RCB Tragedy: ದೇವಿ ತಮಿಳುನಾಡಿನವಳಾದ್ರೂ ಆರ್‌ಸಿಬಿ ಅಂದ್ರೆ ಜೀವ ಬಿಡ್ತಿದ್ಳು, ಈಗ ಅವಳೇ ಇಲ್ಲ!
ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ದುರಂತದಲ್ಲಿ ಹಸುನೀಗಿದ 11 ಮಂದಿಯ ಕಥೆ ಕೇಳಿದ್ರೆ ಎಂತವರಿಗೂ ಕರುಳು ಕಿತ್ತುಬರುತ್ತೆ. ಒಬ್ಬೊಬ್ಬರ ಕಥೆಯೂ ಹೃದಯವಿದ್ರಾವಕವಾಗಿದೆ. ಇದೇ ದುರಂತದಲ್ಲಿ ಸಾವನ್ನಪ್ಪಿದ ದೇವಿ ಅವರ ಕಥೆ ಕೂಡ ಕಣ್ಣೀರು ತರಿಸುತ್ತದೆ. ತಮಿಳುನಾಡಿನಿಂದ ಬಂದು ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈಕೆ ಆರ್‌ಸಿಬಿಯ ಅಪ್ಪಟ ಅಭಿಮಾನಿ. ತನ್ನ ನೆಚ್ಚಿನ ಟೀಂ ಮೊದಲ ಕಪ್ ಗೆದ್ದಿದೆ ಎಂದು ಮಾಡುತ್ತಿದ್ದ ಕೆಲಸವನ್ನೂ ಅರ್ಧಕ್ಕೆ ನಿಲ್ಲಿಸಿ ಓಡೋಡಿ ಬಂದಿದ್ದರು. ಆ ದಿನ ಏನು ನಡೆಯಿತು ಎಂದು ದೇವಿಯ ಸಹೋದ್ಯೋಗಿಯೊಬ್ಬರು ವಿವರಿಸಿದ್ದಾರೆ.
ಮೂಲತಃ ತಮಿಳುನಾಡಿನವರಾದ ದೇವಿ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಮಾನ್ಯವಾಗಿ ತಮಿಳುನಾಡಿನವರು ಹೆಚ್ಚಾಗಿ ಸಿಎಸ್‌ಕೆ ತಂಡದ ಕಡೆಗೆ ಅಭಿಮಾನವಿದ್ದರೆ, ದೇವಿಗೆ ಆರ್‌ಸಿಬಿ ತಂಡ ಅಂದ್ರೆ ಪಂಚಪ್ರಾಣವಾಗಿತ್ತು. ಆರ್‌ಸಿಬಿ ತಂಡದ ಕಟ್ಟಾ ಅಭಿಮಾನಿಯಾಗಿದ್ದ ದೇವಿ ತಮ್ಮ ಪೋಷಕರಿಗೆ ಏಕೈಕ ಪುತ್ರಿ. ಆರ್‌ಸಿಬಿ ಕೊನೆಗೂ ಈ ಸಲ ಕಪ್ ನಮ್ದೇ ಎಂದ ಜೋಶ್‌ನಲ್ಲಿ ಬೆಂಗಳೂರಿನಲ್ಲಿ ನಡೆಯುವ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಅಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದ ದೇವಿ, ಆರ್‌ಸಿಬಿ ತಂಡ ಬೆಂಗಳೂರಿಗೆ ಬರುವುದನ್ನು ತಿಳಿದು ಆಫೀಸ್‌ನಿಂದ ಹೊರಡಲು ಪ್ಲ್ಯಾನ್ ಮಾಡಿದ್ದರು. ಈ ಘಟನೆಗ ಕೆಲವು ಗಂಟೆಗಳ ಹಿಂದಷ್ಟೇ ಕೆಲಸಕ್ಕೆ ರಜೆ ಕೇಳಿದ್ದರು ಎಂದು ದೇವಿ ಆಫೀಸ್ ಸಹೋದ್ಯೋಗಿ ಕಣ್ಣೀರಿಟ್ಟಿದ್ದಾರೆ.

