ಹುಡುಗಿ ವಿಚಾರಕ್ಕೆ ಗಲಾಟೆ, ಬೆಂಗಳೂರಲ್ಲಿ ಪಿಯು ವಿದ್ಯಾರ್ಥಿ ಬರ್ಬರ ಹತ್ಯೆ
ಬೆಂಗಳೂರು, ಜನವರಿ 30: ಹುಡುಗಿಯ ವಿಚಾರಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಎಂಟನೇ ಮೈಲಿ ಸಮೀಪ ಇಂದು ಬೆಳಗ್ಗೆ ನಡೆದಿದೆ.
ಎಂಟನೇ ಮೈಲಿ ಸಮೀಪವಿರುವ ಸೌಂದರ್ಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಹುಡುಗಿ ವಿಚಾರಕ್ಕೆ ಇಬ್ಬರು ