• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಕೇತಿ ಸಂಭ್ರಮ : ಗಂಡಿ ಸೀರೆಯ ವೈಭವ, ಒತ್ತುಶಾವಿಗೆ ಮೇಳ

By Prasad
|

ಬೆಂಗಳೂರು, ಜ. 9 : ಸಂಕೇತಿ ಉತ್ಸವಕ್ಕೆ ಬೆಂಗಳೂರು ಸಜ್ಜುಗೊಳ್ಳುತ್ತಿದೆ. ಇದೇ ಜನವರಿ 10 ಶನಿವಾರ ಮತ್ತು 11 ಭಾನುವಾರದಂದು ಬುಲ್ ಟೆಂಪಲ್ ರಸ್ತೆಯ ಮರಾಠಾ ಹಾಸ್ಟೆಲ್ ಆವರಣದಲ್ಲಿ ಈ ಉತ್ಸವ ನಡೆಯಲಿದ್ದು, ಗಂಡಿ ಸೀರೆಯೊಂದಿಗೆ ಮಹಿಳೆಯರು ಕಾಣಿಸಿಕೊಳ್ಳಲಿದ್ದಾರೆ. ಸಂಕೇತಿ ಸಮುದಾಯದವರ ಪ್ರಮುಖ ಆಹಾರ ವೈವಿಧ್ಯವಾದ ಚೋಮಾಯಿ (ಒತ್ತು ಶ್ಯಾವಿಗೆ) ಮತ್ತು ಕೊಳಕಟ್ಟೆ (ಖಾರದ ಕಡುಬು) ಉತ್ಸವದ ಪ್ರಮುಖ ಆಕರ್ಷಣೆಯಾಗಿರಲಿದೆ.

ಸಂಕೇತಿ ಉತ್ಸವವನ್ನು ಆಯೋಜಿಸುತ್ತಿರುವುದು ಬೆಂಗಳೂರು ಸಂಕೇತಿ ಮಹಿಳಾ ಸಮಾಜ ಟ್ರಸ್ಟ್. ಆದರೆ ಈ ಉತ್ಸವದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು. ಸಂಕೇತಿಗಳ ಅಡುಗೆ, ಉಡುಗೆ, ಸಂಸ್ಕೃತಿ, ಸಂಸ್ಕಾರಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಲಿದೆ. ಉತ್ಸವದ ಅಂಗವಾಗಿ ಸಾರ್ವಜನಿಕರಿಗಾಗಿ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 8ರಿಂದ 12 ಮತ್ತು 12ರಿಂದ 16 ವರ್ಷದೊಳಗಿನ ಮಕ್ಕಳಿಗೆ ದೇವರ ನಾಮ, ಕರ್ನಾಟಕ ಸಂಗೀತ ಸ್ಪರ್ಧೆ, ಸಾರ್ವಜನಿಕರಿಗಾಗಿ ದೇವಿ ಅಲಂಕಾರ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಅಲಂಕಾರಿಕ ತೆಂಗಿನಕಾಯಿ ಮತ್ತು ಬೀಸಣಿಗೆ ಸಿದ್ಧಪಡಿಸುವ ಸ್ಪರ್ಧೆ ಇಟ್ಟುಕೊಳ್ಳಲಾಗಿತ್ತು. ಅದರಲ್ಲಿ ಐವರು ಗಂಡಸರೂ ಪಾಲ್ಗೊಂಡಿದ್ದು ವಿಶೇಷ.

ಅಡುಗೆ ಮಾಡುವುದರಲ್ಲಿ ಸಿದ್ಧಹಸ್ತರು : ಸಂಕೇತಿಗಳು ಹಾಸನದ ಆಸುಪಾಸಿನ ಗ್ರಾಮಗಳಲ್ಲಿ ಇದ್ದವರು. ಇದೀಗ ರಾಜ್ಯದ ಎಲ್ಲೆಡೆ ಅವರು ನೆಲೆಸಿದ್ದಾರೆ. ರುಚಿಕಟ್ಟಾಗಿ ಅಡುಗೆ ಮಾಡಿ ಅದರಲ್ಲೂ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡುವುದರಲ್ಲಿ ಸಿದ್ಧ ಹಸ್ತರು. ಹೀಗಾಗಿಯೇ ಸಂಕೇತಿಗಳು ನಡೆಸುವ ಉತ್ಸವ ಎಂದರೆ ಜನರ ಕಿವಿ ನಿಮಿರುತ್ತದೆ. ಚೋಮಾಯಿ, ಕೊಳಕಟ್ಟೆಯಷ್ಟೇ ಅಲ್ಲ, ಇನ್ನೂ ಅನೇಕ ಬಗೆಯ ತಿಂಡಿಗಳ ವೈವಿಧ್ಯವನ್ನು ಈ ಸಂಕೇತಿಗಳಲ್ಲಿ ಕಾಣಲು ಸಾಧ್ಯ. ಸಹಜವಾಗಿಯೇ ಉತ್ಸವದಲ್ಲಿ ಇದೆಲ್ಲವೂ ಇರಲಿದೆ ಎನ್ನುತ್ತಾರೆ ಮಹಿಳಾ ಸಂಘದ ಮ್ಯಾನೇಜಿಂಗ್ ಟ್ರಸ್ಟಿ ಆರ್.ಕೆ.ಗೀತಾಮಣಿ.

