Puneeth Rajkumar Birthday : "ಅಪ್ಪು" ಹುಟ್ಟುಹಬ್ಬಕ್ಕೆ ಈ ಬಾರಿಯ 5 ವಿಶೇಷತೆಗಳಿವು, ಇಲ್ಲಿದೆ ವಿವರ
ಇಂದು ರಾಜ್ಯದೆಲ್ಲೆಡೆ "ಅಪ್ಪು" ಹುಟ್ಟುಹಬ್ಬವನ್ನು ಆಚರಿಸಿದ್ದು, ಈ ಬಾರಿಯ ಅಪ್ಪು ಹುಟ್ಟುಹಬ್ಬಕ್ಕೆ 5 ವಿಶೇಷತೆಗಳನ್ನು ಕಾಣಬಹುದಾಗಿದೆ. ಈ ವಿಶೇಷತೆಗಳು ಏನು ಅಂತೀರಾ ಇಲ್ಲಿದೆ ವಿವರ.
ಬೆಂಗಳೂರು, ಮಾರ್ಚ್, 17: "ಅಪ್ಪು" ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅವರು ರಾಜ್ಯವಲ್ಲದೇ ಬೇರೆ ದೇಶಗಳಲ್ಲೂ ಕೂಡ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರವರೆಗೂ ಕೂಡ ಅವರನ್ನು ತುಂಬಾ ಇಷ್ಟಪಡುತ್ತಾರೆ. ಯಾವತ್ತೂ ಸ್ಟಾರ್‌ಗಿರಿ ಮಾಡಿದವರಲ್ಲ, ಸ್ಟಾರ್ ವಾರ್‌ಗೂ ಹೋದವರಲ್ಲ. ಇಂತಹ ನಿಷ್ಕಲ್ಮಶ ಮನಸ್ಸುಳ್ಳ ಡಾ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಇಂದು ದೇಶದೆಲ್ಲೆಡೆ ಆಚರಿಸುತ್ತಿದ್ದಾರೆ. ಈ ಬಾರಿಯ ಅಪ್ಪು ಹುಟ್ಟುಹಬ್ಬಕ್ಕೆ 5 ವಿಶೇಷತೆಗಳನ್ನು ನೋಡಬಹುದಾಗಿದೆ.
ಅಪ್ಪು ಅಗಲಿ ಒಂದು ವರ್ಷ ಕಳೆದರೂ ಕೂಡ ಅಭಿಮಾನಿಗಳ ಅಭಿಮಾನವಂತೂ ಕಡಿಮೆಯಾಗುತ್ತಿಲ್ಲ, ಬದಲಾಗಿ ಅಭಿಮಾನಿಗಳು ಇನ್ನು ಹೆಚ್ಚಾಗುತ್ತಲೇ ಇದೆ. ಅವರು ಮಾಡಿದ ಸಾಮಾಜ ಕಾರ್ಯಗಳು, ನಿಷ್ಕಲ್ಮಶ ನಗು, ಮುಗ್ಧತೆಯ ಮನೋಭಾವ ಜನರ ಮನಸ್ಸಲ್ಲಿ ಹಾಗೆಯೇ ಅಚ್ಚಳಿಯದೇ ಉಳಿದುಬಿಟ್ಟಿದೆ.
ಹೀಗೆ ಜನರ ಪಾಲಿಗೆ ಅವರು ದೇವರಾಗಿದ್ದಾರೆ. ಕೇವಲ ರಾಜ್ಯ ಮಾತ್ರವಲ್ಲದೇ ದೇಶದೆಲ್ಲೆಡೆ "ಅಪ್ಪು" ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಇದರ ನಡುವೆಯೇ 5 ವಿಶೇಷತೆಗಳು ಈ ಬಾರಿಯ ಹುಟ್ಟುಹಬ್ಬದ ಸಂಭ್ರಮದ ಮೆರಗನ್ನು ಹೆಚ್ಚಿಸಿವೆ.
"ಅಪ್ಪು" ಇಲ್ಲದ ಎರಡನೇ ಹುಟ್ಟುಹಬ್ಬ ಇದಾಗಿದೆ. ಆದರೂ ಅವರು ಜನರ ಹೃದಯದಲ್ಲಿ ದೇವರಾಗಿದ್ದಾರೆ. 2021 ಅಕ್ಟೋಬರ್ 29ರಂದು "ಅಪ್ಪು" ಇಹಲೋಕ ತ್ಯಜಿಸಿದ್ದು, ಆದರೂ ಇಂದಿಗೂ ಅವರ ಮೇಲಿನ ಜನರ ಅಭಿಮಾನ ಮಾತ್ರ ಕರಗಿಲ್ಲ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಸ್ಮರಿಸುತ್ತಲೇ ಇದ್ದಾರೆ. ಸಿನಿಮಾ, ಕಿರುತೆರೆ ಎಲ್ಲಾ ಕಡೆಗಳಲ್ಲಿಯೂ ಕಣ್ಣಿಗೆ ಬೀಳುತ್ತಲೇ ಇರುತ್ತಾರೆ. ಇದೀಗ ಶುಕ್ರವಾರ (ಮಾರ್ಚ್ 17) ಜನರ ಪಾಲಿಗೆ ದೇವರಾಗಿರುವ ಅವರ 48ನೇ ಜಯಂತಿಯನ್ನು ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದೆ.