ಅವಳು ಆರ್‌ಸಿಬಿ ಕಾರ್ಯಕ್ರಮಕ್ಕೆ ಹೊರಡಲು ರಜೆಗಾಗಿ ಬಾಸ್ ಬಳಿ ದುಂಬಾಲು ಬಿದ್ದಿದ್ದಳು. ಅಂತಿಮವಾಗಿ ಮಧ್ಯಾಹ್ನ 2.30ರ ಸುಮಾರಿಗೆ ಅವಳಿಗೆ ರಜೆಗೆ ಗ್ರೀನ್‌ಸಿಗ್ನಲ್ ಸಿಕ್ಕಿತು. ಅಲ್ಲಿಂದ ತುಂಬಾ ಉತ್ಸುಕವಾಗಿ ಹೊರಟಳು. ಬಳಿಕ ಈ ದುರಂತ ಸಂಭವಿಸಿತು ಎಂದು ದೇವಿ ಸ್ನೇಹಿತೆ ನೆನೆದಿದ್ದಾರೆ. ಅವಳ ಲ್ಯಾಪ್‌ಟಾಪ್ ಇನ್ನೂ ಟೇಬಲ್ ಮೇಲಿದೆ, ಅವಳ ಬ್ಯಾಗ್‌ಗಳು ಕೂಡ ಅಲ್ಲೇ ಇವೆ. ಆದರೆ ಅವಳೇ ಇಲ್ಲ ಎಂದು ಬಿಕ್ಕಳಿಸಿ ಅತ್ತಿದ್ದಾರೆ.
ತಮಿಳುನಾಡಿನಿಂದ ಬಂದಿದ್ದ ದೇವಿ ಬೆಂಗಳೂರಿನಲ್ಲಿ ಓದಿ, ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆರ್‌ಸಿಬಿಗೆ ತೀವ್ರ ನಿಷ್ಠೆ ಹೊಂದಿದ್ದ ಅವಳು ಬೆಂಗಳೂರಿನಲ್ಲಿ ಒಂದೇ ಒಂದು ಪಂದ್ಯವನ್ನು ತಪ್ಪಿಸಿರಲಿಲ್ಲ. ಅವಳು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಅಂದೂ ಕೂಡ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಸಂಭ್ರಮಾಚರಣೆ ಕಣ್ತುಂಬಿಕೊಳ್ಳಬೇಕು ಎಂದುಕೊಂಡಿದ್ದಳು. ಬಳಿಕ ಆರ್‌ಸಿಬಿ ಎಂಟ್ರಿ ಟಿಕೆಟ್‌ಗಳನ್ನು ವಿತರಿಸುತ್ತಿರುವುದನ್ನು ಕೇಳಿ ಅಲ್ಲಿಗೆ ಹೋಗಲು ನಿರ್ಧರಿಸಿದಳು ಎಂದು ಆ ದಿನದ ಘಟನೆ ಬಿಚ್ಚಿಟ್ಟಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದು, ಬಹುತೇಕರು ಆರ್‌ಸಿಬಿ ಅಭಿಮಾನಿಗಳೇ ಆಗಿದ್ದು, ಸಂಭ್ರಮಾಚರಣೆ ಮಾಡಲು ಬಂದವರು ಶೋಕಾಚರಣೆಗೆ ಗುರಿಯಾದರು. ಆರ್‌ಸಿಬಿ ಮೇಲಿನ ಅಭಿಮಾನಕ್ಕೆ ತಮ್ಮ ಮನೆ ಮಕ್ಕಳ ಪ್ರಾಣಪಕ್ಷಿಯೇ ಹಾರಿ ಹೋಗಿದ್ದನ್ನು ನೆನೆದು ಮೃತರ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ.












Click it and Unblock the Notifications