Pune-Bengaluru Expressway: ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖಾಂಶಗಳು
ಬೆಂಗಳೂರು, ಜನವರಿ, 29: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಿಸಲು ಮುಂದಾಗಿದೆ. ಹಾಗಾದರೆ ಈ ಹೆದ್ದಾರಿ ನಿರ್ಮಾಣಕ್ಕೆ ತಗಲುವ ವೆಚ್ಚ ಹಾಗೂ ಯಾವೆಲ್ಲ ಮಾರ್ಗಗಳಲ್ಲಿ ಹಾದುಹೋಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
40,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ 2028ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ 383 ಎಕರೆ ಅರಣ್ಯ ಭೂಮಿ ಸೇರಿದಂತೆ ಕರ್ನಾಟಕದಲ್ಲಿ ಸುಮಾರು 2,000 ಎಕರೆ ಜಮೀನು ಅಗತ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ ಎಂದು ತಿಳಿಸಿಬಂದಿದೆ.

ಯೋಜನೆಯ ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್ (ಇಐಎ) ಇನ್ನೂ ಅಂತಿಮಗೊಂಡಿಲ್ಲ. ಅಲ್ಲದೆ, ಪ್ರಾಧಿಕಾರದ ಅಧಿಕಾರಿಗಳು 25,000 ಮರಗಳನ್ನು ಕಡಿಯಲಾಗಿದೆ ಎಂದು ಅಂದಾಜಿಸಿದ್ದಾರೆ, ಅದರಲ್ಲಿ 60% ಕರ್ನಾಟಕದ್ದೇ ಪಾಲಿದೆ ಎಂದು ತಿಳಿಸಿದ್ದಾರೆ.
ಈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಹೆದ್ದಾರಿ 48 (ಹಳೆಯ NH 4)ಗೆ ವೇಗವಾದ ಪರ್ಯಾಯವಾಗಿದೆ ಮತ್ತು ಇಲ್ಲಿ ಅನುಭವಿಸುವ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇಲ್ಲಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡಬಹುದಾಗಿದೆ.
ಹೊಸ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಆರು ಪಥಗಳ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿರುತ್ತದೆ. ಪುಣೆ-ಬೆಂಗಳೂರು ನಡುವಿನ ಅಂತರ 95 ಕಿ.ಮೀಟರ್ ಕಡಿಮೆಯಾಗಲಿದೆ. ಇದು ಪುಣೆ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು ಈಗಿರುವ 11 ರಿಂದ 12 ಗಂಟೆಗಳಿಗೆ ಹೋಲಿಸಿದರೆ, 7 ರಿಂದ 8 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.
ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆ ವೆಚ್ಚ: 745 ಕಿಲೋ ಮೀಟರ್ ಉದ್ದದ ಪುಣೆ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಸುಮಾರು 31,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಆರು ಪಥದ ಡಾಂಬರೀಕರಣದ ಗ್ರೀನ್‌ಫೀಲ್ಡ್ ಈ ಎಕ್ಸ್‌ಪ್ರೆಸ್‌ವೇ ವರೀ ಬುದ್ರುಕ್‌ನಿಂದ ಪ್ರಾರಂಭವಾಗಲಿದೆ.
ಮಹಾರಾಷ್ಟ್ರದಲ್ಲಿ, ಪುಣೆ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಸತಾರಾ ಮತ್ತು ಸಾಂಗ್ಲಿ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ. ಸತಾರಾ ಜಿಲ್ಲೆಯ ಖಂಡಾಲಾ, ಫಾಲ್ತಾನ್ ಮತ್ತು ಖಟಾವೊ ಮತ್ತು ಸಾಂಗ್ಲಿ ಜಿಲ್ಲೆಯ ಖಾನಾಪುರ, ತಾಸಗಾಂವ್ ಮತ್ತು ಕವಾಥೆ ಮಹಾನ್‌ಕಲ್ ಮೂಲಕ ಹಾದುಹೋಗಲಿದೆ.
ಕರ್ನಾಟಕದಲ್ಲಿ, ಪುಣೆ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮೂಲಕ ಹಾದು ನಂತರ ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ.
