ಆರ್‌ಆರ್ ನಗರ ಚುನಾವಣಾ ಫಲಿತಾಂಶ 2023: ಮುನಿರತ್ನಗೆ ಗೆಲುವು
ಬೆಂಗಳೂರು: ಮತದಾನ ಮುಗಿದರೂ ಚುನಾವಣೆ ಕಾವು ಮುಗಿಯದ ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿ ನಗರವೂ ಒಂದು. ಹೈವೋಲ್ಟೇಜ್ ಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ & ಕುಸುಮಾ ಮಧ್ಯೆ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿತ್ತು. ಈಗ ಅಂತಿಮ ಫಲಿತಾಂಶ ಹೊರಬಿದ್ದಿದ್ದು, ಮುನಿರತ್ನ ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ.
2013ರಿಂದಲೂ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಆಯ್ಕೆಯಾಗಿ ಬರುತ್ತಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಈ ಹಿಂದೆ ಕಾಂಗ್ರೆಸ್‌ನಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರು. 2013 & 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 2 ಬಾರಿ ಗೆಲುವು ಸಾಧಿಸಿದ್ರು. ಬದಲಾದ ಕಾಲಘಟ್ಟದಲ್ಲಿ 2020ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 1,25,990 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು. ಇದೀಗ 2023ರಲ್ಲೂ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.

2ನೇ ಬಾರಿ ಕುಸುಮಾ VS ಮುನಿರತ್ನ ಫೈಟ್
2020ರ ಅಕ್ಟೋಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆರ್‌ಆರ್ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದರು ಸಚಿವ ಮುನಿರತ್ನ. ಅತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಹನುಮಂತರಾಯಪ್ಪ ಸ್ಪರ್ಧೆ ಮಾಡಿದ್ದರು. 2023ರಲ್ಲಿ ಮತ್ತೊಮ್ಮೆ ರಾಜರಾಜೇಶ್ವರಿ ನಗರ ಕ್ಷೇತ್ರ ರಾಜ್ಯದ ಗಮನವನ್ನ ಸೆಳೆದಿತ್ತು. ಸತತ 3 ಬಾರಿ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಮುನಿರತ್ನ 2023ರಲ್ಲೂ ಗೆಲುವು ಸಾಧಿಸುತ್ತಾರಾ? ಎಂಬ ಪ್ರಶ್ನೆ ಕ್ಷೇತ್ರದ ಮತದಾರರ ಕುತೂಹಲ ಕೆರಳಿಸಿತ್ತು, ಆ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದ್ದು ಮುನಿರತ್ನ ಗೆಲುವು ಸಾಧಿಸಿದ್ದಾರೆ.

ಆರ್‌ಆರ್ ನಗರದ ಮತದಾರರ ವಿವರ
4,78,300 ಮತದಾರರನ್ನು ಹೊಂದಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಮತ ಹೆಚ್ಚಿದೆ. ಇಲ್ಲಿ ಒಕ್ಕಲಿಗರು 1,25,000, ಲಿಂಗಾಯತರು 49,000, ಬ್ರಾಹ್ಮಣರು 32,000, ಎಸ್‌ಸಿ-ಎಸ್‌ಟಿ ಸಮುದಾಯದ ಮತಗಳು 82,000, ಮುಸ್ಲಿಂ ಸಮುದಾಯದ 15,000 ಮತ, ಕುರುಬ ಸಮುದಾಯದ 6,000, ದೇವಾಂಗ ಜನಾಂಗ 5,000 ಮತ ಇದೆ. ಮತ್ತೊಂದ್ಕಡೆ ತಮಿಳು ಭಾಷಿಕರು 45,000 & ತೆಲುಗು ಭಾಷಿಕರದ್ದೇ 43,000 ಮತಗಳು ಇದೇ ಕ್ಷೇತ್ರದಲ್ಲಿವೆ. ಹೀಗಾಗಿ ಈ ಮತದಾರರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
2008ರಲ್ಲಿ ಕ್ಷೇತ್ರವಾಗಿತ್ತು ಆರ್‌ಆರ್ ನಗರ
ಉತ್ತರಹಳ್ಳಿ ವಿಧಾನಸಭಾ ವ್ಯಾಪ್ತಿಯಲ್ಲಿದ್ದ ರಾಜರಾಜೇಶ್ವರಿ ನಗರ, 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ನಂತರ ಹೊಸ ಕ್ಷೇತ್ರವಾಯಿತು. 2008ರಲ್ಲಿ ರಚನೆಗೊಂಡ ನಂತರ ಕ್ಷೇತ್ರವು ಒಂದು ಉಪ ಚುನಾವಣೆ, ಸೇರಿದಂತೆ ನಾಲ್ಕು ಸಾರ್ವತ್ರಿಕ ಚುನಾವಣೆ ಕಂಡಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯಲ್ಲಿರುವ ಕಾರಣ ಕ್ಷೇತ್ರದಲ್ಲಿ ಬಿಬಿಎಂಪಿ ವ್ಯಾಪ್ತಿಯ ಲಕ್ಷ್ಮೀದೇವಿ ನಗರ, ಜಾಲಹಳ್ಳಿ, ಜೆ ಪಿ ಪಾರ್ಕ್, ಯಶವಂತಪುರ, ಜ್ಞಾನಭಾರತಿ, ಕೊಟ್ಟಿಗೆಪಾಳ್ಯ ಸೇರಿ ಒಟ್ಟು 14 ವಾರ್ಡ್‌ಗಳಿವೆ.
ಒಟ್ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಆರ್‌ಆರ್ ನಗರದ ರಿಸಲ್ಟ್ ರಿವೀಲ್ ಆಗಿದ್ದು, ಮಾಜಿ ಸಚಿವ ಮುನಿರತ್ನ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆರ್‌ಆರ್ ನಗರದ ಜಿದ್ದಾಜಿದ್ದಿನ ಕಣದಲ್ಲಿ ಗೆಲುವು ಯಾರಿಗೆ? ಸೋಲು ಯಾರಿಗೆ? ಎಂಬ ಮತದಾರರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಜರಾಜೇಶ್ವರಿ ಕ್ಷೇತ್ರದ ಮತ ಎಣಿಕೆ ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆದಿತ್ತು.












Click it and Unblock the Notifications