ಕೇರಳದಿಂದ ಬರುತ್ತಿದ್ದ ದರೋಡೆ ಗ್ಯಾಂಗ್ ಎಡೆಮುರಿ ಕಟ್ಟಿದ ಬೆಂಗಳೂರು ಪೊಲೀಸ್
ಬೆಂಗಳೂರು, ಏಪ್ರಿಲ್ 25: ಕೇರಳದಿಂದ ಬರ್ತಿದ್ದ ನಟೋರಿಯಸ್ ಗ್ಯಾಂಗ್ ಸಿಲಿಕಾನ್ ಸಿಟಿಯಲ್ಲಿ ಸ್ಕೆಚ್ ಹಾಕುತ್ತಿದ್ದರು. ಇವರ ಪ್ಲಾನ್ ಕೂಡ ಪಕ್ಕ ಇರ್ತಿತ್ತು. ಪೊಲೀಸರ ಕೈಗೆ ಸಿಕ್ಕಿಬೀಳ್ತೀವಿ ಅನ್ನೋ ಭಯದಿಂದಲೇ ಎಲ್ಲಾ ಎಲ್ಲಾ ಪ್ಲಾನ್ ಮಾಡುತ್ತಿದ್ದ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳ ಟು ಕರ್ನಾಟಕ ಈ ಗ್ಯಾಂಗ್ ಕಣ್ಣಿಟ್ಟರೇ ಕೋಟಿ ಲೂಟಿ ಪಕ್ಕಾ. ಪ್ರೊಫೆಷನಲಿ ಪ್ಲಾನ್ ಮಾಡ್ತಿದ್ದ ಅವರ ಪ್ಲಾನ್ ಫೇಲ್ಯೂರ್ ಆಗುತ್ತಿರಲಿಲ್ಲ. ಪ್ಲಾನ್ ಸಕ್ಸಸ್ ಆಗೋದಿಕ್ಕೆ ಅವರು ಮಾಡುತ್ತಿದ್ದ ತಯಾರಿ ಕೇಳಿದರೇ ನೀವೇ ಶಾಕ್ ಆಗಿ ಬಿಡ್ತೀರ. ಅಂಥದ್ದೊಂದು ನಟೋರಿಯಸ್ ದರೋಡೆ ಗ್ಯಾಂಗ್‌ನ ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್ ಮಂಜುನಾಥ್ ಅಂಡ್ ಟೀಂ ಅರೆಸ್ಟ್ ಮಾಡಿದ್ದಾರೆ.
ಒಂದುವರೆ ತಿಂಗಳ ಹಿಂದೆ ಹಾಡಹಗಲೇ ನಡು ರಸ್ತೆಯಲ್ಲಿ ಕೋಟಿ ಲೂಟಿ ಮಾಡಿದ ಪ್ರಕರಣ ಇಡೀ ಬೆಂಗಳೂರು ಗ್ರಾಮಂತರ ಪೊಲೀಸರ ನಿದ್ದೆ ಗೆಡಿಸಿತ್ತು. ತುಮಕೂರು ರಸ್ತೆಯ ಮಾದವಾರ ಬಳಿ ಚಿನ್ನದ ವ್ಯಾಪಾರಿ ಫ್ರಾಂಕ್ಲಿನ್ ಮತ್ತು ಸ್ನೇಹಿತರು ಚಿನ್ನ ಮಾರಿ ಒಂದು ಕೋಟಿ ಕ್ಯಾಶ್ ಸಮೇತ ಕನ್ಯಾಕುಮಾರಿ ಕಡೆ ಹೊರಟಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಅಡ್ಡಗಟ್ಟಿದ ದರೋಡೆಕೋರರು ಕಾರಿನಲ್ಲಿದ್ದ ಒಂದು ಕೋಟಿ ಲೂಟಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಮಾದನಾಯಕನಹಳ್ಳಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು.

ಸಿಸಿಟಿವಿಯ ಜಾಡು ಹಿಡಿದು ಬೆಂಗಳೂರು- ಹುಬ್ಬಳ್ಳಿ- ಕೇರಳ ತೆರಳಿದ ಪೊಲೀಸರು
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾದವಾರದಲ್ಲಿ ನಡೆದ ದರೋಡೆಕೋರರನ್ನು ಬಂಧಿಸಲು ಸಿಸಿಟಿವಿಯ ಮೋರೆಹೋದ ಪೊಲೀಸರು ಮೊದಲು ಕಾರನ್ನು ಪತ್ತೆ ಮಾಡಲು ಮುಂದಾದರು. ಈ ವೇಳೆ ಕಾರು ಬೆಂಗಳೂರು ಬಿಟ್ಟು ಎಲ್ಲೆಲ್ಲಿ ಹೋಗಿದೆ ಎಂಬುದನ್ನು ರೂಟ್ ಮ್ಯಾಪ್ ನಲ್ಲಿ ಸಿಸಿಟಿವಿಯ ದೃಶ್ಯ ಅನುಸರಿಸಿ ಹುಬ್ಬಳ್ಳಿಗೆ ಹೋಗಿದ್ದಾರೆ. ಅದೇ ಸಿಸಿಟಿವಿ ದೃಶ್ಯವಾಳಿ ಜಾಡು ಹಿಡಿದು ಕೇರಳ ಗಡಿಮುಟ್ಟಿದ್ದಾರೆ. ಒಂದು ತಿಂಗಳ ನಂತರ ಮಾದನಾಯಕನಹಳ್ಳಿ ಪೊಲೀಸರು ಕೇರಳದಲ್ಲಿ ರಾಜೀವ್, ವಿಷ್ಣುಲಾಲ್, ಸನಾಲ್, ಜಸೀನ್, ರಂಶೀದ್, ಸನಾಫ್, ಶಫೀಕ್ ಸೇರಿದಂತೆ ಒಟ್ಟು ಹತ್ತು ದರೋಡೆಕೋರರನ್ನು ಬಂಧಿಸಿದ್ದಾರೆ.

