Get Updates
Get notified of breaking news, exclusive insights, and must-see stories!

ಆರ್‌ಸಿಬಿ ಕಾಲ್ತುಳಿತ ದುರಂತಕ್ಕೆ ಇವರೇ ನಿಜವಾದ ಹೊಣೆಗಾರರು: ನಾರಾಯಣಗೌಡ ಹೇಳಿದ್ದೇನು?

ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಘೋರ ದುರಂತದ ದೃಶ್ಯಗಳನ್ನು ನೋಡಿ, ಅದರ ಆಘಾತದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಹನ್ನೊಂದು ಅಮಾಯಕ ಜೀವಗಳು ಹಾಗೆ ಅನ್ಯಾಯವಾಗಿ ಹೊಸಕಿ ಹಾಕಲ್ಪಟ್ಟವಲ್ಲ, ಅದನ್ನು ಹೇಗೆ ಅರಗಿಸಿಕೊಳ್ಳುವುದು? ಆ ಮಕ್ಕಳ ಕುಟುಂಬದವರ ನೋವಿಗೆ ಸಾಂತ್ವನ ಎಲ್ಲಿದೆ? ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸಂಕಟ ಹೊರಹಾಕಿದ್ದಾರೆ. ನಿನ್ನೆಯಿಂದ ಇಡೀ ಕರ್ನಾಟಕ, ದೇಶ, ಏಳುವರೆ ಕೋಟಿ ಕನ್ನಡಿಗರು ಕಾಲ್ತುಳಿತದಲ್ಲಿ ಬಲಿಯಾದ ಆ ಮಕ್ಕಳಿಗಾಗಿ ಮರುಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಗಲಿದ ಎಲ್ಲ ಜೀವಗಳ ಕುಟುಂಬದವರೊಂದಿಗೆ ಇರುತ್ತದೆ. ಬಾಳಿ ಬದುಕಬೇಕಾದ ಎಳೆಯ ಜೀವಗಳಿಗೆ ಭಾರವಾದ ಹೃದಯದಿಂದ ಶ್ರದ್ಧಾಂಜಲಿ ಸಲ್ಲಿಸುವೆ ಎಂದು ಸಂತಾಪ ಸೂಚಿಸಿದ್ದಾರೆ.

ಆರ್‌ಸಿಬಿ ತಂಡ ಹದಿನೆಂಟು ವರ್ಷಗಳ ಬಳಿ ಐಪಿಎಲ್ ಟ್ರೋಫಿ ಗೆದ್ದಿದ್ದಕ್ಕೆ ಎಲ್ಲರಿಗೂ ಸಂತೋಷವಿತ್ತು, ಸಂಭ್ರಮವಿತ್ತು. ಆದರೆ ಅದು ಕೆಲವೇ ಘಂಟೆಗಳಲ್ಲಿ ಸೂತಕವಾಗಿ ಬದಲಾಗಿ ಹೋಯಿತು. ಹನ್ನೊಂದು ಜನರ ಮನೆಯ ದೀಪ ಆರಿಹೋಯಿತು. ಇದಕ್ಕೆ ಯಾರು ಹೊಣೆ, ಆ ಕುಟುಂಬದವರಿಗೆ ಎಲ್ಲಿದೆ ನ್ಯಾಯ? ಆರ್‌ಸಿಬಿ ತಂಡಕ್ಕೆ ಅಷ್ಟು ಆತುರಾತುರವಾಗಿ ಒಂದಲ್ಲ, ಎರಡು ಕಡೆ ಅಭಿನಂದನಾ ಸಮಾರಂಭಗಳನ್ನು ಆಯೋಜಿಸಿದ್ದು ಯಾಕೆ? ಆರ್‌ಸಿಬಿ ಅಭಿಮಾನಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಸೇರುವಂತೆ ಮಾಡಿದವರು ಯಾರು? ಯಾವ ಪುರುಷಾರ್ಥಕ್ಕಾಗಿ ಇದೆಲ್ಲ ನಡೆದುಹೋಯಿತು? ಎಂದು ಪ್ರಶ್ನಿಸಿದ್ದಾರೆ.

