ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತ
ಬೆಂಗಳೂರು, ಸೆಪ್ಟೆಂಬರ್ 27: ಉದ್ಯಾನ ನಗರಿಯಲ್ಲಿ ಸೆ. 26ರ ರಾತ್ರಿ ಶುರುವಾದ ಮಳೆ ಮುಂಜಾನೆವರೆಗೂ ಸುರಿದು ಭಾರೀ ಅವಾಂತರ ಸೃಷ್ಟಿಸಿದೆ.
ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿರುವುದಲ್ಲದೆ, ಜೆಪಿ ನಗರದಲ್ಲಿ ಅಪಾರ್ಟ್ ಮೆಂಟ್ ನ ಗೋಡೆ ಕುಸಿದ ಪರಿಣಾಮವಾಗಿ, ಎರಡು ಮನೆಗಳ ಜನರಿಗೆ ತೊಂದರೆಯಾಗಿದೆ.

ಗೋಡೆಯ ಅವಶೇಷಗಳು ಎರಡೂ ಮನೆಗಳ ಬಾಗಿಲಿಗೇ ಬಂದು ಬಿದ್ದಿರುವುದರಿಂದ ಆ ಮನೆಗಳ ಸದಸ್ಯರು ಮನೆಯೊಳಗೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಇನ್ನುಳಿದಂತೆ, ನಾಯಂಡಹಳ್ಳಿ, ವಿಜಯ ನಗರ, ನಾಗರಭಾವಿ, ಜಯನಗರ, ಕೆ.ಆರ್. ಮಾರುಕಟ್ಟೆ, ಸುಮನಹಳ್ಳಿ ಮುಂತಾದೆಡೆ ರಾತ್ರಿಯಿಡೀ ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ಹರಿದು ಮನೆಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆಯಾಗಿದೆ.
ಚಂದ್ರಾ ಲೇಔಟ್ ನಲ್ಲಿ ಹಾಸ್ಟೆಲೊಂದರ ಗೋಡೆ ಕುಸಿದ ಪರಿಣಾಮವಾಗಿ, ಗೋಡೆ ಪಕ್ಕದಲ್ಲಿ ಎಂದಿನಂತೆ ನಿಲ್ಲಿಸಲಾಗಿದ್ದ ಆರು ಬೈಕು, ಎರಡು ಕಾರುಗಳು ಜಖಂ ಆಗಿವೆ.
ಕೋರಮಂಗಲದ 4ನೇ ಬ್ಲಾಕ್ ನ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತಿದ್ದು ವಾಹನ ಚಾಲಕರಿಗೆ, ಪಾದಚಾರಿಗಳಿಗೆ ತೊಂದರೆಯಾಗಿದೆ.












Click it and Unblock the Notifications