ರವಿಶಂಕರ್ ಗುರೂಜಿ ಆಶ್ರಮ ಉದ್ಯೋಗಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಬೆಂಗಳೂರು, ಜ. 27: ಕೌಟುಂಬಿಕ ಕಲಹದಲ್ಲಿ ಮಧ್ಯ ಪ್ರವೇಶಿಸಿ ಎಸಿಪಿ ಹಾಕಿದ ಧಮ್ಕಿಗೆ ಮುಗ್ಧ ಜೀವ ಬಲಿ ಆಯಿತೇ? ಕೌಟುಂಬಿಕ ಕಲಹ ಇತ್ಯರ್ಥ ಮಾಡಬೇಕಿದ್ದ ಪೊಲೀಸ್ ಅಧಿಕಾರಿ ನಡವಳಿಕೆಗೆ ಭಯಬಿದ್ದು ಖಾಸಗಿ ಕಂಪನಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡನೇ?
ಇಂತಹ ಅನುಮಾನ ಮೂಡಲು ಕಾರಣವಿದೆ. ಕೌಟುಂಬಿಕ ಕಲಹ ನೆಪದಲ್ಲಿ ಜಯನಗರ ಎಸಿಪಿ ಬೆದರಿಕೆ ಹಾಕಿದ್ದರಿಂದ ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಮೃತ ವ್ಯಕ್ತಿಯ ಸಂಬಂಧಿ ಕಗ್ಗಲೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜಯನಗರ ಎಸಿಪಿ ಶ್ರೀನಿವಾಸ್ ವಿರುದ್ಧ ರೇವಣಸಿದ್ದೇಶ್ವರ ಕುಂತಿಮಠ ಎಂಬುವರು ದೂರು ನೀಡಿದ್ದಾರೆ. ನನ್ನ ಸಹೋದರನಿಗೆ ಎಸಿಪಿ ಶ್ರೀನಿವಾಸ್ ಬೆದರಿಕೆ ಹಾಕಿದ್ದರಿಂದ ಆತ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕಳೆದ ಜ. 20 ರಂದು ರೇವಣಸಿದ್ದೇಶ್ವರ ಕುಂತಿಮಠ ಅವರ ಸಹೋದರ ಈಶ್ವರ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ವಾಸಿಸುತ್ತಿದ್ದ ಕಗ್ಗಲೀಪುರದ ಬ್ರಿಗೇಡ್ ಮೆಡೋಸ್ ಅಪಾರ್ಟ್‌ಮೆಂಟ್‌ನಲ್ಲಿಯೇ ಆತ್ಮಹತ್ಯೆ ನಡೆದಿದೆ. ಕೌಟುಂಬಿಕ ಕಲಹ ವಿಚಾರದಲ್ಲಿ ಜಯನಗರ ಎಸಿಪಿ ಶ್ರೀನಿವಾಸ್ ನನ್ನ ಸಹೋದರಿಗೆ ಬೆದರಿಕೆ ಹಾಕಿದ್ದಾರೆ. ಕಾನೂನಿನ ಹದ್ದು ಮೀರಿ ವರ್ತನೆ ಮಾಡಿದ್ದರಿಂದ ನನ್ನ ಸಹೋದರ ಭಯ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಏನಿದು ಕೌಟುಂಬಿಕ ಕಲಹ:
ಕಳೆದ ಇಪ್ಪತ್ತು ವರ್ಷಗಳ ಹಿಂದೆ ಈಶ್ವರ್ ಕುಮಾರ್ ರಶ್ಮಿ ಎಂಬುವರನ್ನು ಪ್ರೀತಿಸಿ ಕುಟುಂಬದ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು. ಹದಿನೆಂಟು ವರ್ಷದ ಮಗಳಿದ್ದಾಳೆ. ಇಬ್ಬರ ನಡುವೆ ಅದೇನು ಒಡಕು ಮೂಡಿತೋ ಈಶ್ವರ್‌ನಿಂದ ಪತ್ನಿ ರಶ್ಮಿ ದೂರವಾಗಲು ನಿರ್ಧರಿಸಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇಧನ ನೀಡುವಂತೆ ಈಶ್ವರ್ ಕುಮಾರ್ ಗೆ ಪತ್ನಿ ಒತ್ತಾಯಿಸಿದ್ದಳು.
