ಇಬ್ಬರು ನಿವೃತ್ತ ಡಿಜಿಪಿಗಳ ನಿಧನ, ಇಲಾಖೆಯಿಂದ ಗೌರವ ನಮನ
ಬೆಂಗಳೂರು, ನ 19: ಕಳೆದ ಎರಡು ದಿನದಲ್ಲಿ ರಾಜ್ಯದ ಇಬ್ಬರು ನಿವೃತ್ತ ಪೊಲೀಸ್ ಮಹಾ ನಿರ್ದೇಶಕರು ನಗರದಲ್ಲಿ ನಿಧನರಾಗಿದ್ದಾರೆ.
ನವೆಂಬರ್ 18 ರಂದು ಬೆಳಗಿನ ಜಾವ ನಿವೃತ್ತ ಡಿಜಿಪಿ, ಎಸ್. ಸಿ. ಸಕ್ಸೇನಾ ಮೃತಪಟ್ಟಿದ್ದರು. ವಯೋ ಸಹಜ ಅನಾರೋಗ್ಯದಿಂದ ಬಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಹೆಬ್ಬಾಳದಲ್ಲಿ ನಡೆಯಿತು. ಸಕ್ಸೇನಾ ನಿಧನದ ವಾರ್ತೆ ಬೆನ್ನಲ್ಲೇ ರಾಜ್ಯದ ಮತ್ತೊಬ್ಬ ನಿವೃತ್ತ ಡಿಜಿಪಿ ಟಿ. ಶ್ರೀನಿವಾಸಲು ಇಂದು ಬೆಳಗಿನ ಜಾವ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸಲು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ 3 ಗಂಟೆಯಲ್ಲಿ ನಿಧನರಾಗಿದ್ದು, ಅಂತಿಮ ದರ್ಶನಕ್ಕೆ ಇಂದಿರಾನಗರದ ಅವರ ನಿವಾಸದ ಎದುರು ಅವಕಾಶ ಮಾಡಿಕೊಡಲಾಗಿದೆ. ಇವರ ಅಂತ್ಯಕ್ರಿಯೆ ಕಾಕ್ಸ್ ಟೌನ್ ನಲ್ಲಿರುವ ಕಲ್ಲಪಲ್ಲಿ ಚಿತಾಗಾರದಲ್ಲಿ ನೆರವೇರಲಿದೆ. ಇಬ್ಬರು ನಿವೃತ್ತ ಪೊಲೀಸ್ ಮಹಾ ನಿರ್ದೇಶಕರ ನಿಧನಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಗೌರವ ನಮನ ಸಲ್ಲಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.












Click it and Unblock the Notifications