Bengaluru Potholes: ರಸ್ತೆ ಗುಂಡಿಗಳ ಮುಕ್ತಿಗೆ ಮಹತ್ವದ ಸಲಹೆ ಕೊಟ್ಟ ಅಶೋಕ್
ಬೆಂಗಳೂರು ನಗರದೆಲ್ಲೆಡೆ ಮಾರಿಯಂತಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಸಾವಿರಾರು ರೂಪಾಯಿ ಖರ್ಚು ಮಾಡಿದೆ. ಏನಾದರೂ ಗುಂಡಿಗಳಿಗೆ ಮುಕ್ತಿ ನೀಡಲು ಸಾಧ್ಯವಾಗಿಲ್ಲ. ಮಳೆಗಾಲ ಬಂತೆಂದರೆ ರಸ್ತೆ ಬಾಯ್ತೆರೆಯುವ ಗುಂಡಿಗಳ ನಿರ್ಮೂಲನೆಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
ʼಸುಮಾರು 660 ಕೋಟಿ ರೂಪಾಯಿ ಖರ್ಚು ಮಾಡಿದರೂ ಬೆಂಗಳೂರು ನಗರದಾದ್ಯಂತ ಇನ್ನೂ ಸಾವಿರಾರು ರಸ್ತೆಗುಂಡಿಗಳು ಬಾಯ್ತೆರೆದುಕೊಂಡೇ ಇವೆ. ಮಾರ್ಚ್ ತಿಂಗಳಿನಿಂದ ಏಪ್ರಿಲ್‌ವರೆಗೂ ಬೇಸಿಗೆ ಕಾಲದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು, ರಸ್ತೆ ರಿಪೇರಿ ಮಾಡಲು ಒಳ್ಳೆ ಸಮಯ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಮಳೆಗಾಲದಲ್ಲಿ ರಸ್ತೆಗುಂಡಿಗಳು ಮತ್ತೊಮ್ಮೆ ಸಾರ್ವಜನಿಕರಿಗೆ ಮೃತ್ಯು ಕೂಪಗಳಾಗುವುದು ಗ್ಯಾರೆಂಟಿʼ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ಕೊಟ್ಟಿದ್ದಾರೆ.

"ವೈಟ್ ಟಾಪಿಂಗ್ ಕಾಮಗಾರಿ ಹೆಸರಿನಲ್ಲಿ ಫೋಟೋ ಶೂಟಿಂಗ್ ಮಾಡಿದರೆ ಬೆಂಗಳೂರಿನ ಸಮಸ್ಯೆಗಳು ಪರಿಹಾರ ಆಗುತ್ತಾ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರಾಗಿ ನಿಮಗೆ ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ನೀವು ಮಾಡಬೇಕಾದ ಕೆಲಸ ಬೇಕಾದಷ್ಟಿದೆ ಎಂದಿದ್ದಾರೆ.
ಕಳೆದ ವರ್ಷದ ಬೇಸಿಗೆಯಲ್ಲಿ ಟ್ಯಾಂಕರ್ ಮಾಫಿಯಾ ಜೊತೆ ಶಾಮೀಲಾಗಿ ಜನರನ್ನ ಸುಲಿಗೆ ಮಾಡಿದ್ದೀರಿ. ಈ ವರ್ಷವಾದರೂ ಬೇಸಿಗೆ ಕಾಲದಲ್ಲಿ ಬೆಂಗಳೂರಿನ ಜನತೆ ನೀರಿಗಾಗಿ ಬವಣೆ ಪಡದಂತೆ ಏನಾದರೂ ಕ್ರಮ ಕೈಗೊಳ್ಳುತ್ತೀರೋ ಅಥವಾ ಜನರನ್ನ ಟ್ಯಾಂಕರ್ ಮಾಫಿಯಾ ಮರ್ಜಿಗೆ ಬಿಟ್ಟುಬಿಡುತ್ತೀರೋ? ಎಂದು ವ್ಯಂಗ್ಯವಾಡಿದ್ದಾರೆ.

ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಯದಂತೆ ಈ ವರ್ಷವಾದರೂ ಮುನ್ನೆಚ್ಚರಿಕೆ ವಹಿಸಿ. ಎಷ್ಟು ನೀರು ಬಿಟ್ಟರೂ ತಮಿಳುನಾಡಿನವರು ಕ್ಯಾತೆ ತೆಗೆಯುವುದಂತೂ ಗ್ಯಾರೆಂಟಿ. ಅದಕ್ಕಾಗಿ ಈಗಲೇ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಿ. ಕರ್ನಾಟಕದ ಪರವಾಗಿ ಗಟ್ಟಿಯಾದ ವಾದ ಮಂಡಿಸಲು ತಯಾರಾಗಿ ಎಂದು ಸಲಹೆ ಕೊಟ್ಟಿದ್ದಾರೆ.
"ಸಿಎಂ ಸಿದ್ದರಾಮಯ್ಯನವರು ನಡೆಸಿದ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಉಪಮುಖ್ಯಮಂತ್ರಿಗಳಾಗಿ ತಾವು ಎಲ್ಲಿಯೂ ಕಾಣಲೇ ಇಲ್ಲವಲ್ಲ. ಬಜೆಟ್‌ನಲ್ಲಿ ಬೆಂಗಳೂರು ನಗರಕ್ಕೆ ಯಾವ ಯೋಜನೆಗಳು ಬೇಕು? ಅದಕ್ಕೆಷ್ಟು ಅನುದಾನ ಬೇಕಾಗುತ್ತದೆ? ಎನ್ನುವುದನ್ನ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವಾದರೂ ಮಾಡಿದ್ದೀರಾ? ಅಥವಾ ಕುರ್ಚಿ ಕಿತ್ತಾಟದಲ್ಲಿ ತಮ್ಮ ಕರ್ತವ್ಯವನ್ನೇ ಮರೆತಿದ್ದೀರಾ?" ಎಂದು ಟೀಕಿಸಿದ್ದಾರೆ.

ಬಜೆಟ್ ಪೂರ್ವಭಾವಿ ಸಭೆಗಳಿಗೆ ಡಿಸಿಎಂ ಸಾಹೇಬರ ಅನುಪಸ್ಥಿತಿ ನೋಡಿದರೆ, ಬಹುಶಃ ಅವರಿಗೆ ಆಹ್ವಾನವೇ ಇಲ್ಲ ಅನ್ನಿಸುತ್ತೆ. ಅಥವಾ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಕೇವಲ ನಾಮಕಾವಸ್ತೆ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರನ್ನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಅನ್ನಿಸುತ್ತಿದೆ ಎಂದು ಟಾಂಗ್ ನೀಡಿದ್ದಾರೆ.
ಬೆಂಗಳೂರಿನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಮಹಾಲಕ್ಷ್ಮಿ ಲೇಔಟ್‌ನ 10ನೇ ಅಡ್ಡರಸ್ತೆಯಲ್ಲಿ, ಎಂಇಐ ರಸ್ತೆ ಹಾಗೂ ಜಾಲಹಳ್ಳಿ ಟಿವಿಎಸ್ ಕ್ರಾಸ್ ಬಳಿಯ 100 ಅಡಿ ರಿಂಗ್ ರಸ್ತೆಯಲ್ಲಿ, ನೆಟ್ಟಕಲ್ಲಪ್ಪ ವೃತ್ತದ ಬಳಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ನಿನ್ನೆ ಪರಿಶೀಲಿಸಿದರು.












Click it and Unblock the Notifications