ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಿ: ಸರ್ಕಾರಕ್ಕೆ ಮನವಿ
ಬೆಂಗಳೂರು ಆಗಸ್ಟ್ 15: ಐತಿಹಾಸಿಕ ಮಹತ್ವದ ಹಾಗೂ ರಾಷ್ಟ್ರೀಯ ಏಕತೆ, ಸಾಮಾಜಿಕ ಸಾಮರಸ್ಯ ಮೂಡಿಸುವ ಗಣೇಶ ಉತ್ಸವಕ್ಕೆ ಈ ವರ್ಷ ಮುಕ್ತ ವಾತಾವರಣ ನಿರ್ಮಿಸಿಕೊಡಬೇಕು ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಆಗ್ರಹಿಸಿದೆ.
ಈ ಕುರಿತು ಮಾತನಾಡಿರುವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಅವರು, ಹಿಂದೂಗಳ ಪ್ರಮುಖ ಧಾರ್ಮಿಕ ಹಬ್ಬವಾದ ಈ ಗಣೇಶ ಉತ್ಸವವು ಆಚರಣೆಗೆ ಸೀಮಿತವಾಗದೆ ಸಾವಿರಾರು ಕುಟುಂಬಗಳ ಬದುಕನ್ನು ಕಟ್ಟಿಕೊಡುವ, ಉದ್ಯೋಗ ನೀಡುವ ಹಾಗೂ ಆರ್ಥಿಕ ಸಬಲೀಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸರ್ಕಾರದ ನಿರ್ಬಂಧ ಸೇರಿದಂತೆ ಇನ್ನಿತರ ಕಾರಣಗಳಿಂದ ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಮಂಡಳಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಎಲ್ಲಾ ಗಣೇಶೋತ್ಸವ ಸಮಿತಿಗಳು ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಮುಕ್ತ ವಾತಾವರಣ ನಿರ್ಮಿಸಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.
ವಿಶ್ವ ಹಿಂದು ಪರಿಷತ್, ಹಿಂದು ಜಾಗರಣ ವೇದಿಕೆ ಮತ್ತು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ನಡೆಸಿದ ಸಭೆಯಲ್ಲಿ ಕೆಲವು ವಿಷಯಗಳನ್ನು ನಿರ್ಧರಿಸಲಾಗಿದೆ. ಆ ಪ್ರಕಾರ, ಗಣೇಶೋತ್ಸವ ಕುರಿತು ಸರ್ಕಾರದ ನಿರ್ಧಾರಗಳು ಕನಿಷ್ಠ 60 ದಿನಗಳ ಮುನ್ನ ತಿಳಿಸಬೇಕು. ಮೂರ್ತಿ ತಯಾರಕರಿಗೆ ಮತ್ತು ಮಾರಾಟಗಾರರಿಗೆ ಯಾವುದೇ ತೊಂದರೆಯಾಗದಂತೆ ಸಂಬಂಧಿಸಿದ ಇಲಾಖೆಗಳಿಗೆ ಆದೇಶಿಸಬೇಕು ಎಂದು ಮನವಿ ಮಾಡಿವೆ.

ನಿರ್ಬಂಧ ವಿಧಿಸದೇ ಮುಕ್ತ ಅವಕಾಶ ನೀಡಿ
ಗಣೇಶೋತ್ಸವ ಸಂದರ್ಭದಲ್ಲಿ ಮಾತ್ರ ಹೆಚ್ಚು ಪರಿಸರದ ಕಾಳಜಿ ತೊರಿಸುವ ಪರಿಸರ ಮತ್ತು ಮಾಲಿನ್ಯ ಮಂಡಳಿ, ಗಣೇಶ ಮೂರ್ತಿಗಳಿಂದಲೇ ಹೆಚ್ಚು ಪರಿಸರ ಮಾಲಿನ್ಯ ಆಗುತ್ತದೆ ಆನ್ನುವ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ. ಇದು ಸರಿಯಲ್ಲ. ಇದನ್ನು ನಿಲ್ಲಿಸುವ ಜತೆಗೆ ಪಿಒಪಿ, ಮೂರ್ತಿಯ ಎತ್ತರ, ಬಣ್ಣದ ಬಗ್ಗೆ ಯಾವುದೇ ನಿರ್ಬಂಧಗಳನ್ನು ವಿಧಿಸಬಾರದು ಎಂದು ಅವರು ಮನವಿ ಮಾಡಿದರು.

ಮಾಲಿನ್ಯ ದೃಷ್ಟಿಯಿಂದ ಪಿಒಪಿ ಗಣೇಶ ಮೂರ್ತಿಗಳನ್ನು ಕೆರೆಗಳಲ್ಲಿ ಬಿಡದೆ ತಾತ್ಕಾಲಿಕ ಕಲ್ಯಾಣಿ, ಹೊಂಡಗಳ ವ್ಯವಸ್ಥೆಯನ್ನು ಸರ್ಕಾರವೇ ಮಾಡಬೇಕು. ಪ್ರತಿ ವರ್ಷ ಅನುಮತಿಗೆ ಕಾಯುವಂತಾಗಿದೆ. ಅದರ ಬದಲು ಆನೇಕ ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದ ಸಮಿತಿಗಳಿಗೆ ಕನಿಷ್ಟ ಐದು ವರ್ಷಗಳ ಪರವಾನಿಗೆಯನ್ನು ನೀಡಬೇಕು. ಧ್ವನಿ ವರ್ಧಕ, ಡಿಜೆ ಬಳಕೆಗೆ ನಿರ್ಬಂಧ ವಿಧಿಸದೆ ಅವಕಾಶವನ್ನು ಕಲ್ಪಿಸಿ ಕೊಡಬೇಕು. ಪೋಲಿಸರ ಕಿರುಕುಳ, ಪ್ರಕರಣ ದಾಖಲು ಮಾಡದೇ ಮೆರವಣಿಗೆಗೆ ಅವಕಾಶ ಮಾಡಿಕೊಡುವುದು ಸೇರದಿಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಕೋರಿದರು.











Click it and Unblock the Notifications