ಅಭಿಮಾನಿಗಳಿಂದ ವಿಶೇಷ ಪೂಜೆ
ಈಗಾಗಲೇ ಅಭಿಮಾನಿ ಬಳಗದಲ್ಲಿಯೂ ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸುವ ಕೆಲಸ ಆರಂಭವಾಗದೆ. "ಅಪ್ಪು" ಹೆಸರಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನದ ನೋಂದಣಿ ಕಾರ್ಯಗಳು ಕೂಡ ರಾಜ್ಯದೆಲ್ಲೆಡೆ ಆರಂಭವಾಗಿದೆ. ಹಾಗೆಯೇ ಅಪ್ಪು ಸಮಾಧಿಗೂ ವಿಶೇಷ ಪೂಜೆ ನೆರವೇರಿಸಲು ಅಭಿಮಾನಿಗಳು ಸರದಿಯಲ್ಲಿ ನಿಂತಿದ್ದಾರೆ. ಹಾಗೆಯೇ ಅಪ್ಪು ಹುಟ್ಟುಹಬ್ಬದ ಅಂಗವಾಗಿ ಇಂದಿನ ವಿಶೇಷತೆಗಳ ವಿವರವನ್ನು ಇಲ್ಲಿ ಗಮನಿಸಿ.

ಅಮೋಘವರ್ಷ ನಿರ್ದೇಶನದ ಸಿನಿಮಾ
ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಅಮೆಜಾನ್ ಪ್ರೈಮ್‌ನಲ್ಲಿ ಗಂಧದಗುಡಿ ಬಿಡುಗಡೆ ಆಗುತ್ತಿದೆ. ಕರ್ನಾಟಕದ ಕಣ್ಮನ ಸೆಳೆಯುವ ನಿಸರ್ಗ ಮತ್ತು ಅಮೋಘ ಸಂಸ್ಕೃತಿಯನ್ನು ಒಳಗೊಂಡಿರುವ "ಗಂಧದಗುಡಿ" ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ನಿರ್ಮಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಮೋಘವರ್ಷ ಇದನ್ನು ನಿರ್ದೇಶನ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

2021ರಲ್ಲಿ ಬಿಡುಗಡೆ ಆಗಿದ್ದ ಸಿನಿಮಾ
ಪ್ರತಿ ಬಾರಿ ಪುನೀತ್ ಹುಟ್ಟುಹಬ್ಬದ ದಿನದಂದು, ಅವರ ಹೊಸ ಸಿನಿಮಾಗಳ ಪೋಸ್ಟರ್, ಟೀಸರ್, ಟ್ರೇಲರ್‌ಗಳು ಬಿಡುಗಡೆ ಆಗುತ್ತಿದ್ದವು. ಆದರೆ, ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಇದೀಗ ಅವರನ್ನು ಬೇರೆ ರೀತಿಯಲ್ಲಿ ಸ್ಮರಿಸಲಾಗುತ್ತಿದೆ. ಈ ಬಾರಿ ಹುಟ್ಟುಹಬ್ಬದ ಪ್ರಯುಕ್ತ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಯುವರತ್ನ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಹೊಂಬಾಳೆ ಫಿಲಮ್ಸ್ ಬ್ಯಾನರ್‌ನಲ್ಲಿ ಸಿದ್ಧವಾಗಿದ್ದ ಈ ಸಿನಿಮಾ 2021ರಲ್ಲಿ ಬಿಡುಗಡೆ ಆಗಿತ್ತು. ಇದೀಗ ಮತ್ತೆ ಬಿಡುಗಡೆ ಆಗಲಿದೆ.

