ಜಾರಕಿಹೊಳಿ ಸಿಡಿ ಪ್ರಕರಣ: ತನಿಖಾ ವರದಿಗೆ ಎಸ್ಐಟಿ ಮುಖ್ಯಸ್ಥರ ಸಹಿಯೇ ಇರಲಿಲ್ಲ!
ಬೆಂಗಳೂರು, ಮೇ. 31: ರಮೇಶ್ ಜರಕಿಹೊಳಿ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ತನಿಖಾ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಅವರ ನ್ಯಾಯಪೀಠಕ್ಕೆ ಎಸ್ಐಟಿ ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಹೈಕೋರ್ಟ್ ಪರಿಗಣಿಸಿಲ್ಲ. ಬದಲಿಗೆ ಎಸ್ಐಟಿ ಮುಖ್ಯಸ್ಥರ ಸಹಿಯೊಂದಿಗೆ ವರದಿಯನ್ನು ಸಲ್ಲಿಸಬೇಕು. ಇಲ್ಲವೇ ಎಸ್ಐಟಿ ಮುಖ್ಯಸ್ಥರ ಸಮ್ಮುಖದಲ್ಲಿಯೇ ವರದಿ ಸಲ್ಲಿಸಬೇಕು ಅಥವಾ ಎಸ್ಐಟಿ ಮುಖ್ಯಸ್ಥರ ಅಧೀನ ಅಧಿಕಾರಿಯಿಂದ ಸಹಿ ಮಾಡಿಸಿದ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಓಕಾ ಅವರು ನಿರ್ದೇಶನ ನೀಡಿದ್ದಾರೆ.
ಶೀಘ್ರದಲ್ಲಿಯೇ ಎಸ್ಐಟಿಯಿಂದ ತನಿಖಾ ವರದಿ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಿನ್ನೆಲೆಯಲ್ಲಿ ಇನ್ನೆರಡು ದಿನದಲ್ಲಿ ಎಸ್ಐಟಿ ತನಿಖಾ ತಂಡದ ಮುಖ್ಯಸ್ಥರ ಅಧೀನದಲ್ಲಿರುವ ಅಧಿಕಾರಿ ಸಹಿ ಪಡೆದು ವರದಿ ಸಲ್ಲಿಸಲು ಎಸ್ಐಟಿ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಅತ್ಯಾಚಾರ ಪ್ರಕರಣವನ್ನು ಇಂದಿರಾನಗರ ಸಂಚಾರ ವಿಭಾಗದ ಎಸಿಪಿ ಕವಿತಾ ಮತ್ತು ತಂಡ ತನಿಖೆ ನಡೆಸುತ್ತಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಪ್ರಕರಣದ ತನಿಖೆಯನ್ನು ಎಸಿಪಿ ಧರ್ಮೇಂದ್ರ ಮತ್ತು ತಂಡ ತನಿಖೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ತನಿಖೆಯ ಅಂತಿಮ ವರದಿಯನ್ನು ಸಹಿಯೊಂದಿಗೆ ಶೀಘ್ರದಲ್ಲಿಯೇ ಸಲ್ಲಿಸಲು ಎಸ್ಐಟಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಜಾರಕಿಹೊಳಿ ಸಿಡಿ ಪ್ರಕರಣ: ಶಂಕಿತರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಮೂರು ಪ್ರಕರಣಕ್ಕೂ ಮೂರು ವರದಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ. ಮೂರು ಪ್ರರಕಣಗಳನ್ನು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದೆ. ನನ್ನ ಮೇಲೆ ಷಡ್ಯಂತ್ರ ರೂಪಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ಮಹತ್ವದ ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಹುರುಳು ಇಲ್ಲ
ಇನ್ನೊಂದೆಡೆ ಸಂತ್ರಸ್ತೆ ಯುವತಿ ನೀಡಿರುವ ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಹುರುಳು ಇಲ್ಲ. ಜಾರಕಿಹೊಳಿಯನ್ನು ಟ್ರ್ಯಾಪ್ ಮಾಡುವ ಉದ್ದೇಶದಿಂದಲೇ ರೂಪಿಸಿರುವ ಸಂಚಿನ ಭಾಗವಾಗಿ ಯುವತಿ ಭೇಟಿದ್ದಾಳೆ. ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದಲೇ ಸಿಡಿ ತಯಾರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದಾರೆ ಎಂಬುದಕ್ಕೆ ಎಸ್ಐಟಿ ಅಧಿಕಾರಿಗಳು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಇನ್ನು ಸಂತ್ರಸ್ತ ಯುವತಿ ಕಾಣೆಯಾಗಿರುವ ಬಗ್ಗೆ ಆರ್.ಟಿ. ನಗರದ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ ಎಸ್ಐಟಿ ಅಧಿಕಾರಿಗಳು ಪ್ರತ್ಯೇಕ ವರದಿ ಸಲ್ಲಿಸಲಿದ್ದಾರೆ.

