ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರದ ಬದಲು ಮಹತ್ವದ ಸಲಹೆ ಕೊಟ್ಟ ಆರ್.ಅಶೋಕ್, ಏನದು?
ಇತ್ತೀಚೆಗೆ ಆರ್‌ಸಿಬಿ ವಿಜಯೋತ್ಸವ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರವು ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರ ಮಾಡುವ ಬಗ್ಗೆ ಮಾತುಕತೆ ಶುರುಮಾಡಿದೆ. ಇದಕ್ಕೆ ಹಲವರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರ ಈ ಹೊಸ ವರಸೆ ಶುರುಮಾಡಿದೆ ಎಂದು ದೂರುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು ಸಿದ್ದರಾಮಯ್ಯ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರವನ್ನು ತರಾಟೆಗೂ ತೆಗೆದುಕೊಂಡಿದ್ದಾರೆ.
ಕಾಲ್ಲುಳಿತ ಕೊಲೆ ಪ್ರಕರಣದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ತಮ್ಮ ಹತಾಶ ಪ್ರಯತ್ನ ಮುಂದುವರೆಸಿರುವ ಸಿಎಂ ಸಿದ್ದರಾಮಯ್ಯ ಅವರು ಈಗ ಚಿನ್ನಸ್ವಾಮಿ ಕ್ರೀಡಾಂಗಣವನ್ನ ಸ್ಥಳಾಂತರ ಮಾಡಬೇಕು ಎಂಬ ಹೊಸ ವರಸೆ ಶುರು ಮಾಡಿದ್ದಾರೆ. ಸ್ಥಳಾಂತರ ಮಾಡಬೇಕಾಗಿರುವುದು ಚಿನ್ನಸ್ವಾಮಿ ಕ್ರೀಡಾಂಗಣವನ್ನಲ್ಲ, ಸ್ಥಳಾಂತರ ಆಗಬೇಕಿರುವುದು ಸಿದ್ದರಾಮಯ್ಯನವರು ಎಂದು ತಿರುಗೇಟು ನೀಡಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮುಖ್ಯಮಂತ್ರಿಗಳ ಅಧಿಕೃತ ನಿವಾಸದಿಂದ ಮೈಸೂರಿಗೋ ಅಥವಾ ಸಿದ್ಧರಾಮನಹುಂಡಿಗೋ ಸ್ಥಳಾಂತರ ಆದರೆ, ಅದೇ ಕರ್ನಾಟಕಕ್ಕೆ, ಕನ್ನಡಿಗರಿಗೆ ತಾವು ಮಾಡಬಹುದಾದ ಬಹುದೊಡ್ಡ ಉಪಕಾರ ಎಂದು ಅಶೋಕ್ ಹರಿಹಾಯ್ದಿದ್ದಾರೆ.

ಬಿಜೆಪಿಗೆ ಪೊಲೀಸರ ಮೇಲೆ ಪ್ರೀತಿ ಬಂದಿದೆ
ಚಿನ್ನಸ್ವಾಮಿ ಕ್ರೀಡಾಂಗಣದ ದುರಂತದಲ್ಲಿ ಪೊಲೀಸ್ ಕಮಿಷನರ್ ಒಬ್ಬರ ಮೇಲೆ ಮಾತ್ರವೇ ಕ್ರಮ ಕೈಗೊಂಡಿಲ್ಲ. ಇನ್ನೂ 5 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಹಲವು ಹುದ್ದೆಗಳಲ್ಲಿ ಬದಲಾವಣೆ ತರಲಾಗಿದೆ. ಪೊಲೀಸ್ ಇಲಾಖೆಯ ವಿರುದ್ಧ ಹಲವು ಬಾರಿ ಪ್ರತಿಭಟನೆ, ಆರೋಪ ಮಾಡುತ್ತಿದ್ದ ಬಿಜೆಪಿ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಈಗ ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಪ್ರೀತಿ ಬಂದಿದೆ. ಮೇಲ್ನೋಟಕ್ಕೆ ಯಾರೆಲ್ಲ ತಪ್ಪಿತಸ್ಥರಿದ್ದಾರೆ ಅವರೆಲ್ಲರ ವಿರುದ್ಧ ಕ್ರಮ ಜರುಗಿಸಿದ್ದೇವೆ. ವಿಪಕ್ಷಗಳು ಒತ್ತಾಯ ಮಾಡಿದಂತೆ ನ್ಯಾಯಾಂಗ ತನಿಖೆಗೂ ವಹಿಸಿದ್ದೇವೆ. ಆದರೆ ಅವರು ಇನ್ನೂ ಇದೇ ವಿಷಯದಲ್ಲಿ ರಾಜಕೀಯ ಮಾಡುತ್ತಾ ಕೂತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ವಿಧಾನಸೌಧ ಮೆಟ್ಟಿಲು ಮೇಲೆ ಸರಕಾರ ವಿಜಯೋತ್ಸವ ಆಚರಿಸಿತು. ಅಲ್ಲಿ ಯಾರೂ ಸಾಯಲಿಲ್ಲ! ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಷ್ಟೇ ಕಾಲ್ತುಳಿತ ಸಂಭವಿಸಿ ಜನ ಸತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಿಧಾನಸೌಧ ಮೆಟ್ಟಿಲುಗಳಿಗಷ್ಟೇ ಮುಖ್ಯಮಂತ್ರಿಯೋ? ದಯವಿಟ್ಟು ಹೇಳುವಿರಾ? ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕೂಡ ದೂರಿದ್ದಾರೆ. ದುರಂತದ ಹೊಣೆಯನ್ನು ಪೊಲೀಸರ ಮೇಲಷ್ಟೇ ಎತ್ತಿಹಾಕಿ 'ಕೈ' ತೊಳೆದುಕೊಳ್ಳುವುದು ಎಷ್ಟು ಸರಿ? ಪ್ರತಿಪಕ್ಷಗಳನ್ನು ದೂರಿ ಪಾರಾಗುವ ಹುನ್ನಾರವೇಕೆ? ಎಂದು ಕೇಳಿದ್ದಾರೆ.












Click it and Unblock the Notifications