ನನ್ನ ದೃಷ್ಟಿಯಲ್ಲಿ ಈ ಭೀಕರ ದುರಂತಕ್ಕೆ ಎಲ್ಲರೂ ಹೊಣೆಗಾರರು. ಸಮೂಹ ಸನ್ನಿಗೆ ಬಲಿಯಾಗಿ ವಿಜಯೋತ್ಸವಕ್ಕೆ ಅನಗತ್ಯ ಉತ್ಸಾಹ ತೋರಿದ ರಾಜ್ಯ ಸರ್ಕಾರ, ಕಾರ್ಯಕ್ರಮವನ್ನು ಗೊತ್ತು ಗುರಿಯಿಲ್ಲದೆ ಆಯೋಜಿಸಿದ ಕರ್ನಾಟಕ ಕ್ರಿಕೆಟ್ ಅಸೋಸಿಯಷನ್, ಆರ್‌ಸಿಬಿ ಮ್ಯಾನೇಜ್ಮೆಂಟ್, ಈವೆಂಟ್ ನಡೆಸುವ ಸಂಸ್ಥೆ, ಕೊನೆಗೆ ಸಂಭ್ರಮಕ್ಕೂ ಹುಚ್ಚಾಟಕ್ಕೂ ವ್ಯತ್ಯಾಸ ಗೊತ್ತಿಲ್ಲದ ಅಭಿಮಾನಿಗಳು ಎಲ್ಲರೂ ಕಾರಣ ಎಂದು ದೂರಿದ್ದಾರೆ.

rcb-celebrations-questioned-by-krv-leader-ta-narayana-gowda

ನಿನ್ನೆಯ ದುರ್ಘಟನೆ ಸಂದರ್ಭದಲ್ಲಿ ಇದ್ದ ಎರಡು, ಮೂರು ಸಾವಿರ ಪೊಲೀಸರು ತಮ್ಮ ಶಕ್ತಿ ಮೀರಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಮೂರು-ನಾಲ್ಕು ಲಕ್ಷದಷ್ಟು ಜನರನ್ನು ನಿರ್ವಹಿಸಲು ಇಷ್ಟು ಪೊಲೀಸರಿಗೆ ಸಾಧ್ಯವೇ ಇರಲಿಲ್ಲ. ಹಾಗಿದ್ದ ಮೇಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ಯಾರು? ಯಾವ ಧೈರ್ಯದ ಮೇಲೆ ಅನುಮತಿ ಕೊಟ್ಟರು? ಅದೂ ಕೂಡ ಯಾವ ಪೂರ್ವ ತಯಾರಿಯೂ ಇಲ್ಲದೆ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ದಯಾನಂದ್‌ಗೆ ತಕ್ಕ ಪಾಠ ಆಗಿದೆ

ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಅಮಾನತು ಮಾಡಲಾಗಿದೆ. ಇದು ಅವರಿಗೆ ಆಗಬೇಕಿತ್ತು. ಯಾರು ಎಷ್ಟೇ ಒತ್ತಡ ಹೇರಲಿ, ತೀರ್ಮಾನ ತೆಗೆದುಕೊಳ್ಳಬೇಕಾಗಿದ್ದು ಪೋಲೀಸ್ ಕಮಿಷನರ್. ಅವರ ತಪ್ಪು ನಿರ್ಧಾರವು ಕೂಡ ಈ ಘೋರ ದುರಂತಕ್ಕೆ ಪ್ರಮುಖ ಕಾರಣ. ಇದೇ ದಯಾನಂದ್ ಅವರು 2023ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಐತಿಹಾಸಿಕ ಕನ್ನಡ ನಾಮಫಲಕ ಚಳವಳಿ ಸಂದರ್ಭದಲ್ಲಿ ಹೇಗೆ ಚಳವಳಿಗಾರರೊಂದಿಗೆ ಹೇಗೆ ನಡೆದುಕೊಂಡರು ಎಂಬುದು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನನ್ನ ಮೇಲೆ ಹದಿನಾರು ಕೇಸ್‌ಗಳನ್ನು ಹಾಕಲಾಯಿತು. ನನ್ನನ್ನು ಮೂರು ನಾಲ್ಕು ತಿಂಗಳುಗಳ ಕಾಲ ಜೈಲಿನಲ್ಲೇ ಇಡುವ ಸಂಚು ನಡೆದಿತ್ತು. ನ್ಯಾಯಾಲಯ ಜಾಮೀನು ನೀಡಿದ್ದರಿಂದ ಹದಿನಾರು ದಿನಗಳ ನಂತರ ನಾನು ಜೈಲಿನಿಂದ ಹೊರಗೆ ಬಂದೆ ಎಂದು ಹೇಳಿದ್ದಾರೆ.

