Namma Metro: ಈ ದಿನದಂದು ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ!
ಬೆಂಗಳೂರು, ಸೆಪ್ಟೆಂಬರ್ 14: ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಕಾರ್ಯಾರಂಭ ಮಾಡಲು ಕಾಯುತ್ತಿರುವ ಎರಡು ಮಾರ್ಗಗಳ ಸುರಕ್ಷತಾ ತಪಾಸಣೆ ಸೆಪ್ಟೆಂಬರ್ 21 ರಂದು ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಬುಧವಾರ ನಿಗದಿಯಾಗಿದ್ದ ಬೈಯಪ್ಪನಹಳ್ಳಿ - ಕೆಆರ್ ಪುರ, ಕೆಂಗೇರಿ - ಚಲ್ಲಘಟ್ಟ ನಡುವಿನ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (ಸಿಎಂಆರ್‌ಎಸ್) ಬಹುನಿರೀಕ್ಷಿತ ಪರಿಶೀಲನೆಯನ್ನು ಮುಂದೂಡಲಾಗಿತ್ತು. ಸೆಪ್ಟೆಂಬರ್ 15ರ ಬಳಿಕ ಈ ಮಾರ್ಗದಲ್ಲಿ ರೈಲು ಓಡಾಟ ಆರಂಭವಾಗುತ್ತದೆ ಎಂದು ಕಾಯುತ್ತಿದ್ದವರಿಗೆ ಭಾರಿ ನಿರಾಸೆ ಮೂಡಿಸಿತ್ತು.

ಬುಧವಾರದಂದು ನಡೆಯಬೇಕಿದ್ದ ಸುರಕ್ಷತಾ ತಪಾಸಣೆಯನ್ನು ಮುಂದೂಡಲಾಗಿದೆ ಎಂಬ ವರದಿಗಳ ನಂತರ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ನಿರ್ದೇಶಕರು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ ಎಎಂ ಚೌಧರಿ ಅವರನ್ನು ಭೇಟಿ ಮಾಡಿ ಸಾಧ್ಯವಾದಷ್ಟು ಬೇಗ ಹೊಸ ದಿನಾಂಕವನ್ನು ನಿರ್ಧರಿಸುವಂತೆ ಮನವಿ ಮಾಡಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮುಂದಿನ ವಾರ ತಪಾಸಣೆ ಸಾಧ್ಯತೆ
ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, "ಸಿಎಂಆರ್‌ಎಸ್‌ನ ಅಧಿಕಾರ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದೆ ಮತ್ತು ಅವರು ರೈಲು ಮೂಲಸೌಕರ್ಯ ಮತ್ತು ಇತರ ಕಾಮಗಾರಿಗಳನ್ನು ಪರಿಶೀಲಿಸುವ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಬುಧವಾರ, ಸಾಧ್ಯವಾದಷ್ಟು ಬೇಗ ದಿನಾಂಕವನ್ನು ನಿಗದಿಪಡಿಸಲು ವಿನಂತಿಸಲಾಯಿತು ಮತ್ತು ಒಂದು ವಾರದ ನಂತರ, ಸಿ.ಎಂ.ಆರ್.ಎಸ್. ಮತ್ತು ಅವರ ತಂಡವು ತಪಾಸಣೆ ಮಾಡುವ ಸಾಧ್ಯತೆಯಿದೆ." ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೂರ್ವ ಭಾಗದಲ್ಲಿ ಕೆಆರ್ ಪುರ-ಬೈಯಪ್ಪನಹಳ್ಳಿ ಮತ್ತು ಪಶ್ಚಿಮದಲ್ಲಿ ಕೆಂಗೇರಿ-ಚಲ್ಲಘಟ್ಟ - ಚಲ್ಲಘಟ್ಟದಿಂದ ಕಾಡುಗೋಡಿ (ವೈಟ್‌ಫೀಲ್ಡ್) ವರೆಗಿನ ಸಂಪೂರ್ಣ 43 ಕಿಮೀ ನೇರಳೆ ಮಾರ್ಗವು ನಗರದ ಟೆಕ್ ಕಾರಿಡಾರ್ ಮೆಟ್ರೋ ಜಾಲ ಕಾರ್ಯಾರಂಭ ಮಾಡುವಂತೆ ಮೆಟ್ರೋ ಪ್ರಯಾಣಿಕರು ಬಿಎಂಆರ್‌ಸಿಎಲ್ ಎರಡು ಸ್ಟ್ರೆಚ್‌ಗಳನ್ನು ತಪಾಸಣೆ ಮಾಡಲು ಕಾತರದಿಂದ ಕಾಯುತ್ತಿದ್ದಾರೆ.
ಬಿಎಂಆರ್ ಸಿಎಲ್ ಮೊದಲು ಎರಡು ಮಾರ್ಗಗಳನ್ನು ತೆರೆಯಲು ಜೂನ್ ಗಡುವನ್ನು ನಿಗದಿಪಡಿಸಿತು, ನಂತರ ಅದನ್ನು ಆಗಸ್ಟ್‌ಗೆ ಮುಂದೂಡಲಾಯಿತು, ಬಳಿಕ ಅದನ್ನು ಸೆಪ್ಟೆಂಬರ್‌ಗೆ ಮುಂದೂಡಿತು ಈಗ ಈ ಸೆಪ್ಟೆಂಬರ್ ಅಂತ್ಯಕ್ಕೆ ಅಥವಾ ಅಕ್ಟೋಬರ್ ಮೊದಲನೇ ವಾರದಲ್ಲಿ ಈ ಮಾರ್ಗದಲ್ಲಿ ಸೇವೆ ಆರಂಭಿಸುವ ಸಾಧ್ಯತೆ ಇದೆ.
ಈ ತಿಂಗಾಳಂತ್ಯಕ್ಕೆ ಆರಂಭ ಸಾಧ್ಯತೆ
ಕಾರ್ಯಾರಂಭ ದಿನಾಂಕದಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಮಾಡಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಬಿಎಂಆರ್ ಸಿಎಲ್ ಅಧಿಕಾರಿಯು "ಈ ತಿಂಗಳು ಮಾರ್ಗವನ್ನು ತೆರೆಯುವ ವಿಶ್ವಾಸವಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆನ್ನಿಗಾನಹಳ್ಳಿ ಮತ್ತು ಚಲ್ಲಘಟ್ಟದಲ್ಲಿ ಎರಡು ಹೊಸ ನಿಲ್ದಾಣಗಳು ಈ ಮಾರ್ಗದ ಭಾಗವಾಗಿದೆ. ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಓಡಾಟ ಆರಂಭಿಸಿದ ನಂತರ, ಪ್ರತಿದಿನದ ಪ್ರಯಾಣಿಕರ ಸಂಖ್ಯೆಯಲ್ಲಿ 70,000 ರಿಂದ 80,000 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.












Click it and Unblock the Notifications