ಪ್ರಚಾರಕ್ಕೆ ಅಡ್ಡಿ; ಅಧೀರಗೊಳ್ಳದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ!
ಬೆಂಗಳೂರು, ಅ. 27: ನಿಮ್ಮ ಕಷ್ಟ-ಸುಖ ಹಂಚಿಕೊಳ್ಳಲು, ನಿಮ್ಮ ಹೋರಾಟದಲ್ಲಿ ಕೈ ಜೋಡಿಸಲು, ಮಹಿಳೆಯರಿಗೆ ಧ್ವನಿಯಾಗಿ ನಿಲ್ಲಲು ಒಂದೇ ಒಂದು ಅವಕಾಶ ಕೇಳಿಕೊಂಡು ಬಂದಿದ್ದೀನಿ. ನಿಮ್ಮ ಮನೆ ಮಗಳಿಗೆ ನೀವು ಹೇಗೆ ಪ್ರೋತ್ಸಾಹ ನೀಡುತ್ತೀರೋ ಅದೇ ರೀತಿ ನನಗೂ ಪ್ರೋತ್ಸಾಹಿಸಿ, ಆಶೀರ್ವಾದ ಮಾಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್ ಅವರು ಮನವಿ ಮಾಡಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಕ್ಷೇತ್ರದ ಎಚ್ ಎಂಟಿ ಬಡಾವಣೆ, ಯಶವಂತಪುರ ಬಡಾವಣೆ ಸೇರಿದಂತೆ ವಿವಿಧೆಡೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಅಭ್ಯರ್ಥಿ ಕುಸುಮಾ ಅವರ ಜತೆ ಪ್ರಚಾರ ನಡೆಸಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಬಿ ಪಾಟೀಲ್, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ನಸೀರ್ ಅಹ್ಮದ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಅವರು ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಸಮಾಜಮುಖಿಯಾಗಿ ಕೆಲಸ
ನಾನು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಕ್ಷೇತ್ರದ ಕಡೆಯ ಪ್ರಜೆಗೂ ನ್ಯಾಯ ಒದಗಿಸಿಕೊಡಬೇಕು. ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸಿಕೊಡುವ ಸಲುವಾಗಿ ಕೆಲಸ ಮಾಡಲು ನಿಮ್ಮ ಮನೆ ಮಗಳಾಗಿ ನಿಮ್ಮ ಮನೆ ಬಾಗಿಲ ಮುಂದೆ ಬಂದು ಮತಯಾಚಿಸುತ್ತಿದ್ದೇನೆ ಎಂದರು.
ಆರ್ ಆರ್ ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರಕ್ಕೆ ಅಡ್ಡಿ, ಗಲಾಟೆ!

ಒಂದೇ ಒಂದು ಅವಕಾಶ ಕೊಡಿ
ನನ್ನ ಆಸೆ ಈಡೇರಲು, ಕ್ಷೇತ್ರದ ಅಭಿವೃದ್ಧಿ ಆಗಲು ನಿಮ್ಮ ಸಹಕಾರ ಬೇಕು. ನಿಮ್ಮ ಸೇವೆ ಮಾಡಲು ದಯವಿಟ್ಟು ನನಗೆ ಒಂದು ಅವಕಾಶ ಮಾಡಿಕೊಡಿ. ನಿಮ್ಮ ಕಷ್ಟ ಸುಖ ಹಂಚಿಕೊಳ್ಳಲು, ನಿಮ್ಮ ಹೋರಾಟದಲ್ಲಿ ಕೈ ಜೋಡಿಸಲು, ಮಹಿಳೆಯರಿಗೆ ಧ್ವನಿಯಾಗಿ ನಿಲ್ಲಲು ಒಂದೇ ಒಂದು ಅವಕಾಶ ಕೇಳಿಕೊಂಡು ಬಂದಿದ್ದೀನಿ ಎಂದು ಕುಸುಮಾ ಅವರು ಮನವಿ ಮಾಡಿಕೊಂಡರು.

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ
ನಿಮ್ಮ ಮನೆ ಮಗಳಿಗೆ ನೀವು ಹೇಗೆ ಪ್ರೋತ್ಸಾಹ ನೀಡುತ್ತೀರೋ ಅದೇ ರೀತಿ ನನಗೂ ಪ್ರೋತ್ಸಾಹಿಸಿ, ಆಶೀರ್ವಾದ ಮಾಡಿ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತೇನೆ. ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ನಿಮ್ಮ ಸ್ವಾಭಿಮಾನದ ಮತವನ್ನು ನನಗೆ ಕೊಡಿ ಎಂದು ಮನವಿ ಮಾಡಿಕೊಂಡರು.

ಸಿದ್ದರಾಮಯ್ಯ ಅವರೊಂದಿಗೆ ರೋಡ್ ಶೋ
ಯಶವಂತಪುರದಲ್ಲಿ ಪ್ರಚಾರ ಮಾಡುವಾಗ ತಡೆ ಒಡ್ಡಲಾಯಿತು. ಅದರಿಂದಾಗಿ ಅಧೀರಗೊಳ್ಳದ ಕುಸುಮಾ ಅವರು ಪ್ರಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಭಾಗವಹಿಸಿದರು. ನವೆಂಬರ್ 3 ರಂದು ಕ್ರಮ ಸಂಖ್ಯೆ 1 ಹಸ್ತದ ಗುರುತಿಗೆ ಮತ ನೀಡುವ ಮೂಲಕ ನನಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.