ನೆಹರು ಕುಟುಂಬ ಬೀದಿಗೆ ಬಂದಿದೆ: ಅದಕ್ಕಾಗಿ ಪಾದಯಾರತ್ರೆ- ಆರ್.ಅಶೋಕ್ ವ್ಯಂಗ್ಯ
ಬೆಂಗಳೂರು, ಅಕ್ಟೋಬರ್ 13: "ಕಾಂಗ್ರೆಸ್‌ನವರು ಜನರಿಗೆ ರೇಷನ್ ಕಾರ್ಡ್ ಕೊಡಲು ಪಾದಯಾತ್ರೆ ಮಾಡುತ್ತಿದ್ದಾರಾ, ಜನರಿಗೆ ಉದ್ಯೋಗ ಕೊಡಲು ಪಾದಯಾತ್ರೆ ಮಾಡುತ್ತಿದ್ದಾರಾ, ಜನರಿಗೆ ನೀರು ಕೊಡಲು ಪಾದಯಾತ್ರೆ ಮಾಡುತ್ತಿದ್ದಾರಾ ಅಥವಾ ಯಾವ ನದಿ ಜೋಡಣೆಗೆ ಪಾದಯಾತ್ರೆ ಮಾಡುತ್ತಿದ್ದಾರಾ ಯಾವುದಕ್ಕೂ ಅಲ್ಲ," ಎಂದು ಕಂದಾಯ ಸಚಿವ ಆರ್.ಅಶೋಕ್ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೆಹರು ಕುಟುಂಬ ಬೀದಿಗೆ ಬಂದಿದೆ. ಹಿಂದೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಎಲ್ಲಾ ಪಕ್ಷಗಳು ಸೇರುತ್ತಿದ್ದವು. ಈಗ ಲೋಕಲ್ ಪಾರ್ಟಿಗಳು ಕೂಡ ಕಾಂಗ್ರೆಸ್ ಜೊತೆ ಸೇರಲ್ಲ. ಕಾಂಗ್ರೆಸ್ ಅಷ್ಟು ಬೀದಿಗೆ ಬಂದುಬಿಟ್ಟಿದೆ. ಆ ಬೀದಿಗೆ ಬಂದಾಗ ಈಗ ಏನಾದರೂ ಉಳಿಸಿಕೊಳ್ಳಬೇಕು ಎಂದು, ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ. ಇದು ಫ್ಯಾಮಿಲಿ ಪಾದಯಾತ್ರೆ," ಎಂದರು.
"ಭಾರತ್ ಜೋಡೋ ಯಾತ್ರೆ ಒಂದು ಫ್ಯಾಮಿಲಿ ಪ್ಯಾಕೇಜ್, ಈ ಫ್ಯಾಮಿಲಿ ಪ್ಯಾಕೇಜ್ ಹೇಗೆ ಕರ್ನಾಟಕಕ್ಕೆ ಬಂದಿತೋ ಹಾಗೆ ದಾಟಿ ಹೋಗುತ್ತದೆ. ಇದರಿಂದ ರಾಜ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಲ್ಲ. ರಾಜ್ಯದ ಹಾಗೂ ಕಾಂಗ್ರೆಸ್‌ನ ಯಥಾಸ್ಥಿತಿ ಮುಂದುವರಿಯುತ್ತದೆ," ಎಂದು ಕಂದಾಯ ಸಚಿವರು ಹೇಳಿದ್ದಾರೆ.

