Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅಗತ್ಯವಿದೆಯೇ? ಜನ ಹೇಳಿದ್ದಿಷ್ಟು
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರ ಸದ್ಯ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ರಾಜ್ಯ ಸರ್ಕಾರವು ಸಿಲಿಕಾನ್ ಸಿಟಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಮೂರು ಜಾಗಗಳನ್ನು ಗುರುತಿಸಿ, ಕೇಂದ್ರದ ಅನುಮೋದನೆಗಾಗಿ ಕಾಯುತ್ತಿದೆ. ಆದರೆ ಬೆಂಗಳೂರಿಗರಿಗೆ ಮತ್ತೊಂದು ಏರ್‌ಪೋರ್ಟ್‌ನ ಅಗತ್ಯ ನಿಜಕ್ಕೂ ಇದೆಯೇ? ಎಂಬ ಪ್ರಶ್ನೆಗೆ ಕೆಲವರು ಕಾರಣ ಸಹಿತ ಉತ್ತರಗಳನ್ನು ನೀಡಿದ್ದಾರೆ. ನಗರಕ್ಕೆ ಈ ಹೊಸ ಏರ್‌ಪೋರ್ಟ್ ಸೇರ್ಪಡೆಯ ಅನುಕೂಲಗಳು ಹಾಗು ಅನಾನುಕೂಲಗಳು ಏನು ಎಂದು ಜನರೇ ಹೇಳಿದ್ದಾರೆ.
ಕೆಲವರು ಹೇಳುವ ಪ್ರಕಾರ ಬೆಂಗಳೂರು ನಗರ ಭಾರತದ ಟೆಕ್ ಹಬ್ ಆಗಿದ್ದು, ಇಲ್ಲಿನ ಜನಸಂಖ್ಯೆ ಹಾಗೂ ವಿಮಾನ ಸಂಚಾರದ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಹಾಗಾಗಿ ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಅಗತ್ಯವಿದೆಯೇ ಎಂಬ ಪ್ರಶ್ನೆ ಪ್ರಸ್ತುತ ಎನ್ನುತ್ತಿದ್ದಾರೆ. ವರದಿಗಳ ಪ್ರಕಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಈಗಾಗಲೇ ದಿನಕ್ಕೆ 1,000ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದೆ. 2030ರೊಳಗೆ ವರ್ಷಕ್ಕೆ 10 ಕೋಟಿ ಪ್ರಯಾಣಿಕರ ನಿರೀಕ್ಷೆಯೂ ಇದೆ.

ಪ್ರಸ್ತುತ ವಿಮಾನ ನಿಲ್ದಾಣವು ಬೆಂಗಳೂರು ಉತ್ತರ ಭಾಗದಲ್ಲಿದೆ. ಹಾಗಾಗಿ ಈಗ ಕನಕಪುರ, ತುಮಕೂರು ಅಥವಾ ಕುಣಿಗಲ್ ಕಡೆ ಹೊಸ ಏರ್‌ಪೋರ್ಟ್ ಬಂದರೆ ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಪ್ರಯಾಣ ಸುಲಭವಾಗಲಿದೆ ಎಂದು ಕಾರಣ ನೀಡಿದ್ದಾರೆ. ಹೊಸ ವಿಮಾನ ನಿಲ್ದಾಣದಿಂದ ಸ್ಥಳೀಯ ಉದ್ಯೋಗಾವಕಾಶಗಳು, ವ್ಯಾಪಾರ ವೃದ್ಧಿಗೂ ಅವಕಾಶ ಸಿಗಲಿದೆ.
ರಿಯಲ್ ಎಸ್ಟೇಟ್ ಮೂಲ ಉದ್ದೇಶ
ಇನ್ನೂ ಕೆಲವರು ಹೇಳುತ್ತಿರುವಂತೆ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅಗತ್ಯವಿಲ್ಲ. ರಾಜಕಾರಣಿಗಳು ಮತ್ತು ಅವರ ಬೇನಾಮಿಗಳು ದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳ ಒಡೆತನದ ಭೂಮಿಯ ಬೆಲೆಗಳನ್ನು ಹೆಚ್ಚಿಸುವ ಕಾರಣದಿಂದ ಏರ್‌ಪೋರ್ಟ್ ನಿರ್ಮಿಸಲು ಉತ್ಸುಕರಾಗಿದ್ದಾರೆ. ನಗರದ ಪ್ರದೇಶವನ್ನು ವಿಸ್ತರಿಸಲು ಹಾಗೂ ಇನ್ನೂ ಒಂದು ಕೋಟಿ ವಲಸಿಗರನ್ನು ತುಂಬಿಸುವ ಉದ್ದೇಶ ಇದರಿಂದ ಹಿಂದಿದೆ ಎಂದು ದೂರುತ್ತಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಷ್ಟೇ ಟರ್ಮಿನಲ್-2 ಕಾರ್ಯಾಚರಣೆ ಆರಂಭಿಸಿದೆ. ಹೊಸ ಏರ್‌ಪೋರ್ಟ್ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಇದನ್ನು ಬೆಂಗಳೂರಿನ ಬೇರೆ ಸಮಸ್ಯೆಗಳಿಗೆ ಬಳಸಬಹುದಿತ್ತು. ಹೊಸ ಏರ್‌ಪೋರ್ಟ್ ನಿರ್ಮಾಣಕ್ಕೆ ಭೂಮಿ ವಹಿಸುವುದು, ಅರಣ್ಯ ನಾಶ, ಹಸಿರು ಪರಿಸರಕ್ಕೆ ಧಕ್ಕೆ ಮುಂತಾದ ಹಾನಿಗಳ ಸಾಧ್ಯತೆಯೂ ಇದೆ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಸದ್ಯ ಬೆಂಗಳೂರಿನ ಸಮೀಪ ಮೂರು ಜಾಗಗಳನ್ನು ಗುರುತಿಸಿರುವ ರಾಜ್ಯ ಸರ್ಕಾರವು ಅಂತಿಮ ಸ್ಥಳ ನಿಗದಿಗೆ ಭಾರತೀಯ ವಿಮಾ ನಿಲ್ದಾಣ ಪ್ರಾಧಿಕಾರಕ್ಕೆ ಕೋರಿದೆ. ಈ ತಂಡ ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಿ ಸ್ಥಳ ಅಂತಿಮಗೊಳಿಸಲಿದೆ. ಇಂದು ಕೂಡ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಸಚಿವರು ದೆಹಲಿಯಲ್ಲಿ ನಾಗರಿಕ ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿ ಮಾಡಿ ಮೈಸೂರು, ಕಲಬುರಗಿ, ವಿಜಯಪುರ ಹಾಗೂ ಇತರ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದಾರೆ. ಬೆಂಗಳೂರು ಎರಡನೇ ಏರ್‌ಪೋರ್ಟ್ ಬಗ್ಗೆಯೂ ಮಹತ್ವದ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications