5, 8, 9 ಮತ್ತು 11ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಆರ್.ಅಶೋಕ್ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 19: ಕರ್ನಾಟಕ ಸರ್ಕಾರವು ಯಾವುದೇ ಪೂರ್ವ ಸಿದ್ಧತೆ, ಮುಂದಾಲೋಚನೆ ಇಲ್ಲದೇ 5, 8, 9 ಮತ್ತು 11 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುತ್ತೇವೆ ಎಂದು ಧಿಡೀರ್ ಆದೇಶ ಹೊರಡಿಸಿದ್ದರಿಂದ ವಿದ್ಯಾರ್ಥಿಗಳ ಸ್ಥಿತಿ ಅಂತಂತ್ರವಾಗಿದೆ ಎಂದು ಬಿಜೆಪಿಯ ರಾಜ್ಯ ಕಾಂಗ್ರೆಸ್ ಆಡಳಿತವನ್ನು ಟೀಕಿಸಿದೆ.
ಈ ಕುರಿತು ಮಂಗಳವಾರ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ನಿರ್ಧಾರದಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದೆ. ಪರೀಕ್ಷೆಗಳ ದಿನಾಂಕ ಪದೇ ಪದೇ ಬದಲಾಗುತ್ತಿರುವುದರಿಂದ ಪೋಷಕರು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ ಎಂದು ಅವರು ವಿವರಿಸಿದರು.

ಚುನಾವಣೆಯಲ್ಲಿ ಮಗ್ನರಾದ ಶಿಕ್ಷಣ ಸಚಿವ
ಶಿಕ್ಷಣ ಇಲಾಖೆ ಇಷ್ಟೊಂದು ದೊಡ್ಡ ಗೊಂದಲದ ಗೂಡಾಗಿರುವ ಸಂದರ್ಭದಲ್ಲಿ ಸಮಸ್ಯೆಗೆ ಪರಿಷ್ಕಾರ ಹುಡುಕಿ ಪೋಷಕರಿಗೆ, ವಿಧ್ಯಾರ್ಥಿಗಳಿಗೆ ಧೈರ್ಯ ತುಂಬಬೇಕು. ಅದನ್ನು ಬಿಟ್ಟು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಹೋದರಿಯ ಚುನಾವಣೆಯಲ್ಲಿ ಸಂಪೂರ್ಣ ಮಗ್ನರಾಗಿದ್ದಾರೆ.
ರಾಜ್ಯ ಶಿಕ್ಷಣ ಸಚಿವರು ಇಂತಹ ವಿದ್ಯಾರ್ಥಿಗಳ ಪರ ಕಾಳಜಿ ವಹಿಸಬೇಕು. ಅದನ್ನು ಬಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಮುಂದುವರೆಸಿದ್ದಾರೆ ಎಂದು ಅವರು ಆರೋಪಿಸಿದರು.
ಸಿಎಂ ಅಸಹಾಯಕ ಎಂದು ಆರೋಪ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮಗೆ ರಾಜ್ಯದ ಮಕ್ಕಳ ಭವಿಷ್ಯಕ್ಕಿಂತ, ಚುನಾವಣೆಯೇ ಮುಖ್ಯವಾದರೆ ಶಿಕ್ಷಣ ಸಚಿವರಿಂದ ರಾಜೀನಾಮೆ ಪಡೆದು ಫುಲ್ ಟೈಮ್ ಪಕ್ಷದ ಕೆಲಸ ಮಾಡಲು ಹೇಳಿ. ಕಳೆದ 9 ತಿಂಗಳಿನಿಂದ ಪದೇ ಪದೇ ಎಡವಟ್ಟುಗಳ ಮೇಲೆ ಎಡವಟ್ಟುಗಳನ್ನು ಮಾಡುತ್ತಿದ್ದರೂ ಶಿಕ್ಷಣ ಸಚಿವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿಲ್ಲ. ಈ ನಿಮ್ಮ ಪರಿಸ್ಥಿತಿ ನೋಡಿದರೆ ತಾವು ಅಸಹಾಯಕರಾಗಿದ್ದೀರಿ ಅನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ಟ್ಯಾಂಕರ್ ಮಾಫಿಯಾಗೆ ಶರಣು
ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ಸಂಪೂರ್ಣ ವಿಫಲಾವಾಗಿರುವ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಟ್ಯಾಂಕರ್ ಮಾಫಿಯಾಗೆ ಸಂಪೂರ್ಣ ಶರಣಾಗಿ ಜನರನ್ನು ಸುಲಿಗೆ ಮಾಡಲು ತಾವೂ ಕೈಜೋಡಿಸಿದಂತಿದೆ ಎಂದು ಆಪಾದಿಸಿದರು.

ಗಡುವು ಮುಗಿದಿದ್ದರೂ ಸರ್ಕಾರದ ಆದೇಶಕ್ಕೆ ಕ್ಯಾರೇ ಅನ್ನದೆ ಅರ್ಧಕ್ಕರ್ಧದಷ್ಟು ಖಾಸಗಿ ಟ್ಯಾಂಕರ್ ಗಳು ಇನ್ನೂ ನೋಂದಣಿಯೇ ಮಾಡಿಕೊಂಡಿಲ್ಲ. ಕಾಟಾಚಾರಕ್ಕೆ ನೋಂದಣಿ ಮಾಡಿಕೊಂಡಿರುವ ಟ್ಯಾಂಕರ್ ಗಳು ಸರ್ಕಾರ ನಿಗದಿ ಮಾಡಿರುವ ದರಕ್ಕೆ ನೀರು ಕೊಡುತ್ತಿಲ್ಲ ಎಂದರು.
ಇಷ್ಟೆಲ್ಲಾ ಗೊಂದಲಗಳಿಂದ ನೀರಿಲ್ಲದೆ ಬೆಂಗಳೂರಿನ ಜನತೆ ಪರದಾಡುತ್ತಿದ್ದರೆ ಕರ್ನಾಟಕ ಸರ್ಕಾರ ಏನೂ ಆಗಿಲ್ಲವೆಂಬಂತೆ ಜಾಣ ಕುರುಡು ಪ್ರದರ್ಶನ ಮಾಡುತ್ತಿದೆ. ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.
ನಿಗಾ ವಹಿಸಿ: ಕಾಲ್ ಸೆಂಟರ್ ತೆರೆಯಿರಿ
ಸರ್ಕಾರಕ್ಕೆ ನಿಜವಾಗಲೂ ನೀರಿನ ಸಮಸ್ಯೆ ರಿಬಗೆಹರಿಸುವ ಬದ್ಧತೆ ಇದ್ದರೆ ನೊಂದಣಿ ಮಾಡಿಕೊಳ್ಳದ, ಸರ್ಕಾರದ ನಿಯಮ ಪಾಲಿಸದ ಟ್ಯಾಂಕರ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ವಾರ್ಡ್ ಗಳಲ್ಲೂ ಮಾರ್ಷಲ್ ಗಳನ್ನು ನೇಮಿಸಿ ಟ್ಯಾಂಕರ್ ಗಳ ಮೇಲೆ ನಿಗಾ ಇಡಬೇಕು ಎಂದು ಹೇಳಿದರು.
ಈಗಿರುವ ಸಹಾಯವಾಣಿ ಜನರಿಗೆ ಸ್ಪಂದಿಸಲು ವಿಫಲವಾಗಿದ್ದು, ಸರ್ಕಾರ ಖಾಸಗಿ ಸಂಸ್ಥೆಗಳ ಸಹಾಯದಿಂದ ಒಂದು ವಾರ್ಡ್ ಗೆ ಒಂದರಂತೆ ಕನಿಷ್ಠ 200 ದೂರವಾಣಿ ಲೈನ್ ಗಳ ಸಂಪರ್ಕ ಹೊಂದಿರುವ ಕಾಲ್ ಸೆಂಟರ್ ತೆರೆದು ಜನರ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ನೀರು ರಕ್ಷಣೆಗೆ ಜಾಗೃತಿ
ಇತ್ತ ರಾಜ್ಯ ಸರ್ಕಾರ ಬೆಂಗಳೂರಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕೈಗೊಳ್ಳುತ್ತಿದೆ. ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ನಿರಂತರ ಸಭೆ ನಡೆಸುತ್ತಿದ್ದಾರೆ. ನೀರಿನ ಟ್ಯಾಂಕರ್‌ಗಳಿಗೆ ದರ ನಿಗದಿ ಮಾಡಿದ್ದಾರೆ. ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆಗೆ ಸೂಚಿಸಿದ್ದಾರೆ. ಪ್ಲಂಬರ್ ಸಂಘದ ಸದಸ್ಯರ ಜತೆ ಚರ್ಚಿಸಿದ್ದಾರೆ. ಜನರಿಗೆ ನೀರು ರಕ್ಷಣೆಗೆ, ಬಳಕೆ ವಿಚಾರ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.












Click it and Unblock the Notifications