Amit Shah Road Show: ಅಮಿತ್ ಶಾ ರೋಡ್ ಶೋ ರದ್ದಾಗಿದ್ದಕ್ಕೆ 'ಮಳೆ' ಕೇವಲ ನೆಪವಷ್ಟೇ: ಬೇರೆಯದೇ ಇದೆ ಕಾರಣ
ಬೆಂಗಳೂರು, ಏಪ್ರಿಲ್ 22: ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿ ಸುರಿದ ಮಳೆಯಿಂದಾಗಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ರದ್ದಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅಮಿತ್ ಶಾ ಅವರು ಮೇ 10 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪ್ರಚಾರಕ್ಕಾಗಿ ರಾಜ್ಯಕ್ಕೆ ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿದ್ದಾರೆ.

ಶಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ರೋಡ್ ಶೋ ನಡೆಸಲು ಉದ್ದೇಶಿಸಿದ್ದರು. ಆದರೆ ತಾಲ್ಲೂಕು ಕೇಂದ್ರ ಪಟ್ಟಣ ಮತ್ತು ಸುತ್ತಮುತ್ತ ಮಳೆಯಿಂದಾಗಿ ಅದನ್ನು ರದ್ದುಗೊಳಿಸಲಾಯಿತು ಎಂದು ಬಿಜೆಪಿ ಹೇಳಿದೆ.
ಆದರೆ, ಮಳೆಯಿಂದಾಗಿ ಅಮಿತ್ ಶಾ ರೋಡ್ ಶೋ ರದ್ದಾಗಿಲ್ಲವೆಂದು ಕಾಂಗ್ರೆಸ್ ಹೇಳಿದೆ. ಅಮಿತ್ ಶಾ ರೋಡ್ ಶೋ ರದ್ದಾಗಿರುವುದಕ್ಕೆ ಕಾಂಗ್ರೆಸ್ ಬೇರೆಯದೇ ಕಾರಣ ನೀಡಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಟಿಕೆಟ್ ಹಂಚಿಕೆಯ ನಂತರ ಮೊದಲ ಬಾರಿ ಕರ್ನಾಟಕಲ್ಲಿನ ಅಮಿತ್ ಶಾ ಅವರ ರೋಡ್ ಶೋ ರದ್ದಾಗಿದ್ದಕ್ಕೆ ಮಳೆ ಕೇವಲ ನೆಪವಷ್ಟೇ' ಎಂದು ಹೇಳಿದೆ.
'ಅಸಲಿಗೆ ಜನಾಕ್ರೋಶ, ಕಾರ್ಯಕರ್ತರ ಆಕ್ರೋಶ, ಬಂಡಾಯದ ಬಿಸಿಯಲ್ಲಿ ಬೇಯುತ್ತಿರುವ ಬಿಜೆಪಿ ಎದುರಿಸುತ್ತಿರುವ ಬಿಕ್ಕಟ್ಟನ್ನು ಕಂಡು ಅಮಿತ್ ಶಾ ಭಯ ಬಿದ್ದಿದ್ದಾರೆ. ಸುಮ್ಮನೆ ಮಳೆಯ ಮೇಲೆ ಆರೋಪಿಸಲಾಗುತ್ತಿದೆ' ಎಂದು ತಿಳಿಸಿದೆ.

ಮತ್ತೆ ಅಧಿಕಾರಕ್ಕೆ ಏರುವುದಾಗಿ ಅಮಿತ್ ಶಾ ವಿಶ್ವಾಸ
ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಅಮಿತ್ ಶಾ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಅಮಿತ್ ಶಾ ಮಾತನಾಡಿದರು.
ಬೆಂಗಳೂರಿನಲ್ಲಿ ನಡೆದ ಇಂಡಿಯಾ ಟುಡೆಯ 'ಕರ್ನಾಟಕ ರೌಂಡ್‌ಟೇಬಲ್ 2023' ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಪರಿಚಯಿಸಿದ ಯೋಜನೆಗಳು ಮತ್ತು ಉಪಕ್ರಮಗಳು ಸಾಮಾನ್ಯ ಜನರಿಗೆ ಪ್ರಯೋಜನವನ್ನು ನೀಡಿವೆ ಎಂದು ಹೇಳಿದರು.
ಬಿಜೆಪಿ ತಮಗಾಗಿ ಕೆಲಸ ಮಾಡುತ್ತಿದೆ ಎಂದು ಕರ್ನಾಟಕದ ಜನರು ನಂಬಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು.
'ಸಮಾಜದ ಏಕತೆ ಮತ್ತು ಎಲ್ಲರ ಕಲ್ಯಾಣದಲ್ಲಿ ನಂಬಿಕೆಯಿರುವ ಪಕ್ಷವನ್ನು ಆಯ್ಕೆ ಮಾಡುವುದು ರಾಜ್ಯಕ್ಕೆ ಬಹಳ ಮುಖ್ಯವಾಗಿದೆ. ಬಿಜೆಪಿ ಅಂತಹ ಸಿದ್ಧಾಂತಗಳ ಮೇಲೆ ಕೆಲಸ ಮಾಡುವ ಒಂದು ಪಕ್ಷ' ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ಜನತಾದಳದ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದರು. 'ಜೆಡಿಎಸ್‌ಗೆ ಮತ ಹಾಕುವುದು ಎಂದರೆ ಕಾಂಗ್ರೆಸ್‌ಗೆ ಮತ ಹಾಕುವುದು ಎಂದರ್ಥ' ಎಂದು ತಿಳಿಸಿದರು.
'ಚುನಾವಣೆ ಮುಗಿದ ನಂತರ ಜೆಡಿಎಸ್ ತನ್ನ ಎಲ್ಲ ಶಾಸಕರೊಂದಿಗೆ ಕಾಂಗ್ರೆಸ್ ಜೊತೆ ಸೇರಿ ಆಡಳಿತ ನಡೆಸಲಿದೆ' ಎಂದು ಆರೋಪಿಸಿದರು.
ಕಳೆದ ಚುನಾವಣೆಗಳ ಕುರಿತು ಮಾತನಾಡಿದ ಅಮಿತ್ ಶಾ, ಕರ್ನಾಟಕದ ಜನರು ಬಿಜೆಪಿಯನ್ನು ಅತಿದೊಡ್ಡ ರಾಜಕೀಯ ಪಕ್ಷವಾಗಿ, ಕಾಂಗ್ರೆಸ್ ಅನ್ನು ಎರಡನೇ ದೊಡ್ಡ ಪಕ್ಷವಾಗಿ ಮತ್ತು ಜೆಡಿಎಸ್ ಅನ್ನು ಮೂರನೇ ಸ್ಥಾನವಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಚುನಾವಣೆ ಮುಗಿದ ಕೂಡಲೇ ಜೆಡಿಎಸ್ ಕಾಂಗ್ರೆಸ್ ಜೊತೆ ಕೈಜೋಡಿಸಿದೆ ಎಂದರು.
'ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪ್ರತ್ಯೇಕವಾಗಿ ಮತ ಹಾಕಿದರೆ ತಮ್ಮ ಮತಗಳು ವ್ಯರ್ಥವಾಗುತ್ತವೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು' ಎಂದು ಅಮಿತ್ ಶಾ ಹೇಳಿದರು.












Click it and Unblock the Notifications