ಚಂಡಮಾರುತ ಪ್ರಭಾವ: ಈ ಒಂದು ಜಿಲ್ಲೆಯಲ್ಲೇ 70,000 ಎಕರೆ ಬೆಳೆ ನಾಶ: ಅನ್ನದಾತ ನೆರವಿಗೆ ಬನ್ನಿ
ಬೆಂಗಳೂರು, ಡಿಸೆಂಬರ್ 04: ಕರ್ನಾಟಕ ರಾಜ್ಯದ ದಕ್ಷಿಣ ಒಳನಾಡು ವ್ಯಾಪ್ತಿಯಲ್ಲಿ ಚಂಡಮಾರುತ ಸೈಕ್ಲೋನ್‌ನಿಂದ ಅತೀವ ಮಳೆಯಾಗಿದೆ. ಇದರಿಂದ ರಾಮನಗರ ಜಿಲ್ಲೆ ಒಂದರಲ್ಲಿ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇದು ಕಟಾವು ಯಂತ್ರ ಬಾಡಿಗೆ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ವಿವರಿಸಿದ್ದಾರೆ.
ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ಫೆಂಗಲ್ ಚಂಡಮಾರುತದಿಂದಾಗಿ ರಾಮನಗರ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ 70,000 ಎಕರೆ ಪ್ರದೇಶದಲ್ಲಿ ಭತ್ತ, ರಾಗಿ ಬೆಳೆಗಳು ನೆಲಕಚ್ಚಿವೆ. ಹುಲ್ಲು ಕೊಳೆತು ಜಾನುವಾರುಗಳ ಮೇವಿಗೂ ಕೊರತೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ನಿಮ್ಮ ಸ್ವಾಭಿಮಾನಿ, ಜನಕಲ್ಯಾಣ ಸಮಾವೇಶದ ಕಿತ್ತಾಟದ ಮಧ್ಯದಲ್ಲಿ ಬಿಡುವು ಮಾಡಿಕೊಂಡು ಒಮ್ಮೆ ರಾಮನಗರ ಜಿಲ್ಲೆಗೆ ಭೇಟಿ ನೀಡಬೇಕು. ಇಲ್ಲಿನ ರೈತರು ಭಾರೀ ಮಳೆಗೆ ಎದುರಿಸಿರುವ ಕಷ್ಟ ಕೇಳಿ. ಕುಂದು ಕೊರತೆ ಆಲಿಸಿ, ಬೆಳೆ ನಷ್ಟ ಪರಿಹಾರ ಕೊಡಿಸುವ ಮೂಲಕ ಅನ್ನದಾತರ ನೆರವಿಗೆ ಬರಬೇಕು ಎಂದು ಸರ್ಕಾರಕ್ಕೆ ಅವರು ಆಗ್ರಹಿಸಿದರು.
ನೆಲಕಚ್ಚಿದ ಭತ್ತ ಮತ್ತು ರಾಗಿ ಬೆಳೆ: ರೈತರು ಕಣ್ಣೀರು
ಬಂಗಾಳಕೊಲ್ಲಿಯಲ್ಲಿ ಉಂಟಾಗಿ ಕರಾವಳಿಗೆ ಅಪ್ಪಳಿಸಿದ ಚಂಡಮಾರುತದಿಂದ ರಾಮನಗರ ಇತರ ಕಡೆಗಳಲ್ಲಿ ಭಾರೀ ಮಳೆ ಆಗಿದೆ. ಈ ಅಕಾಲಿಕ ಮಳೆಯಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಮತ್ತು ರಾಗಿ ಬೆಳೆ ನೆಲಕಚ್ಚಿ ಈಗಾಗಲೇ ಹೈರಾಣಾಗಿರುವ ರೈತರಿಗೆ, ಕಟಾವು ಯಂತ್ರ ಬಾಡಿಗೆ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಪುನರುಚ್ಚರಿಸಿದರು.
