Bengaluru Weather: ಬೆಂಗಳೂರು ಈ ವಾರ ಪೂರ್ತಿ ಸಖತ್ ಹಾಟ್ ಗುರೂ
ಚಳಿಗಾಲದಿಂದಾಗಿ ಸಖತ್ ಕೂಲ್ ಆಗಿದ್ದ ಉದ್ಯಾನ ನಗರಿ ಬೆಂಗಳೂರಿಗೆ ಇದೀಗ ತಾಪಮಾನ ಬಿಸಿ ತಟ್ಟಲಿದೆ. ಚಳಿಗಾಲ ಇನ್ನೂ ಮುಗಿಯದಿದ್ದರೂ ಆಗಲೇ ಸಿಲಿಕಾನ್ ಸಿಟಿ ಮಂದಿಯನ್ನ ಸೂರ್ಯ ಸುಡಲು ಆರಂಭಿಸಿದ್ದಾನೆ. ನಗರದಲ್ಲಿ ತಾಪಮಾನ ದಿಢೀರ್ ಏರಿಕೆ ಕಂಡಿರುವ ಕಾರಣ ಈ ವಾರ ಪೂರ್ತಿ ಬೇಸಿಗೆ ವಾತಾವರಣ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗಿ ವಾರವಿಡೀ ಬಿಸಿಲು ಕೂಡ ಹೆಚ್ಚಾಗಿರಲಿದೆ. ಕಳೆದ ಕೆಲವು ದಿನಗಳಿಂದ ಕೂಲ್ ಸಿಟಿಯಾಗಿದ್ದ ಬೆಂಗಳೂರಿನಲ್ಲಿ ಚಳಿ ಪ್ರಮಾಣ ಕಡಿಮೆಯಾಗಿದೆ. ಇನ್ನೊಂದು ಕಡೆ ತಾಪಮಾನ ಕ್ರಮೇಣ ಏರತೊಡಗಿದ್ದು, ಬಿಸಿಯಿಂದಾಗಿ ಸೆಕೆಯ ಅನುಭವ ಕೂಡ ಶುರುವಾಗಿದೆ. ಹವಾಮಾನ ಇಲಾಖೆ ಪ್ರಕಾರ ನಗರದಲ್ಲಿ ಸಾಮಾನ್ಯ ಮಟ್ಟಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದೆ.

ಕಳೆದ ವಾರಗಳಲ್ಲಿ ಬೆಳಿಗ್ಗೆ 11ರವರೆಗೆ ಮಂಜು ಮುಚ್ಚಿಕೊಂಡಿರುತ್ತಿತ್ತು. ಮಧ್ಯಾಹ್ನದವರೆಗೆ ಸೂರ್ಯನ ದರ್ಶನವೂ ಆಗುತ್ತಿರಲಿಲ್ಲ. ಆದರೆ ಸದ್ಯ ನಗರದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾಗಿ ಮಧ್ಯಾಹ್ನಕ್ಕೆಲ್ಲ ಬಿಸಿಲು ಹೆಚ್ಚಾಗಿ ಗರಿಷ್ಠ ತಾಪಮಾನವು 31 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. ಇದು ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಅಧಿಕ ಎನ್ನಲಾಗಿದೆ.
ಪಕ್ಕದ ತಮಿಳುನಾಡು ರಾಜ್ಯದಿಂದ ಪೂರ್ವ ಮಾರುತಗಳು ಬೀಸುತ್ತಿರುವ ಕಾರಣ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಕೆ ಹೆಚ್ಚಾಗುತ್ತಿದೆ. ಮುಂದಿನ ವಾರದ ವೇಳೆಗೆ ಈಶಾನ್ಯ ಮಾರುತಗಳು ರಾಜ್ಯದ ಕಡೆಗೆ ಬೀಸಲಿದ್ದು, ಈ ವೇಳೆ ಮತ್ತೆ ತಂಪು ಗಾಳಿ ಬೀಸಲಿದೆ. ಆಗ ಮತ್ತೆ ತಾಪಮಾನ ಕಡಿಮೆಯಾಗಲಿದೆ ಎಂದು ಇಲಾಖೆ ಹೇಳಿದೆ.

ಇನ್ನು ಬೆಂಗಳೂರಿನಲ್ಲಿ ಸದ್ಯಕ್ಕೆ ಮಳೆಯಾಗುವ ಯಾವುದೇ ಸೂಚನೆ ಇಲ್ಲ. ಈ ತಾಪಮಾನ ಏರಿರುವುದರಿಂದ ಬೇಸಿಗೆ ಶುರುವಾಗಿದೆ ಎಂದರ್ಥವಲ್ಲ. ಹವಾಮಾನ ವೈಪರೀತ್ಯದಿಂದಾಗಿ ಚಳಿ ಪ್ರಮಾಣ ತಗ್ಗಿದ್ದು, ಬಿಸಿಲು ಹೆಚ್ಚಾಗಿದೆಯಷ್ಟೇ. ಸಾಮಾನ್ಯವಾಗಿ ಫೆಬ್ರವರಿ ಮುಗಿಯುವತನಕ ಚಳಿ ಇರಲಿದೆ. ಆ ಬಳಿಕ ಬೇಸಿಗೆ ಶುರುವಾಗಲಿದೆ ಎಂದು ತಜ್ಞರು ವಿವರಿಸಿದ್ದಾರೆ.
ಕರ್ನಾಟಕದ ಉಷ್ಣವಲಯದ ಮಟ್ಟದಲ್ಲಿ ಹಗುರದಿಂದ ಮಧ್ಯಮ ಪೂರ್ವ ಅಥವಾ ಈಶಾನ್ಯ ಹವಾಮಾನ ಇರುತ್ತದೆ. ಹೀಗಾಗಿ ಕರ್ನಾಟಕದ ಒಳನಾಡಿನಲ್ಲಿ ಶುಷ್ಕ ಹವಾಮಾನ ಕಂಡುಬರಲಿದೆ. ಕರ್ನಾಟಕದ ಒಳನಾಡಿನ ಕೆಲವೆಡೆ ಮಾತ್ರವೇ ದಟ್ಟ ಮಂಜು ಅಥವಾ ಮಂಜು ಬೀಳುವ ಸಾಧ್ಯತೆ ಇದೆ. ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತುಸು ಮಳೆಯಾಗುವ ಸಾಧ್ಯತೆಯೂ ಇದೆ.
ಉತ್ತರ ಕನ್ನಡ, ಹಾವೇರಿ, ಕಲಬುರಗಿ, ಕೊಪ್ಪಳ, ಧಾರವಾಡ, ಗದಗ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಬೀದರ್, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶೀತಗಾಳಿ ಇರಲಿದ್ದು, ಒಣ ಹವೆ ಮುಂದುವರಿಯಲಿದೆ.
ಫೆಬ್ರವರಿ 9ರವರೆಗೆ ಕರ್ನಾಟಕ ರಾಜ್ಯದಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಭ್ರ ಆಕಾಶವಿರಲಿದೆ. ಕೆಲವು ಪ್ರದೇಶಗಳಲ್ಲಷ್ಟೇ ಬೆಳಗಿನ ಜಾವ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನವು ಕ್ರಮವಾಗಿ 17 ಡಿಗ್ರಿ ಸೆಲ್ಸಿಯಸ್‌ನಿಂದ 33 ಡಿಗ್ರಿ ಸೆಲ್ಸಿಯಸ್ ಇರಲಿದೆ.












Click it and Unblock the Notifications