ಅಧಿಕಾರ ಯಾವತ್ತಿಗೂ ಶಾಶ್ವತ ಅಲ್ಲ ಎಂದು ನಾನು ಅವತ್ತೇ ದಯಾನಂದ್ ಅವರಿಗೆ ಹೇಳಿದ್ದೆ. ಈಗ ಕರ್ಮ ಅವರ ಕಡೆ ತಿರುಗಿ ಬಂದು ನಿಂತಿದೆ. ಮೂರು ದಶಕಕ್ಕೂ ಹೆಚ್ಚು ಕಾಲದ ನನ್ನ ಚಳವಳಿಯ ಅನುಭವದಲ್ಲಿ ಕನ್ನಡ ಚಳವಳಿಗಾರರನ್ನು ಕೆಟ್ಟದಾಗಿ ನಡೆಸಿಕೊಂಡವರಿಗೆ ಏನೇನೆಲ್ಲ ಆಗಿದೆ ಎಂಬುದನ್ನು ನಾನು ನೋಡಿದ್ದೇನೆ. ದಯಾನಂದ್ ಈ ಪಟ್ಟಿಗೆ ಹೊಸ ಸೇರ್ಪಡೆ ಅಷ್ಟೇ. ಚಳವಳಿಗಾರರು ಪ್ರತಿಭಟನೆ ಮಾಡಬೇಕೆಂದರೆ ಫ್ರೀಡಂಪಾರ್ಕ್‌ನಲ್ಲಿ ಹೋಗಿ ಬಾಯಿ ಬಡಿದುಕೊಳ್ಳಬೇಕು. ಬೀದಿಗೆ ಬಂದ್ರೆ ಪೊಲೀಸರು ಕೇಸು ಹಾಕುತ್ತಾರೆ. ಅದಕ್ಕೆ ಕೋರ್ಟಿನ ತೀರ್ಮಾನವನ್ನು ಮುಂದೆ ಇಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಇಡೀ ಬೆಂಗಳೂರು ನಗರ ನಲುಗಿ ಹೋಯಿತಲ್ಲ? ಅದಕ್ಕೆ ನ್ಯಾಯಾಲಯದ ಆದೇಶ ಅಡ್ಡಿ ಬರುವುದಿಲ್ಲವೇ? ನ್ಯಾಯ ಕೇಳಿ ಪ್ರತಿಭಟನೆ ಮಾಡುವವರಿಗೆ ಅನುಮತಿ ಸಿಗುವುದಿಲ್ಲ, ವಿಜಯೋತ್ಸವದ ಹೆಸರಿನಲ್ಲಿ ಅಮಾಯಕ ಜೀವಗಳನ್ನು ತುಳಿದು ಹಾಕುವ ಕಾರ್ಯಕ್ರಮಗಳಿಗೆ ಅನುಮತಿ ಸಿಗುತ್ತೆ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ. ಇದಕ್ಕೆ ನನ್ನ ಧಿಕ್ಕಾರ. ಹನ್ನೊಂದು ಜೀವಗಳನ್ನು ಬಲಿ ತೆಗೆದುಕೊಂಡ ದುರ್ಘಟನೆಗೆ ಯಾರು ಯಾರು ಕಾರಣರೋ ಎಲ್ಲರಿಗೂ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+