿರುವ ರಸ್ತೆಯ 3.85 ಕಿ.ಮೀ ಸ್ಟ್ರೇಷ್ ಆಗಿದೆ.

ಬನ್ನೇರುಘಟ್ಟ ಮತ್ತು ಜಿಗಣಿಯನ್ನು ಸಂಪರ್ಕಿಸುವ ಈ ಆರು ಪಥದ ಫ್ಲೈಓವರ್ ನಿರ್ಮಿಸಲು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 1288 ಮರಗಳನ್ನು ಕಡಿಯಲು ಯೋಜನೆ ರೂಪಿಸಲಾಗಿದೆ. ಹೀಗಾಗಿ ಈ ಪ್ರಸ್ತಾವಿತ 6- ಲೇನ್ ಫ್ಲೈಓವರ್ ಅನ್ನು ನಿಲ್ಲಿಸಿ ಎಂದು ಅಭಿಯಾನ ಆರಂಭವಾಗಿದೆ.
ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ (NBWL) ಅನುಮತಿ ಪಡೆಯಲಾಗಿದೆ. ಈ ಯೋಜನೆಯು ಕೋರ್ ಏರಿಯಾದ 27 ಎಕರೆ 18 ಗುಂಟಾಗಳು ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಫರ್ ಝೋನ್‌ನಲ್ಲಿ 14 ಎಕರೆಗಳ ವಿಸ್ತೀರ್ಣವನ್ನು ಒಳಗೊಂಡಿದೆ. ಆದರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಆನೆ, ಚಿರತೆ, ಹುಲಿ ಮತ್ತು ವಿವಿಧ ಸಸ್ಯಗಳನ್ನು ಒಳಗೊಂಡಂತೆ ಹೆಚ್ಚಿನ ಸಂಖ್ಯೆಯ ಕಾಡು ಪ್ರಾಣಿಗಳಿಗೆ ನೆಲೆಯಾಗಿದೆ.

ಉದ್ದೇಶಿತ ಮೇಲ್ಸೇತುವೆ, ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಆದರೆ, ಇದು ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಅಪಾಯವನ್ನು ಉಂಟುಮಾಡಬಹುದು ಮತ್ತು ಉದ್ಯಾನದಲ್ಲಿ ವಾಸಿಸುವ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನವನ್ನು ಅಡ್ಡಿಪಡಿಸಬಹುದು. ಉದ್ಯಾನವನವು ನಿರ್ಣಾಯಕ ಜೀವವೈವಿಧ್ಯದ ಹಾಟ್‌ಸ್ಪಾಟ್ ಆಗಿದ್ದು, ಏಷ್ಯನ್ ಆನೆಗಳು, ಭಾರತೀಯ ಗೌರ್, ಸಾಂಬಾರ್ ಜಿಂಕೆಗಳಂತಹ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ನೆಲೆ ಒದಗಿಸಿದೆ.
ಉದ್ದೇಶಿತ ಮೇಲ್ಸೇತುವೆಯನ್ನು ಎಚ್ಚರಿಕೆಯಿಂದ ಯೋಜಿಸದಿದ್ದರೆ ಮತ್ತು ಕಾರ್ಯಗತಗೊಳಿಸದಿದ್ದರೆ, ಈ ಅನನ್ಯ ಪರಿಸರ ವ್ಯವಸ್ಥೆಯನ್ನು ಬದಲಾಯಿಸಲಾಗದಂತೆ ಹಾನಿಗೊಳಿಸಬಹುದು, ಇದು ಜೀವವೈವಿಧ್ಯದ ನಷ್ಟ ಮತ್ತು ಪರಿಸರ ಅವನತಿಗಡ ಕಾರಣವಾಗಬಹುದು. ಹೀಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ NHAI ಯ ಯೋಜನೆಗೆ ತುರ್ತಾಗಿ ಅನುಮತಿ ಹಿಂಪಡೆಯಬೇಕು ಮತ್ತು ಈ ಯೋಜನೆ ಮತ್ತು ನಿರ್ಮಾಣವನ್ನು ತಕ್ಷಣವೇ ಸ್ಥಗಿತಗೊಳಿಸಿ ಉದ್ಯಾನವನದ ಪರಿಸರ-ಸೂಕ್ಷ್ಮ ಸ್ವಭಾವ ಮತ್ತು ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳ ಮೇಲೆ ಸಂಭಾವ್ಯ ಪ್ರತಿಕೂಲ ಪರಿಣಾಮಗಳನ್ನು ನಿಲ್ಲಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಲಾಗಿದೆ.












Click it and Unblock the Notifications