ಅಕಾಲಿಕ ಮಳೆಯಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಮತ್ತು ರಾಗಿ ಬೆಳೆ ನೆಲಕಚ್ಚಿ ಈಗಾಗಲೇ ಹೈರಾಣಾಗಿರುವ ರೈತರಿಗೆ, ಕಟಾವು ಯಂತ್ರ ಬಾಡಿಗೆ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
— R. Ashoka (@RAshokaBJP) December 4, 2024
ಕೃಷಿ ಸಚಿವ ಶ್ರೀ @NCheluvarayaS ಅವರೇ,
ಸ್ವಾಭಿಮಾನಿ ಸಮಾವೇಶ, ಜನಕಲ್ಯಾಣ ಸಮಾವೇಶದ ಸಂಭ್ರಮದಲ್ಲಿ ತಾವು ರಾಜ್ಯದ ಕೃಷಿ… pic.twitter.com/ItHtglc8cm
ಕೃಷಿ ಸಚಿವರಾದ ಚಲುವನಾರಾಯಸ್ವಾಮಿ ಅವರೇ, ಸ್ವಾಭಿಮಾನಿ ಸಮಾವೇಶ, ಜನಕಲ್ಯಾಣ ಸಮಾವೇಶದ ಸಂಭ್ರಮದಲ್ಲಿ ತಾವು ರಾಜ್ಯದ ಕೃಷಿ ಸಚಿವರು ಎನ್ನುವುದನ್ನೆ ಮರೆತಿರುವಂತಿದೆ ಎಂದು ಲೇವಡಿ ಮಾಡಿದರು.
ಕಟಾವು ಯಂತ್ರಗಳಿಗೆ ಅಧಿಕ ದರ ನಿಗದಿ: ಆಕ್ರೋಶ
ಕಟಾವು ಯಂತ್ರಗಳಿಗೆ ಜಿಲ್ಲಾಡಳಿತಗಳು ನಿಗದಿ ಪಡಿಸಿರುವ ದರವನ್ನು ಮೀರಿ ಹೆಚ್ಚು ದರ ವಸೂಲಿ ಮಾಡುವ ಮೂಲಕ ರೈತರನ್ನು ಸುಲಿಗೆ ಮಾಡಲಾಗುತ್ತಿದೆ. ನಿರರ್ಥಕ ಸಮಾವೇಶಗಳಲ್ಲಿ ತಮ್ಮ ಸಮಯ ವ್ಯರ್ಥ ಮಾಡುವ ಬದಲು ರೈತರಿಗೆ ಉಪಯೋಗ ಆಗುವ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ.
ಕಟಾವು ಯಂತ್ರಗಳು ಕೈಗೆಟಕುವ ದರದಲ್ಲಿ ರೈತರಿಗೆ ಸಿಗುವಂತೆ ಯಾವುದಾದರೂ ಪರಿಹಾರ ಕಂಡುಕೊಳ್ಳುವ ಮಾರ್ಗ ಹುಡುಕಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.
ಕೊಯ್ಲಿಗೆ ಬಂದಿದ್ದ ಭತ್ತ, ರಾಗಿಯು ಭಾರೀ ಮಳೆಯ ಹೊಡೆತಕ್ಕೆ ಹಾಳಾಗಿದೆ. ಹುಲ್ಲು ಸಹ ಜಾನುವಾರುಗಳಿಗೆ ಸಿಗದಂತಾಗಿದೆ. ರೈತರು ಏನು ಮಾಡಬೇಕೆಂದು ತೋಚದಂತಾಗಿದೆ. ಮುಂಗಾರು ವೇಳೆ ಉತ್ತಮ ಮಳೆ ಆಗಿದ್ದರಿಂದ ಉತ್ತಮ ಫಸಲು ನಿರೀಕ್ಷಿಸಲಾಗಿತ್ತು. ಆದರೆ ಬೆಳೆ ಕೈಗೆ ಬಂತು ಎನ್ನುವಷ್ಟಲ್ಲಿ ಅಕಾಲಿಕ ಮಳೆ ನಷ್ಟವಾಗಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.












Click it and Unblock the Notifications