ಗಂಡಿ ಸೀರೆಯ ನಾರಿ... : ಗಂಡಿ ಸೀರೆ ಉಟ್ಟುಕೊಂಡ ಸಂಕೇತಿ ಮಹಿಳೆಯರನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಮಹಿಳೆಯ ದೇಹ ಸುತ್ತಿಕೊಂಡ ಸೀರೆ ಯಾವ ಕಾರಣಕ್ಕೂ ಬಿಚ್ಚಿ ಹೋಗಬಾರದು ಎಂಬ ನೆಲೆಯಲ್ಲಿ ಗಂಡಿ ಸೀರೆ ಉಡುವ ಸಂಪ್ರದಾಯ ಬೆಳೆದು ಬಂತಂತೆ. ಗಂಡಿ ಸೀರೆ ಉಡುವುದಕ್ಕೆ ಕನಿಷ್ಠ 9 ಗಜ ಉದ್ದದ ಸೀರೆ ಬೇಕು. ಈಗಿನ 6 ಗಜ ಉದ್ದದ ಸೀರೆಯಲ್ಲಿ ಗಂಡಿ ಸೀರೆ ಉಡಲು ಸಾಧ್ಯವಿಲ್ಲ. 7 ಅಥವಾ 8 ಗಜ ಸೀರೆಯಲ್ಲಿ ಗಂಡಿ ಸೀರೆ ಉಡಬಹುದಾದರೂ ಮುಕ್ತವಾಗಿ ನಡೆದಾಡಲು ಕಷ್ಟವಾಗಬಹುದು, ಆದರೆ 9 ಗಜ ಸೀರೆಯಿಂದ ಗಂಡಿ ಸೀರೆ ಉಟ್ಟುಕೊಂಡರೆ ಓಡುವುದು ಸಹಿತ ಯಾವುದೇ ಬಗೆಯ ಸಾಹಸವನ್ನು ಮಾಡಿತೋರಿಸಬಹುದು. ಈ ಬಾರಿ ಕನಿಷ್ಠ ಉದ್ಘಾಟನಾ ಸಮಾರಂಭದವರೆಗಾದರೂ ಗಂಡಿ ಸೀರೆಯಲ್ಲಿ ಕಾಣಿಸಿಕೊಳ್ಳಲು ಹಲವು ಸಂಕೇತಿ ಮಹಿಳೆಯರು ಸಜ್ಜಾಗಿದ್ದಾರೆ.