ಅಸ್ತಿತ್ವದಲ್ಲಿರುವ 849-ಕಿಲೋ ಮೀಟರ್ ಹೆದ್ದಾರಿಯ ಹಲವು ವಿಭಾಗಗಳು ಮಳೆಗಾಲದಲ್ಲಿ ಜಲಾವೃತವಾಗುತ್ತವೆ. ಇದು ಪ್ರಯಾಣದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಈ ಹೊದ ಎಕ್ಸ್‌ಪ್ರೆಸ್‌ವೇ ಅನ್ನು ಯಾವುದೇ ಸಮಯದಲ್ಲಿ ಯಾವುದೇ ವಿಭಾಗವು ಜಲಾವೃತವಾಗದ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಎನ್‌ಎಚ್‌ಎಐ ತಿಳಿಸಿದೆ.
ಎಕ್ಸ್‌ಪ್ರೆಸ್‌ವೇ ವಿಮಾನಗಳಿಗೆ ತುರ್ತು ಲ್ಯಾಂಡಿಂಗ್ ಉದ್ದೇಶಗಳಿಗಾಗಿ ತಲಾ 5 ಕಿಮೀಗಳ ಎರಡು ಏರ್‌ಸ್ಟ್ರಿಪ್‌ಗಳನ್ನು ಹೊಂದಿರುತ್ತದೆ. ವಿಶ್ರಾಂತಿ ಕೊಠಡಿಗಳು, ಹೋಟೆಲ್‌ಗಳು ಮತ್ತು ಮಕ್ಕಳಿಗಾಗಿ ಆಟದ ಪ್ರದೇಶಗಳಂತಹ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಮತ್ತು ಗ್ರೀನ್‌ಫೀಲ್ಡ್ ಹೆದ್ದಾರಿಯ ಪಕ್ಕದಲ್ಲಿ ಮರಗಳನ್ನು ನೆಡಲಾಗುತ್ತದೆ. ಇಲ್ಲಿ ವಾಹನಗಳು ಗಂಟೆಗೆ ಗರಿಷ್ಠ 120 ಕಿ.ಮೀ ವೇಗದಲ್ಲಿ ಚಲಿಸುತ್ತವೆ. 100 ಮೀಟರ್ ಅಗಲಕ್ಕೆ ಯೋಜಿಸಲಾಗಿರುವುದರಿಂದ ಈ ಎಕ್ಸ್‌ಪ್ರೆಸ್‌ವೇ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಗಿಂತ ದೊಡ್ಡದಾಗಿದೆ.
ಪ್ರಸ್ತುತ ಪ್ರಸ್ತಾವನೆಯ ಹಂತದಲ್ಲಿ, ಪುಣೆ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಇನ್ನೂ ಕೆಲಸ ಪ್ರಾರಂಭವಾಗಿಲ್ಲ. ವಿವರವಾದ ಯೋಜನಾ ವರದಿ (ಡಿಪಿಆರ್) ಮಾಡಿದ ನಂತರ, ಈ ಗ್ರೀನ್‌ಫೀಲ್ಡ್ ಯೋಜನೆಗಾಗಿ ಭೂಸ್ವಾಧೀನ ಪ್ರಾರಂಭ ಆಗುತ್ತದೆ.
ಅಗ್ರಣಿ, ಚಿಕ್ಕ ಹಗರ್, ಚಂದ ನಾಡಿ, ನೀರಾ, ಯೆರಳ, ಕೃಷ್ಣ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ, ವೇದಾವತಿ ನದಿಗಳ ಮೂಲಕ ಈ ಹೆದ್ದಾರಿ ಹಾದುಹೋಗಲಿದೆ. ಅಲ್ಲದೆ 6 ರೋಡ್ ಓವರ್ ಬ್ರಿಡ್ಜ್‌ಗಳು (ಆರ್‌ಒಬಿಗಳು), 22 ಇಂಟರ್‌ಚೇಂಜ್‌ಗಳು, 55 ಫ್ಲೈಓವರ್‌ಗಳು, 14 ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಕ್ರಾಸಿಂಗ್ ಪಾಯಿಂಟ್‌ಗಳು, ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ಮರ ನೆಡುವಿಕೆಯನ್ನು ಒಳಗೊಂಡಿರುತ್ತದೆ.












Click it and Unblock the Notifications