Road Accident: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೇವಲ ಎರಡೇ ತಿಂಗಳಿಗೆ ರಸ್ತೆ ಅಪಘಾತದಿಂದ ಇಷ್ಟೊಂದು ಸಾವು.!
ಬೆಂಗಳೂರು, ಮಾರ್ಚ್ 14: ರಾಜ್ಯ ರಾಜಧಾನಿ ಬೆಂಗಳೂರು ಐಟಿ ಸಿಟಿ ಅಂತಲೇ ಹೆಸರುವಾಸಿಯಾಗಿದೆ. ಈ ನಗರದಲ್ಲಿ ಬೆಳಗ್ಗೆ 8 ಆಯಿತಂದರೆ ಸಾಕು ಸಂಚಾರ ದಟ್ಟಣೆ ಶುರುವಾಗಿಬಿಡುತ್ತದೆ. ಇನ್ನೂ ಈ ಟ್ರಾಫಿಕ್ ಜಂಜಾಟದಲ್ಲಿಯೇ ಪ್ರತಿನಿತ್ಯವು ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇನ್ನು ಕಳೆದ ಕೇವಲ ಎರಡು ತಿಂಗಳಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆ ಎಷ್ಟು ಗೊತ್ತಾ? ಈ ಅಂಕಿಅಂಶಗಳನ್ನು ಗಮನಿಸಿದರೆ ಶಾಕ್ ಆಗೋದಂತೂ ಗ್ಯಾರಂಟಿ. ಮಾಹಿತಿ ಇಲ್ಲಿದೆ ಗಮನಿಸಿ.
ಬೆಂಗಳೂರಿನಲ್ಲಿ 2024ರ ಮೊದಲ ಎರಡು ತಿಂಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 174 ಜನ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಇನ್ನು 2023ರಲ್ಲಿ 914 ಜನ ಸಾವಿಗೀಡಾಗಿದ್ದಾರೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಮತ್ತು ಕಾಮರ್ಸ್ (ಬಿಸಿಐಸಿ) ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಬೆಂಗಳೂರಿನಲ್ಲಿ 1.4 ಕೋಟಿ ಜನಸಂಖ್ಯೆಯಿದ್ದು, 1,000ಕ್ಕೆ 827 ಜನರ ಬಳಿ ವಾಹನಗಳಿವೆ.
ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ವಾಹನಗಳು ಬೆಂಗಳೂರಿನಲ್ಲಿ ಇವೆ. ವಾಹನಗಳ ಅತಿ ವೇಗದ ಚಾಲನೆಯಿಂದ ಶೇಕಡಾ 10 ಸಾವುಗಳು ದೇವನಹಳ್ಳಿಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸಂಭವಿಸಿವೆ. ನಂತರ ಕೆಂಗೇರಿ ನೈಸ್ ರಸ್ತೆಯಲ್ಲಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
2023ರಲ್ಲಿ ಮೃತಪಟ್ಟ 914 ಜನರಲ್ಲಿ ದ್ವಿಚಕ್ರ ವಾಹನ ಸವಾರರು ಶೇಕಡಾ 74 ರಷ್ಟಿದ್ದರೇ, ಶೇಕಡಾ 21 ಪಾದಾಚಾರಿಗಳು ಸಾವನ್ನಪ್ಪಿದ್ದಾರೆ. ಇವರಲ್ಲಿ ಶೇಕಡಾ 60ರಷ್ಟು ಜನ 60 ವಯಸ್ಸಿಗಿಂತ ಮೇಲ್ಪಟ್ಟವರಾಗಿದ್ದಾರೆ. ಸಂಚಾರ ನಿರ್ವಹಣೆಯನ್ನು ಹೆಚ್ಚಿಸಲು, ಅಪಘಾತಗಳನ್ನು ತಡೆಯಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಬೆಂಗಳೂರು ಪೊಲೀಸರು ಕೈಗೊಂಡ ವಿವಿಧ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಸುಧಾರಿತ ತಂತ್ರಜ್ಞಾನಗಳಾದ AI, ಬಿಗ್ ಡೇಟಾ ಮತ್ತು ಇಂಟರ್‌ನೆಟ್ ಆಫ್ ಥಿಂಗ್ಸ್, ಜಂಕ್ಷನ್‌ಗಳಲ್ಲಿ AI ಆಧಾರಿತ ಸಿಗ್ನಲ್‌ಗಳು, AI ಕ್ಯಾಮೆರಾ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಪ್ರಮುಖ ಪಾತ್ರವಹಿಸಿವೆ ಎಂದರು. ಇನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮೂರು ಗಂಟೆಗಳಲ್ಲಿ ಹೆಬ್ಬಾಳದಲ್ಲಿ 90,000 ವಾಹನಗಳು ಸಂಚರಿಸುತ್ತವೆ.
ಇದು ಜಾಗತಿಕವಾಗಿ ಅತ್ಯಧಿಕವಾಗಿದ್ದು, ಹೀಗಾಗಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ನಕ್ಷೆ ಆಧಾರಿತ ಸೇವೆಗಳು, ಎಫ್ಎಮ್ ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಜನರಲ್ಲಿ ತಿಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.












Click it and Unblock the Notifications