ಬೆಂಗಳೂರು ದಕ್ಷಿಣದಿಂದ ರಕ್ಷಿತಾ ಜೆಡಿಎಸ್ ಅಭ್ಯರ್ಥಿ?

ಬಿಜೆಪಿಯಿಂದ ಅನಂತ್ ಕುಮಾರ್, ಕಾಂಗ್ರೆಸ್ ಪಕ್ಷದಿಂದ ನಂದನ್ ನಿಲೇಕಣಿ ಸ್ಪರ್ಧಿಸುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಳಿಗಾಗಿ ಜೆಡಿಎಸ್ ಹುಡುಕಾಟ ಆರಂಭಿಸಿದೆ. ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರ ಮನವೊಲಿಸಲು ನಿರ್ಧರಿಸಲಾಗಿದ್ದು, ಅವರು ಒಪ್ಪದಿದ್ದರೆ, ನಟಿ ರಕ್ಷಿತಾ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. [ಮಂಡ್ಯದಿಂದ ಸ್ಪರ್ಧಿಸುತ್ತೇನೆ : ರಕ್ಷಿತಾ]
ನಟಿ ರಕ್ಷಿತಾ ಮಂಡ್ಯ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುತ್ತೇನೆ. ಬೇರೆ ಯಾವುದೇ ಕ್ಷೇತ್ರದಿಂದ ಟಿಕೆಟ್ ನೀಡಿದರೂ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಮಂಡ್ಯದಲ್ಲಿ ಸ್ಥಳೀಯ ಪಕ್ಷದ ನಾಯಕರಿಗೆ ಟಿಕೆಟ್ ನೀಡಿ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಕ್ಷಿತಾ ಮನವೊಲಿಸಲು ಜೆಡಿಎಸ್ ನಿರ್ಧರಿಸಿದೆ. ಆದ್ದರಿಂದ ರಕ್ಷಿತಾ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಬಹುದು ಎಂಬ ಸುದ್ದಿ ಹಬ್ಬಿದೆ.[ಜೆಡಿಎಸ್ ಸಂಭವನೀಯ ಪಟ್ಟಿ]
ಸದ್ಯ ಜೆಡಿಎಸ್ ತಯಾರಿಸಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಸಿ.ಎಸ್.ಪುಟ್ಟರಾಜು, ಶಾಸಕ ಡಿ.ಸಿ.ತಮ್ಮಣ್ಣ ಅವರ ಪುತ್ರ ಡಿ.ಟಿ.ಸಂತೋಷ್ ಹಾಗೂ ರಕ್ಷಿತಾ ಹೆಸರನ್ನು ಸೇರಿಸಲಾಗಿದೆ. ಕ್ಷೇತ್ರದ ಅಭ್ಯರ್ಥಿ ಆಯ್ಕೆ ಜವಾಬ್ದಾರಿ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ವಹಿಸಲಾಗಿದ್ದು, ಅವರ ನಿರ್ಧಾರವೇ ಅಂತಿಮ ಎಂದು ಹೇಳಲಾಗುತ್ತಿದೆ. [ಅನಂತ್, ನಿಲೇಕಣಿ ವಿರುದ್ಧ ಜಸ್ಟೀಸ್ ಸ್ಪರ್ಧೆ]
ಆದ್ದರಿಂದ ಮಂಡ್ಯ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪುವ ರಕ್ಷಿತಾ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ನಾಯಕರು ಸೂಚಿಸಬಹುದು. ಇದು ಸಹ ರಕ್ಷಿತಾ ಅವರ ಅಂತಿಮ ತೀರ್ಮಾನದ ಮೇಲೆ ನಿಂತಿದೆ. ಈ ಮಧ್ಯೆ ಬೆಂಗಳೂರು ಉತ್ತರ ಬೆಂಗಳೂರು ಉತ್ತರದಲ್ಲಿ ಜಯಗೋಪಾಲಗೌಡ ಅಥವಾ ಮುಂಗಾರು ಮಳೆ ಚಿತ್ರ ನಿರ್ಮಾಪಕ ಇ.ಕೃಷ್ಣಪ್ಪ ಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ.












Click it and Unblock the Notifications