ಹೊಸ ವರ್ಷಕ್ಕೆ ನಗರದಲ್ಲಿ ನಿರ್ಬಂಧ, ಹೊರವಲಯದ ಹೋಟೆಲ್, ರೆಸಾರ್ಟ್‌ಗಳತ್ತ ಜನ
ಬೆಂಗಳೂರು, ಡಿ. 25: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ 2022 ಹೊಸ ವರ್ಷ ಆಚರಣೆ ನಿರ್ಬಂಧ ವಿಧಿಸಲಾಗಿದೆ.
ಹೌದು. ಈ ಬಾರಿಯ ನೂತನ ಹೊಸ ವರ್ಷ ಕೇವಲ ಹೋಟೆಲ್, ರೆಸಾರ್ಟ್ , ಕ್ಲಬ್ ಗಳಿಗೆ ಸೀಮಿತವಾಗಲಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ 2021 ರ ನೂತನ ಹೊಸ ವರ್ಷ ಆಚರಣೆಯನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ಬೆಂಗಳೂರು ಪೊಲೀಸರು ನಿರ್ಬಂಧಿಸಿದ್ದರು. 2022 ನೂತನ ವರ್ಷಾಚರಣೆ ಸಾರ್ವಜನಿಕ ಪ್ರದೇಶದಲ್ಲಿ ಅಚರಣೆ ಮಾಡುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ಎಂ.ಜಿ. ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಲಾಗಿದೆ. ಯಾರೂ ಸಹ ಸಾಮೂಹಿಕವಾಗಿ ಸೇರಿ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಇನ್ನು ಖಾಸಗಿ ಹೋಟೆಲ್, ಪಬ್, ಮಾಲ್ ಹಾಗೂ ರೆಸಾರ್ಟ್ ನಲ್ಲಿ ಅಚರಣೆಗೆ ಕೊರೊನಾ ನೀತಿ ಸಂಹಿತೆ ಷರತ್ತುಗಳನ್ನು ಸರ್ಕಾರ ವಿಧಿಸುವ ಸಾಧ್ಯತೆಯಿದೆ.

ಹೊಸ ವರ್ಷ ಆಚರಣೆ ಎಂದರೆ ಯಾವಾಗಲೂ ಬ್ರಿಗೇಡ್ ರೋಡ್ ಮತ್ತು ಎಂಜಿ. ರಸ್ತೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ಲಕ್ಷಾಂತರ ಮಂದಿ ಸೇರಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತಿದ್ದರು. ಕುಣಿದು ಕುಪ್ಪಳಿಸುತ್ತಿದ್ದರು. ಹೀಗಾಗಿ ಬೆಂಗಳೂರಿನಾದ್ಯಂತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತಿತ್ತು. ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ಕೂಡ ಹೊಸ ವರ್ಷ ಆಚರಣೆಗೆ ಬೆಂಗಳೂರು ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.
ಹೋಟೆಲ್‌ಗಳು ಬುಕ್ಕಿಂಗ್ ಜೋರು:
ಸಾರ್ವಜನಿಕ ಪ್ರದೇಶದಲ್ಲಿ ಹೊಸ ವರ್ಷಾಚರಣೆ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೊರ ವಲಯದ ಹೋಟೆಲ್ , ಮತ್ತು ರೆಸಾರ್ಟ್ ಗಳ ಬಕ್ಕಿಂಗ್ ಜೋರಾಗಿದೆ. ನೂತನ ವರ್ಷದ ಪಾರ್ಟಿ ಆಯೋಜನೆ ಮಾಡಿ ಅದಾಗಲೇ ಗ್ರಾಹಕರನ್ನು ಸೆಳೆಯುತ್ತವೆ. ಬೆಂಗಳೂರಿನಲ್ಲಿ ಡಿಜೆ ಪಾರ್ಟಿ, ಮೂಸಿಕ್ ನೈಟ್ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಹಕರನ್ನು ಸೆಳೆಯಲು ಫ್ರೀ ಬುಕ್ಕಿಂಗ್ ಆಫರ್ ಕೂಡ ನೀಡಿವೆ. ಸಾರ್ವಜನಿಕ ಪ್ರದೇಶದಲ್ಲಿ ಆಚರಣೆಗೆ ನಿಷೇಧ ಇರುವ ಹಿನ್ನೆಲೆಯಲ್ಲಿ ರೆಸಾರ್ಟ್, ಹೋಟೆಲ್ ಹಾಗೂ ಕ್ಲಬ್ ಗಳಲ್ಲಿ ಹೊಸ ವರ್ಷಾಚರಣೆ ಬುಕ್ಕಿಂಗ್ ಜೋರಾಗಿದೆ.

ಬಿಗಿ ಭದ್ರತೆ:
ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತದೆ. ಮದ್ಯಪಾನ ಮಾಡಿ ವ್ಹೀಲಿಂಗ್ ಮಾಡುವ ಹಿನ್ನೆಲೆಯಲ್ಲಿ ಕೆಲವು ಮೇಲ್ಸೇತುವೆ ರಸ್ತೆಗಳನ್ನು ಬಂದ್ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಹೊಸ ವರ್ಷ ಆಚರಣೆ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಿದ್ದಾರೆ.
ಹೊಸ ವರ್ಷ ಆಚರಣೆ ದಿನವೇ ಬಂದ್:
ಡಿ. 31 ರಂದು ರಾತ್ರಿ ಹೊಸ ವರ್ಷ ಆಚರಣೆ ಮಾಡಲಾಗುತ್ತದೆ. ಅದೇ ದಿನ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಹೀಗಾಗಿ ಸಂಚಾರದಲ್ಲಿ ವ್ಯತ್ಯಯವಾಗಬಹುದು. ಇನ್ನು ಕರ್ನಾಟಕ ಬಂದ್‌ಗೆ ಸಂಬಂಧ ಪಟ್ಟಂತೆ ರಾಜಧಾನಿಯಲ್ಲಿ ಯಾವುದೇ ಕನ್ನಡಪರ ಸಂಘಟನೆ ಅನುಮತಿ ಪಡೆದಿಲ್ಲ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಡಿ. 31 ಕರ್ನಾಟಕ ಬಂದ್ ಮಾಡುವ ಬಗ್ಗೆ ಯಾವುದೇ ಕನ್ನಡ ಪರ ಸಂಘಟನೆಗಳಿಂದ ಅನುಮತಿ ಪಡೆದಿಲ್ಲ. ಅನುಮತಿ ಪಡೆದರೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು. ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications