Bengaluru Metro: ಪಿಂಕ್ ಲೈನ್ ಮೆಟ್ರೋ ರೈಲು ಅನಾವರಣ, ಹಳದಿ ಮಾರ್ಗ ಪ್ರಯಾಣಿಕರಿಗೆ ಗುಡ್‌ನ್ಯೂಸ್
Namma Metro Updates: ಬೆಂಗಳೂರು ಮೆಟ್ರೋ ಹೊಸ ಮಾರ್ಗಗಳ ಲೋಕಾರ್ಪಣೆಗೆ ಬಿಎಂಆರ್‌ಸಿಎಲ್ ಸಿದ್ಧವಾಗುತ್ತಿದೆ. ಯೆಲ್ಲೋ ಲೈನ್ ಬಳಿಕ ಗುಲಾಬಿ ಮಾರ್ಗ (Namma Metro Pink Line) ತೆರೆಯಲಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪ್ರೊಟೊಟೈಪ್ ರೈಲನ್ನು ಇಂದು ಡಿಸೆಂಬರ್ 11ಕ್ಕೆ ಅನಾವರಣ ಆಗುತ್ತಿದೆ. ಗುಲಾಬಿ ಮಾರ್ಗದ ಮೆಟ್ರೋ ರೈಲಿನ ಗ್ಲಿಮ್ಸ್ ಎಲ್ಲೆಡೆ ಹರಿದಾಡುತ್ತಿದೆ.
ಸಂಸದ ಪಿಸಿ ಮೋಹನ್ ಅವರು ಸಹ ಪಿಂಕ್ ಲೈನ್ ರೈಲಿನ ಫೋಟೋ ಹಂಚಿಕೊಂಡಿದ್ದಾರೆ. ಪ್ರೊಟೊಟೈಪ್ ರೈಲಿನ ಮೊದಲ ಗ್ಲಿಮ್ಸ್ ಎಂದು ಬರೆದುಕೊಂಡಿದ್ದಾರೆ. ಈ ಮಾರ್ಗವು ಮುಕ್ಕಾಲು ಭಾಗ ಸುರಂಗದಲ್ಲಿ ನಿರ್ಮಾಣವಾಗಿದೆ. ಮೊದಲ ಹಂತದಲ್ಲಿ ಹೊಸ 05 ರೈಲುಗಳೊಂದಿಗೆ 2026ರ ಮೇ ಇಲ್ಲವೇ ಜೂನ್ ಹೊತ್ತಿಗೆ ಸಂಚರಕ್ಕೆ ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಯಾರಿ ನಡೆಸಿದೆ. ಈ ತಯಾರಿಯ ಭಾಗವಾಗಿ ಇಂದು ಗುಲಾಬಿ ರೈಲನ್ನು ಅನಾವರಣ ಮಾಡುತ್ತಿದೆ.

ಇದೇ ವರ್ಷ 2025ರ ಜೂನ್ ನಲ್ಲಿ ಈ ಪ್ರೊಟೊಟೈಪ್ ರೈಲು ಬೆಂಗಳೂರಿಗೆ ಪೂರೈಕೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ. ಶೀಘ್ರವೇ ಬಿಎಂಆರ್‌ಸಿಎಲ್ ಹೊಸ ರೈಲುಗಳಿಗೆ ಅನುಮತಿ ಪಡೆಯಲಿದೆ. ಕಾಳೇನ ಅಗ್ರಹಾರದಿಂದ-ನಾಗಾವಾರವರೆಗೆ ಗುಲಾಬಿ ಮಾರ್ಗ ನಿರ್ಮಾಣವಾಗುತ್ತಿದೆ. 21ಕಿಲೋ ಮೀಟರ್ ಉದ್ದದ ಈ ಮಾರ್ಗದ ಪೈಕಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮೆಟ್ರೋ ಮಾರ್ಗವು ಮೊದಲ ಹಂತದಲ್ಲಿ ಪ್ರಯಾಣಿಕರಿಗೆ ಮುಕ್ತಗೊಳ್ಳಲಿದೆ. ಇದೇ ಪ್ರೊಟೊಟೈಪ್ ರೈಲುಗಳು ಸಂಚಾರ ಸೇವೆ ನೀಡಲಿವೆ.
ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ ಬೆಂಗಳೂರು, ಜೆಪಿ ನಗರ 4ನೇ ಹಂತ, ಜಯನಗರ ಹಾಗೂ ತಾವೆರೆಕೆರೆ ವರೆಗಿನ ಸುಮಾರು ಏಳು ಕಿಲೋ ಮೀಟರ್ ತೆರೆಯಲಾಗುತ್ತದೆ. ಉಳಿದ ಮೆಟ್ರೋ ಮಾರ್ಗವನ್ನು (ಡೈರಿವೃತ್ತ-ನಾಗವಾರವರೆಗೆ) 2026ರ ಡಿಸೆಂಬರ್ ನಲ್ಲಿ ತೆರೆಯಲು BMRCL ಪ್ಲಾನ್ ಮಾಡಿಕೊಂಡಿದೆ.
ಡಿ.22ರಂದು ಯೆಲ್ಲೋ ಲೈನ್ ಗೆ ಮತ್ತೊಂದು ರೈಲು
ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರವರೆಗಿನ ಹಳದಿ ಮೆಟ್ರೋ ಮಾರ್ಗದಲ್ಲಿ (Namma Metro Yellow Line) ಸದ್ಯ ಐದು ರೈಲುಗಳು ಮಾತ್ರವೇ ಸಂಚಾರ ಸೇವೆ ನೀಡುತ್ತಿವೆ. ಈಗಾಗಲೇ ಬೆಂಗಳೂರಿಗೆ ಬಂದ 6ನೇ ರೈಲಿನ ಪರೀಕ್ಷೆಗಳು ನಡೆಯುತ್ತಿವೆ. ಇದು ಮುಗಿದು ಡಿಸೆಂಬರ್ 22 ರಂದು ಸೋಮವಾರ ಸೇವೆಗೆ ನಿಯೋಜನೆಗೊಳ್ಳಲಿದೆ. ಅಲ್ಲಿಂದ ರೈಲು ಆವರ್ತನ ಕಾಯುವಿಕೆ ಹಾಲಿ ಸಮಯ 15-16 ನಿಮಿಷ ಇದ್ದದ್ದು, ಸುಮಾರು 12 ನಿಮಿಷಗಳಿಗೆ ಇಳಿಕೆ ಆಗುವ ಭರವಸೆ ಸಿಕ್ಕಿದೆ.
ಈ ಹಳದಿ ಮಾರ್ಗದಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 70 ಸಾವಿರಕ್ಕೂ ಹೆಚ್ಚಿದೆ. ರೈಲಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪ್ರಯಾಣಿಕರ ಮೆಟ್ರೋ ಸಾರಿಗೆ ಅವಲಂಬನೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಸದ್ಯ ಆರನೇ ಡ್ರೈವರ್‌ಲೆಸ್ ರೈಲನ್ನು ಮೆಟ್ರೋ ಅಧಿಕಾರಿಗಳು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ.












Click it and Unblock the Notifications