"ಸೋನಿಯಾ ಗಾಂಧಿ ಅವರು, ಮಗನನ್ನು ನೋಡಲು ಇಲ್ಲಿಗೆ ಓಡೋಡಿ ಬಂದರು. ಬೇರೆ ಯಾರಾದರೂ ಪಾದಯಾತ್ರೆ ಮಾಡುವಾಗ ಸೋನಿಯಾ ಗಾಂಧಿ ಬಂದಿದ್ದಾರಾ..? ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದರು. ಆಗ ಸೋನಿಯಾ ಗಾಂಧಿ ಅವರು ಬಂದಿದ್ದರಾ..? ಕಾಂಗ್ರೆಸ್‌ನಲ್ಲಿ ಈವರೆಗೆ ಎಷ್ಟು ಜನ ಪಾದಯಾತ್ರೆ ಮಾಡಿದರು, ಒಂದು ಪಾದಾಯಾತ್ರೆಗಾದರೂ ಸೋನಿಯಾ ಗಾಂಧಿ ಬಂದಿದ್ದಾರಾ..? ಈಗ ಮಗ ಅಂತಾ ಓಡೋಡಿ ಬಂದಿದ್ದಾರೆ," ಎಂದು ಆರ್. ಅಶೋಕ್ ಹೇಳಿದ್ದಾರೆ.
"ಮಾಜಿ ಸಿಎಂ ಯಡಿಯೂರಪ್ಪ ಅವರು ನಡೆದ ಕಾಲು ಭಾಗದಷ್ಟು ಕಾಂಗ್ರೆಸ್‌ನವರು ನಡೆಯಲಿ. ಯಡಿಯೂರಪ್ಪ ಅವರು ನಡೆದ ಕಾಲು ಭಾಗದಷ್ಟು ನಡೆಯಲು ಕಾಂಗ್ರೆಸ್‌ನವರಿಗೆ ಸಾಧ್ಯವೇ ಇಲ್ಲ. ಯಡಿಯೂರಪ್ಪ ಸುಮಾರು 50-60 ವರ್ಷ ಕರ್ನಾಟಕದಲ್ಲಿ ಬಿಜೆಪಿ ಕಟ್ಟಲು ನಡೆದಿದ್ದರಲ್ಲಾ ಅದರ ಕಾಲು ಭಾಗ ಸಿದ್ದರಾಮಯ್ಯ ಅವರಿಗೆ ನಡೆಯಲು ಆಗಲ್ಲ. ಪಾದಯಾತ್ರೆ ಎನ್ನುವುದು ಬಿಜೆಪಿ ಹಾಗೂ ಯಡಿಯೂರಪ್ಪ ಅವರ ರಕ್ತದ ಕಣ ಕಣದಲ್ಲೂ ಬಂದು ಬಿಟ್ಟಿದೆ. ಅದರ ಬಗ್ಗೆ ಸವಾಲ್ ಹಾಕಿದರೆ ಸಿದ್ದರಾಮಯ್ಯ ಖಂಡಿತವಾಗಿಯೂ ಸೋಲುತ್ತಾರೆ" ಎಂದು ಹೇಳಿದರು.

"ಯಡಿಯೂರಪ್ಪ ಅವರ ರೀತಿ ಕಾಂಗ್ರೆಸ್‌ನವರಿಗೆ ನಡೆಯಲು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿ ಎಂದು ಯಡಿಯೂರಪ್ಪ ಅವರನ್ನು ಬಚ್ಚಾ ಎಂದು ಕರೆದಿದ್ದಾರೆ. ಇದು ಸಮಯೋಚಿತ ಹೇಳಿಕೆ. ಸಂದರ್ಭಕ್ಕೆ ತಕ್ಕಂತೆ ಹೇಳಿಕೆ ಕೊಟ್ಟಿದ್ದಾರೆ. ಭಾರತ್ ಚೋಡೋದಲ್ಲಿ ಅವರು ಬಸ್ಕಿ ಹೊಡೆಯೋದು, ಡಿಪ್ಸ್ ಹೊಡೆಯೊದು, ಓಡುವಂತದ್ದು ಇದನೆಲ್ಲಾ ನೋಡಿದರೆ, ಇದೊಂದಂತರಾ ಮಕ್ಕಳಾಟ ಎಂದು ಜನರಿಗೆ ಅನಿಸಿಬಿಟ್ಟಿದೆ. ಜನ ಗೇಲಿ ಮಾಡುತ್ತಿರುವುದನ್ನು ಯಡಿಯೂರಪ್ಪ ಹೇಳಿದ್ದಾರೆ," ಎಂದರು.

"ಒಂದು ಪಾದಯಾತ್ರೆ ಎಂದರೆ ಗಾಂಭೀರ್ಯತೆ ಬೇಕು. ಮಹಾತ್ಮ ಗಾಂಧೀಜಿ ಅವರು ಪಾದಯಾತ್ರೆ ಮಾಡಿದರು. ಜನ ಸಾಮಾನ್ಯರಿಗೆ ಉಪ್ಪು ಸಿಗಲಿ, ಉಪ್ಪಿನ ಮೇಲೆ ತೆರಿಗೆ ಬೇಡ ಅಂತಾ ಉಪ್ಪಿನ ಸತ್ಯಾಗ್ರಹ ಮಾಡಿದರು. ಸ್ವಾತಂತ್ರ್ಯ ಚಳವಳಿಗಾಗಿ ಪಾದಯಾತ್ರ ಮಾಡಿದರು. ಅದರಲ್ಲಿ ಒಂದು ಗಾಂಭೀರ್ಯತೆ ಇದೆ. ಆದರೆ ಇವರ ಪಾದಯಾತ್ರೆಯಲ್ಲಿ ಏನೂ ಇಲ್ಲ. ಕಾಂಗ್ರೆಸ್‌ನವರು ಮಾಡುತ್ತಿರುವ ಪಾದಯಾತ್ರೆಗೆ ಒಂದು ವಿಷಯಯವೇ ಇಲ್ಲ," ಎಂದು ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್‌ನವರ ಭಾರತ್ ಜೋಡೋ ಯಾತ್ರೆ ವಿರುದ್ಧ ಲೇವಡಿ ಮಾಡಿದ್ದಾರೆ.












Click it and Unblock the Notifications