ಸಿಡಿ ಪ್ರಕರಣದ ಕಿಂಗ್ ಪಿನ್‌ಗಳಿಗೆ ಇ-ಮೇಲ್ ನೋಟಿಸ್ ರವಾನೆ
ಬೆಂಗಳೂರು ಮಾರ್ಚ್ 1: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಸೇರಿ ಮೂವರಿಗೆ ಇಮೇಲ್ ಮೂಲಕ ನೋಟಿಸ್ ನೀಡಲಾಗಿದೆ. ಕೇವಲ ವಿಚಾರಣೆಗೆ ಸೀಮಿತವಾಗಿದ್ದ ಎಸ್ಐಟಿ ಇದೀಗ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲು ಬೇಕಿದ್ದ ಎಫ್ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಸಿಸಿಬಿ ಡಿವೈಎಸ್ಪಿ ಧರ್ಮೇಂದ್ರ ಸದಾಶಿವನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಜಾರಕಿಹೊಳಿ ದೂರು ಆಧರಿಸಿ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಶಂಕಿತ ಆರೋಪಿಗಳ ವಿಚಾರಣೆಗೆ ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
ಇ ಮೇಲ್ ಮೂಲಕ ನೋಟಿಸ್ : ಎಸ್ಐಟಿ ಮೂಲಗಳು ಹೇಳುವ ಪ್ರಕಾರ ಸಂತ್ರಸ್ತ ಯುವತಿ ವಿಜಯಪುರದ ಮನೆಯ ಮೇಲೆ ನೋಟಿಸ್ ಅಂಟಿಸಿದ್ದು, ಸೋಮವಾರ ವಿಚಾರಣೆಗೆ ಬರಲು ಸೂಚಿಸಲಾಗಿದೆ. ಇಲ್ಲವೇ ಇ ಮೇಲ್ ಮೂಲಕ ಭೇಟಿ ಮಾಡಲಿರುವ ಸ್ಥಳದ ಬಗ್ಗೆ ವಿವರ ನೀಡಿದರೆ, ಅಲ್ಲಿಗೆ ಬಂದು ಹೇಳಿಕೆ ದಾಖಲಿಸಿಕೊಂಡು ಸೂಕ್ತ ಭದ್ರತೆ ಕೊಡುವುದದಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನೋಟಿಸ್ ಅಂಟಿಸಿದ್ದಾರೆ.
ಇನ್ನೊಂದೆಡೆ ಸಿಡಿ ಸ್ಫೋಟ ಪ್ರಕರಣ ಸಂಬಂಧ ಯುವತಿ ಸೇರಿ ಇಬ್ಬರು ಶಂಕಿತ ಪ್ರಮುಖ ಆರೋಪಿಗಳಿಗೂ ಇ ಮೇಲ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಒಂದು ವೇಳೆ ನೋಟಿಸ್ ಗೆ ಉತ್ತರ ನೀಡದಿದ್ದಲ್ಲಿ, ಪ್ರತಿಕ್ರಿಯೆ ಸಿಗದಿದ್ದಲ್ಲಿ ಎಸ್ಐಟಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ.

ಎಲ್ಲೆಲ್ಲೂ ಶೋಧ : ರಮೇಶ್ ಜಾರಕಿಹೊಳಿ ಎಫ್ಐಆರ್ ದಾಖಲಿಸಿದ ನಂತರ ಪ್ರಮುಖ ಆರೋಪಿಗಳು ಎನ್ನಲಾದ ಮೂವರಿಗಾಗಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಎಲ್ಲರ ಮೊಬೈಲ್ ಸಂಪರ್ಕ ಸಂಖ್ಯೆಗಳು ಸ್ವಿಚ್ ಆಫ್ ಆಗಿರುವ ಕಾರಣ ಅವರ ಜಾಡು ಪತ್ತೆ ಮಾಡಲು ಸದ್ಯದ ಮಟ್ಟಿಗೆ ಸಾಧ್ಯವಾಗಿಲ್ಲ. ಆರೋಪಿತರ ಪೋಷಕರನ್ನು ಭೇಟಿ ಮಾಡಿ, ತಮ್ಮ ಸಂಪರ್ಕಕ್ಕೆ ಬಂದರೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಸೂಚಿಸಿದ್ದಾರೆ. ಸಂತ್ರಸ್ತ ಯುವತಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲು ವಿಶೇಷ ತನಿಖಾ ತಂಡ ಮುಂದಾಗಿದೆ.












Click it and Unblock the Notifications