ಸಂಕೇತಿ ಉತ್ಸವದಲ್ಲಿ ಇನ್ನೊಂದು ಗಮನ ಸೆಳೆಯುವ ವಿನೋದಾವಳಿ ಎಂದರೆ ಹೌಸಿ ಹೌಸಿ, ಲಕ್ಕಿ ಡ್ರಾ. ಬೆಳಿಗ್ಗೆ ಆರಂಭವಾದ ಹೌಸಿ ಹೌಸಿ ಆಟ ರಾತ್ರಿ 8ರವರೆಗೂ ಮುಂದುವರಿಯುತ್ತದೆ. ಉತ್ಸವದಲ್ಲಿ ಕರಕುಶಲ ವಸ್ತುಗಳು, ಸೀರೆಗಳು, ಸಿದ್ಧ ಉಡುಪುಗಳು, ಗೃಹೋಪಯೋಗಿ ವಸ್ತುಗಳು, ಬಗೆ ಬಗೆಯ ತಿಂಡಿ ತಿನಿಸುಗಳ ಮಳಿಗೆಗಳು, ಸ್ಪರ್ಧಾತ್ಮಕ ಆಟಗಳು, ಅನೇಕ ಅಗತ್ಯ ವಸ್ತುಗಳ ಮಾರಾಟ ವ್ಯವಸ್ಥೆಯೂ ಇದೆ. ಜತೆಗೆ ಸಂಕ್ರಾಂತಿಗಾಗಿ ಎಳ್ಳು-ಸಕ್ಕರೆ ಅಚ್ಚುಗಳು, ಪೂಜಾ ಸಾಮಗ್ರಿಗಳೂ ಸಿಗಲಿವೆ. ಬೆಂಗಳೂರಿನ ಜನತೆಗೆ ಸಂಕೇತಿ ಸಮುದಾಯದವರ ಆಚಾರ, ವಿಚಾರ, ಸಂಸ್ಕೃತಿಯನ್ನು ಪರಿಚಯಿಸುವ ವಿಶಿಷ್ಟ ಉತ್ಸವಕ್ಕೆ ಸಿದ್ಧತೆ ನಡೆದಿದೆ. ಹೆಚ್ಚಿನ ಮಾಹಿತಿಗೆ 9741227497 ಸಂಪರ್ಕಿಸಬಹುದು.

ವಿನೂತನ ಉದ್ಘಾಟನೆ : ಲೇಖಕಿ ಮತ್ತು ವೈದ್ಯೆ ವಸುಂಧರಾ ಭೂಪತಿ ಅವರು 10ರಂದು ಬೆಳಿಗ್ಗೆ 9 ಗಂಟೆಗೆ ಸಂಕೇತಿ ಉತ್ಸವವನ್ನು ಸಂಕೇತಿ ಸಮುದಾಯದವರ ಪ್ರಮುಖ ಆಹಾರ ವೈವಿಧ್ಯವಾದ ಒತ್ತು ಶ್ಯಾವಿಗೆ ಮಾಡುವುದರ ಮೂಲಕ ಉದ್ಘಾಟಿಸಲಿದ್ದಾರೆ. ಸ್ನಾತಕೋತ್ತರ ಶಿಕ್ಷಕಿ, ರಾಷ್ಟ್ರಪ್ರಶಸ್ತಿ ವಿಜೇತೆ ಎಚ್.ಆರ್.ಶ್ಯಾಮಲಾ ಮುಖ್ಯ ಅತಿಥಿಯಾಗಿರುತ್ತಾರೆ.

ಟ್ರಸ್ಟ್ ಬಗ್ಗೆ : ಬೆಂಗಳೂರು ಸಂಕೇತಿ ಮಹಿಳಾ ಸಮಾಜ ಟ್ರಸ್ಟ್ ಒಟ್ಟು 430 ಸದಸ್ಯೆಯರನ್ನು ಹೊಂದಿದೆ. ಪ್ರತಿ ತಿಂಗಳ 2ನೇ ಅಥವಾ 3ನೇ ಶನಿವಾರಗಳಂದು ಮಾಸಿಕ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರತಿ ವರ್ಷ ಸುಮಾರು 40ರಷ್ಟು ಮಕ್ಕಳಿಗೆ ವಿದ್ಯಾರ್ಥಿವೇತನ, 20 ಮಂದಿಗೆ ವೈದ್ಯಕೀಯ ಸಹಾಯ, 15 ಮಂದಿಗೆ ಮಾಸಾಶನ ನೀಡುತ್ತಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಸಂಕೇತಿ ಉತ್ಸವ್‌ಗೆ ಒಂದೊಂದು ಉದ್ದೇಶ ಇರುತ್ತದೆ. ಈ ಬಾರಿ ಉತ್ಸವದಿಂದ ಬರುವ ಆದಾಯವನ್ನು ವಿದ್ಯಾಭ್ಯಾಸ ಸಹಾಯ ನಿಧಿಗೆ ಸೇರಿಸಿ ಸಹಾಯ ಮಾಡಲು ನಿರ್ಧರಿಸಲಾಗಿದೆ. ಪ್ರಯತ್ನ-ಪ್ರಾಮಾಣಿಕತೆ-ಪ್ರಗತಿ ಟ್ರಸ್ಟ್‌ನ ಬೀಜ ಮಂತ್ರ.

ವೆಬ್ ಸೈಟ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Sankethi Mahila Samaja Trust has organized two days Sankethi Utsav (festival) in Bengaluru from 10th January at Maratha hostel, Bull temple road. All are welcome. Have sumptuous food and enjoy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more