ಬೆಂಗಳೂರು ರಾಷ್ಟ್ರ ರಾಜಧಾನಿ ಎಂದು ಪರಿಗಣಿಸಲು ಮೋದಿಗೆ ಮನವಿ: ಡಿ.ಕೆ ಶಿವಕುಮಾರ್
ಬೆಂಗಳೂರನ್ನು ರಾಷ್ಟ್ರ ರಾಜಧಾನಿಯಂತೆ ಪರಿಗಣಿಸಬೇಕು. ಅಲ್ಲದೇ ಬೆಂಗಳೂರಿನ ಅಭಿವೃದ್ಧಿಗೆ ಕನಿಷ್ಠ 1 ಲಕ್ಷ ಕೋಟಿಯನ್ನಾದರೂ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಆಗಸ್ಟ್ 10ರಂದು ಬೆಂಗಳೂರಿನ ಯೆಲ್ಲೋ ಲೈನ್ ಉದ್ಘಾಟನೆಯ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ಸಹ ನಡೆದಿದೆ.
ಬೆಂಗಳೂರಿನ ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ಇಂದು ಲೋಕಾರ್ಪಣೆಯಾಗುತ್ತಿದೆ. 7,610 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮಾರ್ಗದಲ್ಲಿ 16 ನಿಲ್ದಾಣಗಳಿದ್ದು, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಒದಗಿಸಲಿದೆ ಎಂದು ಸಹ ಡಿ.ಕೆ ಶಿವಕುಮಾರ್ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮುಂದುವರಿದು ಡಿ.ಕೆ ಶಿವಕುಮಾರ್ ಅವರು, ಬೆಂಗಳೂರಿಗೆ ಏನು ಬೇಕು, ಏನು ಕೊಡಬೇಕು ಎಂಬುದನ್ನು ನಾನು ಅವರಿಗೆ ತಿಳಿಸುತ್ತೇನೆ. ಕೇಂದ್ರದಿಂದ ನಮಗೆ ಸಾಕಷ್ಟು ಅನುದಾನ ಸಿಕ್ಕಿಲ್ಲ, ಇದರಿಂದ ಬೆಂಗಳೂರು ನಿರ್ಲಕ್ಷ್ಯಕ್ಕೊಳಗಾಗಿದೆ. ಈ ನಗರವನ್ನು ರಾಷ್ಟ್ರೀಯ ರಾಜಧಾನಿಯಂತೆ ನೋಡಿಕೊಳ್ಳಬೇಕು ಎಂದು ನಾನು ಪ್ರಧಾನಿ ಮೋದಿಯವರಿಗೆ ಹೇಳಲು ಬಯಸುತ್ತೇನೆ - ಇದೇ ಮಾತು ಅಟಲ್ ಬಿಹಾರಿ ವಾಜಪೇಯಿಯವರದು. ಇಂದು ಬಿಜೆಪಿಯ ಸಂಸದರು ಮತ್ತು ಶಾಸಕರು ಕೇವಲ ಮೋದಿ ಅಥವಾ ಪಕ್ಷದ ಹೆಸರಿನಲ್ಲೇ ಮತಗಳನ್ನು ಪಡೆಯುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕಾರ್ಪಣೆಗೊಂಡಿರುವ ರೂ.7,160 ಕೋಟಿ ವೆಚ್ಚದ ಯೆಲ್ಲೋ ಲೈನ್ ಬೆಂಗಳೂರು ಮೆಟ್ರೋದಿಂದ ಬೆಂಗಳೂರಿನ ಪ್ರಮುಖ ಐಟಿ ಮತ್ತು ತಂತ್ರಜ್ಞಾನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ವೃತ್ತಿಪರರಿಗೆ, ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ತ್ವರಿತ ಪ್ರಯಾಣಕ್ಕೆ ಸಹಕಾರಿಯಾಗಲಿದೆ.
ಪ್ರತಿದಿನವೂ 3.5 ಲಕ್ಷ ಪ್ರಯಾಣಿಕರು ಹಳದಿ ಮಾರ್ಗ ಬಳಸುವ ನಿರೀಕ್ಷೆಯಿದೆ. ಇದರಿಂದ ಮುಖ್ಯವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಜಯದೇವ ಆಸ್ಪತ್ರೆ ಸುತ್ತಲಿನ ಭಾರೀ ಟ್ರಾಫಿಕ್ ಸಮಸ್ಯೆ ಸುಧಾರಿಸುವ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಕ್ರೆಡಿಟ್ ವಾರ್‌ನ ಜೊತೆ ಜೊತೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ವಾಕ್ಸಮರವೂ ಮುಂದುವರಿದಿದೆ. ಈ ಸಂಬಂಧ ರಿಯಾಕ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಚ್ಛಾಶಕ್ತಿಯಿಲ್ಲ. ವೇಗವಾಗಿ ಬೆಳೆಯುತ್ತಿರುವ ರಾಜಧಾನಿಗೆ ಪೂರಕವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆದರೆ ಪ್ರಧಾನಿ ಮೋದಿ ಅವರಿಗೆ ಬೆಂಗಳೂರಿನ ಬಗ್ಗೆ ವಿಶೇಷ ಆಸಕ್ತಿ, ಕನಸುಗಳಿದ್ದು ಬೆಂಗಳೂರಿನ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಎಂದಿದ್ದಾರೆ.












Click it and Unblock the Notifications