ಅಪ್ಪು ಕಟೌಟ್‌ಗೆ ತಯಾರಾದ ಬೃಹತ್ ಹಾರ
ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಡಾ.ಪುನೀತ್ ರಾಜ್‌ಕುಮಾರ್ ಒಂದು ವೇಳೆ ನಮ್ಮ ನಡುವೆ ಇದ್ದಿದ್ದರೆ, ಅವರೀಗ 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುತ್ತಿದ್ದರು. ಹಾಗೆಯೇ ಉತ್ತಮ ಸಂದೇಶ ತಲುಪಿಸುವ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಇದೀಗ ಅವರ ಅನುಪಸ್ಥಿತಿಯಲ್ಲಿಯೇ ಬೆಂಗಳೂರಿನ ಗಾಂಧಿನಗರದಲ್ಲಿನ ನರ್ತಕಿ ಚಿತ್ರಮಂದಿರದ ಮುಂಭಾಗದಲ್ಲಿ ಬೃಹತ್ ಕಟೌಟ್‌ಗಳನ್ನು ಹಾಕಲಾಗಿದೆ. ಹಾಗೆಯೇ ಇದಕ್ಕಾಗಿ ಅಭಿಮಾನಿಗಳು ವಿಶೇಷ ಹೂವಿನ ಮಾಲೆಯನ್ನೂ ಕೂಡ ತಯಾರಿ ಮಾಡಿದ್ದಾರೆ.

ವಿಶೇಷ ಗೀತೆಗೆ ಧ್ವನಿ ನೀಡಿದ ಆರ್.ಕೆ
ಬಿವಿಎಂ ಪ್ರೊಡಕ್ಷನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪುನೀತ್ ಜಯಂತಿ ಪ್ರಯುಕ್ತ ವಿಶೇಷ ಹಾಡು ಬಿಡುಗಡೆ ಆಗಿದೆ. ಚರಣ್ ಅರ್ಜುನ್ ಸಂಗೀತ ಸಂಯೋಜಿಸಿರುವ ಈ ಗೀತೆಗೆ ರಾಜೇಶ್ ಕೃಷ್ಣನ್ ಧ್ವನಿ ನೀಡಿದ್ದಾರೆ. ಬಿವಿಎಂ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆ ಆಗಿದೆ. ಸೋಹನ್ ಅಭಿರಾಮ್ ನಿರ್ದೇಶನದ ಈ ಹಾಡಿಗೆ ಧನಪಾಲ್ ಕೆ.ಎಂ ಛಾಯಾಗ್ರಹಣ, ಉಮೇಶ್ ಬಿಆರ್ ಸಂಕಲನ ಮಾಡಿದ್ದಾರೆ. ಗೋಪಿ ಶೀಗಿಹಳ್ಳಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ
ಹಾಗೆಯೇ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಆರ್. ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಇಂದು (ಮಾ. 17) ಬಿಡುಗಡೆ ಆಗಿದೆ. ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿಯೂ ಬಿಡುಗಡೆ ಆಗಿ ಭಾರಿ ಸದ್ದು ಮಾಡುತ್ತಿದೆ.

ಪರಮಾತ್ಮನ ಹೆಸರಲ್ಲಿ ಅನ್ನದಾನ
ಹಾಗೆಯೇ ಬರೀ ಬೆಂಗಳೂರಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಗಳಲ್ಲಿ, ಹಳ್ಳಿಗಳಲ್ಲಿ ಅಪ್ಪು ಹುಟ್ಟುಹಬ್ಬವನ್ನು ಅಭಿಮಾನಿಗಳು ವಿವಿಧ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಬೆಂಗಳೂರಿನೆಲ್ಲೆಡೆ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದು, ಗಾಂಧಿಬಜಾರಿನ ಪದ್ಮಾವತಿ, ರವಿಕುಮಾರ್ ದಂಪತಿ ವಿಶೇಷವಾಗಿ ಆಚರಿಸಿದ್ದಾರೆ.
ಬಾಪೂಜಿ ನಗರದಲ್ಲಿರುವ ತಮ್ಮ ನಿವಾಸದ ಮುಂದೆ ಪುನೀತ್ ರಾಜ್‌ಕುಮಾರ್ ಪ್ರತಿಮೆ ಸ್ಥಾಪಿಸುವ ಮೂಲಕ ಅವರ ಹುಟ್ಟಹಬ್ಬವನ್ನು ಆಚರಣೆ ಮಾಡಿದ್ದಾರೆ. ಶುಕ್ರವಾರ ಈ ಪ್ರತಿಮೆಯನ್ನು ತಮ್ಮ ಪುತ್ರಿ ವೈಗಾ ಗೌಡಳಿಂದ ಅನಾವಣ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಪರಮಾತ್ಮನ ಹೆಸರಿನಲ್ಲಿ ಒಂದೊಳ್ಳೆ ಕೆಲಸ ಎನ್ನುವಂತೆ ಅನ್ನದಾನವನ್ನು ಕೂಡ ಮಾಡಿದ್ದಾರೆ. ರವಿಕುಮಾರ್ ಪುನೀತ್ ರಾಜ್‌ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದು, ಅರ್ಥಪೂರ್ಣವಾಗಿ ಅವರ ಹುಟ್ಟುಹಬ್ಬ ಆಚರಿಸಿ ಗಮನ ಸೆಳೆದಿದ್ದಾರೆ.












Click it and Unblock the Notifications