ರಾಮಚಂದ್ರಾಪುರ ಮಠ ವಿರುದ್ಧದ ಅರ್ಜಿ ವಜಾ
ಬೆಂಗಳೂರು, ಆ.5: ರಾಮಚಂದ್ರಾಪುರದ ಮಠದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸುಳ್ಳು ಆರೋಪ ಮಾಡಿದ ಇಬ್ಬರು ಅರ್ಜಿದಾರರಿಗೆ ಛೀಮಾರಿ ಹಾಕಿ ದಂಡ ವಿಧಿಸಲಾಗಿದೆ.
ರಾಮಚಂದ್ರಾಪುರದ ಮಠ ಹಾಗೂ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಅರ್ಜಿ ಸಲ್ಲಿಸಿದ್ದ ಗೋಕರ್ಣ ಹಿತರಕ್ಷಣಾ ಸಮಿತಿ ಹಾಗೂ ಅಸ್ತ್ರ ಸಂಘಟನೆಗಳಿಗೆ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಗೋಕರ್ಣ ಹಿತರಕ್ಷಣಾ ಸಮಿತಿ ಸಲ್ಲಿಸಿರುವ ಅರ್ಜಿ ವೈಯಕ್ತಿಕ ಉದ್ದೇಶದಿಂದ ಕೂಡಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹೆಸರಿನಲ್ಲಿ ಮಠದ ಸಿಬ್ಬಂದಿಯನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಲಾಗಿದೆ. ಈ ಸಂಬಂಧ ಅರ್ಜಿದಾರರ ವಿರುದ್ಧ ದೂರು ದಾಖಲಾಗಿದೆ. ಅಲ್ಲದೆ, ದೋಷಾರೋಪ ಪಟ್ಟಿ ಕೂಡ ಸಲ್ಲಿಸಲಾಗಿದೆ ಎಂದು ಮಠದ ಪರ ವಕೀಲರು ವಾದಿಸಿ, ಸಲ್ಲಿಸಿದ್ದ ಪ್ರಮಾಣಪತ್ರ ಪರಿಗಣಿಸಿದ ನ್ಯಾಯಪೀಠ ಈ ಆದೇಶ ನೀಡಿದೆ.

ಅಷ್ಟೇ ಅಲ್ಲದೆ, ಅರ್ಜಿದಾರರು ಇನ್ನು ಮುಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವಂತಿಲ್ಲ ಹಾಗೂ ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲರು ಇನ್ನು ಮುಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ವಕಾಲತ್ತು ಹಾಕುವಂತಿಲ್ಲ ಎಂದು ಮುಖ್ಯ ನ್ಯಾ.ಡಿ.ಎಚ್.ವೇಲ ಹಾಗೂ ನ್ಯಾ.ಅಶೋಕ್.ಬಿ.ಹಿಂಚಿಗೇರಿ ಅವರಿದ್ದ ವಿಭಾಗೀಯ ಪೀಠ ನೀಡಿದ ಆದೇಶದಲ್ಲಿ ಉಲ್ಲೇಖಿಸಿದೆ.
ಏನಿದು ಪ್ರಕರಣ?: ರಾಮಚಂದ್ರಾಪುರ ಮಠ ಹಾಗೂ ಧರ್ಮಚಕ್ರ ಟ್ರಸ್ಟ್‌ನಲ್ಲಿ ಸಾಕಷ್ಟು ಹಣದ ದುರುಪಯೋಗವಾಗಿದೆ. ಈ ಅವ್ಯವಹಾರವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ 2013ರ ಜೂನ್ ತಿಂಗಳಿನಲ್ಲಿ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ಈ ಅರ್ಜಿಯನ್ನು ಅಂಗೀಕರಿಸಿ ವಿಚಾರಣೆ ನಡೆಸಿದ ನ್ಯಾಯಪೀಠ, ಮಠದ ಸ್ವಾಮೀಜಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಈ ನಡುವೆ, ಅರ್ಜಿದಾರರಾದ ಗೋಕರ್ಣ ಹಿತರಕ್ಷಣಾ ಸಮಿತಿ ಹಾಗೂ ಅಸ್ತ್ರ ಸಂಘಟನೆಗಳು ಮಠದ ಸಿಬ್ಬಂದಿಗೆ ಕರೆ ಮಾಡಿ, ನ್ಯಾಯಾಲಯದಲ್ಲಿರುವ ಪಿಐಎಲ್ ಹಿಂಪಡೆಯಲು 1.80 ಕೋಟಿ ರೂಪಾಯಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಮಠದ ಆಡಳಿತ ಮಂಡಳಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿದ್ದಲ್ಲದೆ, ಅವರ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ನಡುವೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆಯಲ್ಲಿ ಮಠದ ಪರ ವಕೀಲರು ಈ ಬೆಳವಣಿಗೆಯನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಇದನ್ನು ಪರಿಗಣಿಸಿದ ಪೀಠ, ಅರ್ಜಿಯ ಹಿಂದೆ ದುರುದ್ದೇಶವಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.


Click it and Unblock the Notifications