ರವಿಶಂಕರ್ ಆಶ್ರಮದ ಆಯುರ್ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಹಾಗೂ ಸೈಂಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈಶ್ವರ್ ಕುಮಾರ್, ಕಗ್ಗಲೀಪುರದ ಬ್ರಿಗೇಡ್ ಮೆಡ್ನೋಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಜ. 20 ರಂದು ಇದ್ದಕ್ಕಿದ್ದಂತೆ ಈಶ್ವರ್ ಕುಮಾರ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈಶ್ವರ್ ಸ್ನೇಹಿತ ನೀಡಿದ ಮಾಹಿತಿ ಮೇರೆಗೆ ಅವರ ಸಂಬಂಧಿಕರು ಹೋಗಿ ನೋಡಿದಾಗ ಇದು ದೃಢಪಟ್ಟಿತ್ತು.
ಆತ್ಮಹತ್ಯೆಗೂ ಮುನ್ನ ಈಶ್ವರ್ ಪತ್ನಿ ರಶ್ಮಿ ವಿಚ್ಛೇಧನ ನೀಡುವಂತೆ ಕೋರಿದ್ದರು ಎನ್ನಲಾಗಿದೆ. ಈ ಸಂಬಂಧ ರಶ್ಮಿ ದೂರು ನೀಡಿದ ಹಿನ್ನೆಲೆಯಲ್ಲಿ ಜ. 17 ರಂದು ಜಯನಗರ ಎಸಿಪಿ ಶ್ರೀನಿವಾಸ್ ಪೇದೆ ಅಜ್ಜಪ್ಪಣ್ಣ ಅವರನ್ನು ಈಶ್ವರ್ ಕುಮಾರ್ ಮನೆಗೆ ಕಳುಹಿಸಿ ಠಾಣೆಗೆ ಬರುವಂತೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಜ. 19 ರಂದು ವಕೀಲರ ಮೂಲಕ ಈಶ್ವರ್ ಕುಮಾರ್ ಜಯನಗರ ಎಸಿಬಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಈಶ್ವರ್ ಪತ್ನಿ ರಶ್ಮಿ, ಅವರ ಸಹೋದರ ಬಸವರಾಜ್, ತಂಗಿ ರೂಪಾ, ಮತ್ತಿತರರು ಅಲ್ಲಿಯೇ ಇದ್ದಾರೆ. ಈ ವೇಳೆ ಈಶ್ವರ್ ಕುಮಾರ್‌ನನ್ನು ಅವಾಚ್ಯ ಪದಗಳಿಂದ ನಿಂದನೆ ಮಾಡಿ ಅವಮಾನಿಸಿದ್ದಾರೆ. ರಶ್ಮಿ ಅವರ ಷರತ್ತುಗಳಿಗೆ ಒಪ್ಪಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇಧನಕ್ಕೆ ಸಹಿ ಹಾಕುವಂತೆ ಠಾಣೆಯಲ್ಲಿ ಬೆದರಿಸಿದ್ದಾರೆ.
ಈ ಒತ್ತಡದಿಂದ ನನ್ನ ಸಹೋದರ ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಹೋದರನ ಕೌಟುಂಬಿಕ ಕಲಹ ವಿಚಾರದಲ್ಲಿ ಎಸಿಪಿ ಶ್ರೀನಿವಾಸ್ ಮಧ್ಯ ಪ್ರವೇಶಿಸಿ ಬೆದರಿಕೆ ಹಾಕಿದ್ದಾರೆ. ಅವರು ಕಾನೂನು ಮೀರಿ ನಿಯಮ ಬಾಹಿರವಾಗಿ ನನ್ನ ಸಹೋದರನನ್ನು ಅವರ ಕಚೇರಿಗೆ ಕರೆಸಿ ಧಮ್ಕಿ ಹಾಕಿದ್ದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ತನಿಖೆ ನಡೆಸುವಂತೆ ಮೃತನ ಅಣ್ಣ ಕಗ್ಗಲೀಪುರ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ರೂಪಾ , ಬಸವರಾಜ್ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಎಸಿಪಿ ಶ್ರೀನಿವಾಸ್ ವಿರುದ್ಧವೂ ಗಂಭೀರ ಆರೋಪ ಕೇಳಿ ಬಂದಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications