Power Cut: ಪದೇಪದೇ ಪವರ್ ಕಟ್ ಇಂಧನ ಸಚಿವರಿಗೇ ಮೊಬೈಲ್ ಟಾರ್ಚ್!
ಸೂರ್ಯನಿಗೇ ಟಾರ್ಚಾ ಎನ್ನುವಂತೆ ಕರ್ನಾಟಕದ ಪವರ್ ಮಿನಿಸ್ಟರ್‌ಗೆ ಪವರ್ ಕೈಕೊಟ್ಟ ಘಟನೆ ಶುಕ್ರವಾರ ಸಂಭವಿಸಿದ್ದು, ಇಂಧನ ಸಚಿವ ಕೆ.ಜೆ ಚಾರ್ಜ್ ಅವರು ತೀವ್ರ ಮುಜುಗರಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ಭಾಗದಲ್ಲಿ ಪವರ್ ಕಟ್ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಅದರ ಬಿಸಿ ಇದೀಗ ಸಚಿವರಿಗೇ ಮುಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನ ಈ ವಿಷಯದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಪದೇಪದೇ ಪವರ್ ಕೈಕೊಟ್ಟು ಇಂಧನ ಸಚಿವರೇ ತೀವ್ರ ಮುಜುಗರಕ್ಕೆ ಒಳಗಾದ ಪ್ರಸಂಗ ಕೋಲಾರದಲ್ಲಿ ನಡೆದಿದೆ. ಇನ್ನು ಇಂಧನ ಸಚಿವರ ಕೋಲಾರ ಭಾಗದಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆಯ ಬಗ್ಗೆ ಸಭೆ ನಡೆಸುವ ಸಂದರ್ಭದಲ್ಲೇ ಪವರ್ ಕಟ್ ಆಗಿದ್ದು, ಅಧಿಕಾರಿಗಳ ಮೇಲೆ ಇಂಧನ ಸಚಿವ ಗರಂ ಆಗಿದ್ದಾರೆ. ಕೋಲಾರದಲ್ಲಿ ನಿರಂತರವಾಗಿ ಪವರ್ ಕಟ್ ಸಂಭವಿಸುತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಕೋಲಾರ ಭಾಗದಲ್ಲಿ ಪವರ್ ಕಟ್ ತಪ್ಪಿಸುವ ಉದ್ದೇಶದಿಂದ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಶುಕ್ರವಾರ ಕೋಲಾರದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯನ್ನು ಕರೆದಿದ್ದರು. ಆದರೆ, ಈ ಸಭೆಯಲ್ಲೇ ಹಲವು ಬಾರಿ ಪವರ್ ಕಟ್ ಆಗಿದ್ದು, ಸಾರ್ವಜನಿಕವಾಗಿ ಇಂಧನ ಸಚಿವರು ಮುಜುಗರಕ್ಕೆ ಒಳಗಾದರು.
ಕತ್ತಲಲ್ಲಿ ಕುಳಿತ ಮಿನಿಸ್ಟರ್
ವಿದ್ಯುತ್ ಪೂರೈಕೆ ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಕೋಲಾರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಭೆ ಆಯೋಜಿಸಲಾಗಿತ್ತು. ಸಭೆ ಪ್ರಾರಂಭವಾಗಿ ಕೆಲವೇ ನಿಮಿಷಗಳಿಗೆ ಪದೇಪದೇ ಪವರ್ ಕಟ್ ಆಗಲು ಪ್ರಾರಂಭವಾಯಿತು. ಎಷ್ಟರ ಮಟ್ಟಿಗೆ ಎಂದರೆ, ಇಂಧನ ಸಚಿವರು ಕೆಲ ಸಮಯ ಕತ್ತಲಲ್ಲೇ ಕುಳಿತುಕೊಳ್ಳುವಂತಾಯಿತು.
ಯಾಕ್ರೀ ಪವರ್ ಕಟ್ ಮಾಡ್ತಾ ಇದ್ದೀರಿ ಎಂದ ಮಿನಿಸ್ಟರ್
ಪದೇಪದೇ ಪವರ್ ಕಟ್ ಆಗುತ್ತಿದ್ದರಿಂದ ತೀವ್ರ ಮುಜುಗರಕ್ಕೆ ಒಳಗಾದ ಸಚಿವರು, ಯಾರ್ರೀ ಅದು ಇಷ್ಟು ಸಲ ಯಾಕೆ ಪವರ್ ಕಟ್ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ, ಜನರೇಟರ್ ಓವರ್ ಲೋಡ್ ಆಗ್ಬಿಟ್ಟಿದೆ ಸರ್ ಎನ್ನುವ ಉತ್ತರ ಬಂತು.
ನಾವು ಅಡ್ಜೆಸ್ಟ್ ಮಾಡಿಕೊಳ್ತೀವಿ, ನೀವೂ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ!
ಪವರ್ ಕಟ್ ವಿಷಯವನ್ನು ಮಾಧ್ಯಮಗಳು ಖಂಡಿತ ಸುದ್ದಿ ಮಾಡುತ್ತವೆ. ಇದರಿಂದ ಮುಜುಗರವಾಗುತ್ತೆ ಅಂತ ಗೊತ್ತಾಗುತ್ತಿದ್ದಂತೆ ಇಂಧನ ಸಚಿವರು ಪತ್ರಕರ್ತರನ್ನು ಉದ್ದೇಶಿಸಿ, ನಾವು ಅಡ್ಜೆಸ್ಟ್ ಮಾಡಿಕೊಳ್ಳುತ್ತೇವೆ, ನೀವೂ ಸಹ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ ಎಂದರು.
ನಾಳೆ ಮಾಧ್ಯಮದವರು ಇಂಧನ ಸಚಿವರ ಸಭೆಯಲ್ಲೇ ಪವರ್ ಕಟ್ ಅಂತ ವರದಿ ಮಾಡ್ತಾರೆ ನೋಡಿ ಎಂದ ಸಚಿವರು, ವಿದ್ಯುತ್ ಕೊರತೆಯಿಂದ ಸಮಸ್ಯೆ ಆಗಿಲ್ಲ ರೀ, ಬೇರೆನೋ ತಾಂತ್ರಿಕ ಸಮಸ್ಯೆ ಅಷ್ಟೇ, ಸಭಾಂಗಣದಲ್ಲೇ ಸಮಸ್ಯೆ ಇದ್ಯಂತೆ ನಾನು ವರದಿ ಕೇಳಿದ್ದೀನಿ. ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ತೀನಿ ಎಂದು ಜಾರಿಕೊಂಡರು.
ಜಿಲ್ಲಾಧಿಕಾರಿಯೂ ಗರಂ
ಇನ್ನು ಈ ಘಟನೆಯಿಂದ ಕೋಲಾರದ ಜಿಲ್ಲಾಧಿಕಾರಿಯೂ ಗರಂ ಆಗಿದ್ದು, ಕಂಡುಬಂತು. ಪವರ್ ಕಟ್ ಆಗುತ್ತಿದ್ದಂತೆಯೇ ಕೋಲಾರದ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೀಟ್‌ನಿಂದ ಎದ್ದು ಹೋಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯನ್ನು ಸಹ ನಿರೀಕ್ಷಿತ ಪ್ರಮಾಣದಲ್ಲಿ ನಡೆಸದ ಇಂಧನ ಸಚಿವ ಕೆ.ಜೆ ಜಾರ್ಚ್ ಅವರು ಬೇಗ ಸಭೆಯಿಂದ ಹೊರ ಬಂದರು.












Click it and Unblock the Notifications