ಬೆಂಗಳೂರಲ್ಲಿ ರೈಲ್ವೆ ಭದ್ರತಾ ಸುರಕ್ಷಾ ಪಡೆ ಘಟಕ ಸ್ಥಾಪನೆ
ಬೆಂಗಳೂರು, ಸೆಪ್ಟೆಂಬರ್ 09 : ಬೆಂಗಳೂರು ನಗರದಲ್ಲಿ ರೈಲ್ವೆ ಭದ್ರತಾ ಸುರಕ್ಷಾ ಪಡೆಯ ಶಾಶ್ವತ ಘಟಕ ಸ್ಥಾಪನೆಯಾಗಲಿದೆ. ಇದು ಕರ್ನಾಟಕದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಘಟಕವಾಗಿದೆ.
ರೈಲ್ವೆ ಭದ್ರತಾ ಸುರಕ್ಷಾ ಪಡೆ (ಆರ್‌ಪಿಎಸ್‌ಎಫ್) ತುರ್ತು ಸಂದರ್ಭದಲ್ಲಿ ನಗರದ ರೈಲು ನಿಲ್ದಾಣದ ಸುರಕ್ಷತೆಯ ಹೊಣೆ ಹೊರಲಿದೆ. ಪ್ರಸ್ತುತ ಸಿಕಂದರಾಬಾದ್ ಮತ್ತು ತಿರುಚಿನಾಪಳ್ಳಿಯಲ್ಲಿ ಈ ಘಟಕವಿದೆ.
ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಸಮೀಪದಲ್ಲಿಯೇ 100 ಜನರು ಉಳಿದುಕೊಳ್ಳಬಹುದಾದದ ಘಟಕ ಸ್ಥಾಪನೆಯಾಗಲಿದೆ. ತುರ್ತು ಸಂದರ್ಭದಲ್ಲಿ ಯಶವಂತಪುರ, ಬೈಯಪ್ಪನಹಳ್ಳಿ, ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಈ ಘಟಕ ಧಾವಿಸಬಹುದಾಗಿದೆ.

ಬೆಂಗಳೂರು ನಗರಕ್ಕೆ ಆಗಾಗ ಉಗ್ರರ ದಾಳಿಯ ಎಚ್ಚರಿಕೆ ಬರುತ್ತದೆ. ಆದ್ದರಿಂದ, ನಗರದಲ್ಲಿ ಆರ್‌ಪಿಎಸ್‌ಎಫ್ ಶಾಶ್ವತ ಘಟಕ ಸ್ಥಾಪನೆ ಅನುಕೂಲವಾಗಲಿದೆ. ಈಗಾಗಲೇ ಘಟಕ ಸ್ಥಾಪನೆ ಕಾಮಗಾರಿ ಆರಂಭವಾಗಿದ್ದು, ಆರು ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಮಾಡಲು ಆರ್‌ಪಿಎಸ್‌ಎಫ್ ತಂಡ ಸಿದ್ಧವಾಗಿರುತ್ತದೆ. ಈ ತಂಡದ ಸದಸ್ಯರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿರುತ್ತದೆ. ಮಹಿಳಾ ಮತ್ತು ಪುರುಷರ ಪ್ರತ್ಯೇಕ ವಿಭಾಗ ಇದರಲ್ಲಿ ಇರುತ್ತದೆ.
ಇದುವರೆಗೂ ನಕ್ಸಲ್ ಪೀಡಿತ ಪ್ರದೇಶ, ಈಶಾನ್ಯ ರಾಜ್ಯಗಳು, ಉಗ್ರರ ಉಪಟಳವಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಶಾಶ್ವತ ಆರ್‌ಪಿಎಸ್‌ಎಫ್ ಘಟಕ ಸ್ಥಾಪನೆಯಾಗುತ್ತಿತ್ತು. ಈಗ ಬೆಂಗಳೂರಿಗೂ ಘಟಕ ಸಿಕ್ಕಿದೆ.












Click it and Unblock the Notifications