ರಾಬರಿಯ ಕಿಂಗ್ ಪಿನ್ ಗ್ರೇಟ್ ಎಸ್ಕೇಪ್..!
ಈ ಗ್ಯಾಂಗ್‌ನ ಕಿಂಗ್ ಪಿನ್ ಶ್ರೀಧರ್ @ ಕೊಡಾಲಿ ಶ್ರೀಧರ್ ರಾಬರಿ ಮಾಡಿದ್ದ 90 ಲಕ್ಷ ಹಣದ ಜೊತೆಗೆ ಪರಾರಿಯಾಗಿದ್ದಾನೆ. ಈತನ ಪತ್ತೆಗೆ ವಿಶೇಷ ತಂಡ ಕೂಡ ರಚನೆಯಾಗಿದ್ದು ಪೊಲೀಸರು ಆತನ ಪತ್ತೆಗೂ ಮುಂದಾಗಿದ್ದಾರೆ.
ಟೋಲ್ ಗಳಲ್ಲಿ ನಂಬರ್ ಪ್ಲೇಟ್ ಗೇಮ್..!
ಕೇರಳದಿಂದ ಬೆಂಗಳೂರಿಗೆ ಬರುವಾಗ ಆಗಲಿ. ಬೆಂಗಳೂರಿನಿಂದ ಕೇರಳಕ್ಕೆ ಹೋಗುವಾಗ ಆಗಲಿ ಎಲ್ಲೆಲ್ಲಿ ಟೋಲ್ ಬರ್ತಿತ್ತೋ ಆ ಟೋಲ್ ಗಳಲ್ಲಿ ಕಾರಿನ ನಂಬರ್ ಗಳನ್ನು ಈ ನಟೋರಿಯಸ್ ಗ್ಯಾಂಗ್ ಚೇಂಜ್ ಮಾಡ್ತಿದ್ದರು. ಯಾಕೆಂದರೆ ಪೊಲೀಸರ ಬಲೆಗೆ ಬೀಳಬಾರದು ಎಂಬ ಮುನ್ನೆಚ್ಚರಿಕೆ ಇವರದ್ದಾಗಿತ್ತು.

ಕಾರಿನಲ್ಲಿತ್ತು ಸಿಕ್ರೇಟ್ ಲಾಕರ್..!
ಈ ಕೇರಳ ಗ್ಯಾಂಗ್ ತಾವೇನದ್ರು ಸಿಕ್ಕಿಬಿದ್ದರೆ ಎಂಬ ಕಾರಣದಿಂದ ಕಾರಿನಲ್ಲೇ ಸಿಕ್ರೇಟ್ ಲಾಕರ್ ಅನ್ನು ಸಹ ಮಾಡಿಕಂಡಿದ್ದರು. ಆ ಸಿಕ್ರೆಟ್ ಲಾಕರ್ ನಲ್ಲೇ ರಾಬರಿ ಮಾಡಿದ ಹಣವನ್ನೆಲ್ಲಾ ಇಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಇನ್ನು ಬಂಧಿತ ಆರೋಪಿಗಳಿಂದ 10 ಲಕ್ಷ ನಗದು ಎರಡು ಇನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಆರೋಪಿಗಳು ಈ ಹಿಂದೆ ಕೂಡ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಚಿನ್ನದ ವ್ಯಾಪರಿಗಳನ್ನೇ ಟಾರ್ಗೇಟ್ ಮಾಡಿ ರಾಬರಿ ಮಾಡಿರೋದು ಬೆಳಕಿಗೆ ಬಂದಿದೆ. ಇತ್ತ ದೂರುದಾರರಾದ ಪ್ರಾಂಕ್ಲಿನ್, ಯೋಗೇಶ್‌ರನ್ನ ವಿಚಾರಣೆ ನಡೆಸುತ್ತಿರುವ ಪೊಲೀಸರು ಒಂದು ಕೋಟಿ ಹಣದ ಮೂಲವನ್ನು ಕೆದಕುತ್ತಿದ್ದಾರೆ.












Click it and Unblock the Notifications