ಮೂರು ವರದಿ ಸಲ್ಲಿಸಿದ್ರೂ ಕೋರ್ಟ್ ಆಕ್ಷೇಪ
ಹೈಕೋರ್ಟ್ ನೀಡಿದ್ದ ಗುಡುವು ಮುಗಿದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ವರದಿ ಸಲ್ಲಿಸಿದರು. ಆದರೆ ಆ ವರದಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪರಿಗಣಿಸಿಲ್ಲ. ಎಸ್ಐಟಿ ತನಿಖಾ ತಂಡದ ಮುಖ್ಯಸ್ಥರಾದ ಸೌಮೇಂದು ಮುಖರ್ಜಿ ಅವರು ತನಿಖಾ ವರದಿಗಳ ಮೇಲೆ ಸಹಿ ಮಾಡಿಲ್ಲ. ಕನಿಷ್ಠ ಪಕ್ಷ ಅವರು ವರದಿ ಸಲ್ಲಿಸುವ ವೇಳೆಯೂ ಹಾಜರಿರಲಿಲ್ಲ. ಹೀಗಾಗಿ ಈ ವರದಿಗಳಿಗೆ ಕಾನೂನು ಅಡಿಯಲ್ಲಿ ಮಾನ್ಯತೆ ನೀಡುವುದು ಕಷ್ಟ. ಹೀಗಾಗಿ ತನಿಖಾಧಿಕಾರಿಯ ಸಹಿ, ಅಥವಾ ಉಸ್ತುವಾರಿ ಅಧಿಕಾರಿಯ ಸಹಿಯೊಂದಿಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಪೀಠ ಸೂಚಿಸಿದೆ. ಜೂ. 17 ರೊಳಗೆ ಅಂತಿಮ ವರದಿ ಸಲ್ಲಿಸಲು ನ್ಯಾಯಾಲಯ ಆದೇಶ ನೀಡಿದೆ. ಜೂ. 18 ರಂದು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ.

ಪಿಐಎಲ್ ಅರ್ಜಿ ಇಂದೇ ವಿಚಾರಣೆ
ಇನ್ನು ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ನ್ಯಾಯಾಲಯವೇ ಮುಂದೆ ನಿಂತು ನಿರ್ವಹಣೆ ಮಾಡಬೇಕು. ಇಲ್ಲವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಹಿರಿಯ ವಕೀಲ ಜಿ.ಆರ್. ಮೋಹನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು. ರಮೇಶ್ ಜಾರಕಿಹೊಳಿ ಪರ ವಕಾಲತು ಸಲ್ಲಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು, ಇದು ಇಬ್ಬರ ವ್ಯಕ್ತಿಗಳ ನಡುವೆ ನಡೆದಿರುವ ಅಪರಾಧ ಕೃತ್ಯ. ವೈಯಕ್ತಿಕ ಕೂಡ. ಪ್ರಕರಣ ಕುರಿತು ತನಿಖೆ ನಡೆಸಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ. ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆ ನಡೆಸುತ್ತಿದೆ. ಆದರೆ, ಇಬ್ಬರ ವ್ಯಕ್ತಿಗಳ ನಡುವಿನ ಪ್ರಕರಣದಲ್ಲಿ ಮೂರನೇ ವ್ಯಕ್ತಿಯ ಸಾರ್ವಜನಿಕ ಹಿತಾಸಕ್ತಿ ಏನು ಇದೆ. ಹೀಗಾಗಿ ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ಮಾಡುವಷ್ಟು ಅರ್ಹತೆ ಇಲ್ಲ ಎಂಬ ವಾದವನ್ನು ಮಂಡಿಸಿದರು. ಜಾರಕಿಹೊಳಿ ಸಿಡಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಜೂ. 18ಕ್ಕೆ ಮುಂದೂಡಿ ಹೈಕೋರ್ಟ್ ಆದೇಶ ನೀಡಿತು.