Sushilamma Profile: ಬೆಂಗಳೂರಿನ ಸಮಾಜ ಸೇವಕಿ ಡಾ. ಎಸ್.ಜಿ. ಸುಶೀಲಮ್ಮಗೆ ಪದ್ಮಶ್ರೀ ಗರಿ, ಹಿನ್ನೆಲೆ - ಸಾಧನೆ ಇಲ್ಲಿದೆ
ಬೆಂಗಳೂರು: ಸಮಾಜಸೇವಕಿ ಎಸ್.ಜಿ.ಸುಶೀಲಮ್ಮ ಅವರು ಪದ್ಮಶ್ರೀಗೆ ಭಾಜನರಾಗಿದ್ದಾರೆ. 2026ನೇ ಸಾಲಿನ ಪದ್ಮಶ್ರೀ ಪ್ರಕಟವಾಗಿದ್ದು, 7 ಜನ ಕನ್ನಡಿಗರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡತಿ, ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಸಂಸ್ಥಾಪಕಿ ಆಗಿರುವ ಇವರು ಮಹಿಳಾ ಸಬಲೀಕರಣ, ಶಿಶು ಸಂರಕ್ಷಣೆ, ಬಡವರ ಕಲ್ಯಾಣ, ಮಹಿಳಾ ಒಕ್ಕೂಟಗಳ ರಚನೆ, ಸ್ವಯಂ ಉದ್ಯೋಗ ತರಬೇತಿಗಳನ್ನು ತಮ್ಮ ಸಂಸ್ಥೆಗಳಿಂದ ನೀಡಿ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ ಇವರಿಗೆ ದೇಶದ ಅತ್ಯುನ್ನತ ಗೌರವ ಸಲ್ಲಿಸಲಾಗಿದೆ.
ಎಸ್.ಜಿ. ಸುಶೀಲಮ್ಮ ಅವರು, 1939ರ ಮೇ 24ರಂದು ಬೆಂಗಳೂರಿನಲ್ಲಿ ಜನಿಸಿದ್ದು, 1959ರಿಂದ 1967ರ ವರೆಗೆ ರೆಂಕೋ ಕಾರ್ಖಾನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. 1963ರಲ್ಲಿ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಎಸ್ ಜಿ ಸುಶೀಲಮ್ಮ ಅವರು ಜೀವಮಾನದ ಸಮಾಜ ಸೇವಕಿ ಮತ್ತು ಸುಮಂಗಲಿ ಸೇವಾ ಆಶ್ರಮದ ಸಂಸ್ಥಾಪಕಿ ಸಹ ಆಗಿದ್ದಾರೆ. 200ಕ್ಕೂ ಹೆಚ್ಚು ಅಂಗನವಾಡಿಗಳು, ಶಿಕ್ಷಣ, ಆರೋಗ್ಯ ರಕ್ಷಣೆ, ದುರ್ಬಲ ಮಕ್ಕಳ ಪುನರ್ವಸತಿ, ಕೊಳೆಗೇರಿ ನಿವಾಸಿಗಳಿಗೆ ವಸತಿ ಮತ್ತು ಬುಡಕಟ್ಟು ಕುಟುಂಬಗಳಿಗೆ ಆಸರೆಯಾಗಿ ಸುಶೀಲಮ್ಮ ಅವರು ಸೇವೆ ಸಲ್ಲಿಸಿದ್ದಾರೆ. ಹಿರಿಯ ಸಮಾಜ ಸೇವಕಿ, ಸಾವಿರಾರು ಮಹಿಳೆಯರ ಬದುಕಿಗೆ ಬೆಳಕಾದ ಶ್ರೀಮತಿ ಎಸ್.ಜಿ. ಸುಶೀಲಮ್ಮ ಅವರಿಗೆ ಈ ವರ್ಷದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಸುಮಾರು 60 ವರ್ಷಗಳಿಂದ ಮಹಿಳಾ ಸಬಲೀಕರಣಕ್ಕಾಗಿ ಅವಿರತ ಶ್ರಮಿಸುತ್ತಿರುವ ಅವರು 'ಸುಮಂಗಲಿ ಸೇವಾಶ್ರಮ'ದ ಮೂಲಕ ಅಸಂಖ್ಯಾತ ಅಸಹಾಯಕ ಮಹಿಳೆಯರಿಗೆ ಆಸರೆಯಾಗಿದ್ದಾರೆ.
1975ರಲ್ಲಿ ಬೆಂಗಳೂರಿನ ಹೆಬ್ಬಾಳದ ಸಮೀಪದ ಚೋಳನಾಯಕನಹಳ್ಳಿಯಲ್ಲಿ ಸುಮಂಗಲಿ ಸೇವಾಶ್ರಮ ಸಂಸ್ಥೆಯನ್ನು ಸುಶೀಲಮ್ಮ ಅವರು ಸ್ಥಾಪಿಸಿದರು. ನಾಡಿನ ಬಡವರು, ಅನಾಥರು, ನಿರಾಶ್ರಿತ ಮಕ್ಕಳು ಹಾಗೂ ಮಹಿಳೆಯರಿಗೆ ಸೇವೆ ಮಾಡುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಇನ್ನು 1976ರಲ್ಲಿ ಬಸವಾನಂದ ನರ್ಸರಿ, 1979ರಲ್ಲಿ ಸುಮಂಗಲಿ ಯುವತಿ ಮಂಡಳಿಯನ್ನು ಸಹ ಇವರು ಸ್ಥಾಪಿಸಿದರು. 1985ರಲ್ಲಿ ಚೋಳನಾಯಕನಹಳ್ಳಿಯಲ್ಲಿ ಬಸವಾನಂದ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದ್ದರು. ಈ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಾವಿರಾರು ಜನರಿಗೆ ಸುಶೀಲಮ್ಮ ಅವರು ಆಸರೆಯಾಗಿದ್ದಾರೆ. ದಿಕ್ಕುತೋಚದೆ ಕಂಗಾಲಾಗಿದ್ದ ನೂರಾರು ಜನ ಯುವತಿಯರು ಹಾಗೂ ಮಹಿಳೆಗೆ ಸುಶೀಲಮ್ಮ ಅವರು ಆಶಾಕಿರಣವಾಗಿದ್ದಾರೆ.
Sushilamma ಸಾವಿರಾರು ಜನರಿಗೆ ಆಸರೆ
ಇಡೀ ಜೀವನವನ್ನೇ ಸಮಾಜಸೇವೆಗೆ ಮುಡುಪಾಗಿರಿಸಿರುವ ಸುಶೀಲಮ್ಮ ಅವರು ಸಾವಿರಾರು ಜನರಿಗೆ ಆಸರೆಯಾಗಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗಿದೆ. ಕಳೆದ ನಾಲ್ಕು ದಶಕಕ್ಕೂ ಹೆಚ್ಚು ಅವಧಿಯಿಂದ ಸುಶೀಲಮ್ಮ ಅವರು, ಅನಾಥ ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ಆಶ್ರಯ ನೀಡಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸರ್ಕಾರದ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅಲ್ಲದೇ ಸುಶೀಲಮ್ಮ ಅವರಿಗೆ ಜಾನಕಿದೇವಿ ಬಜಾಜ್ ಪುರಸ್ಕಾರ, ಮೈಸೂರು ದಸರಾ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.












Click it and Unblock the Notifications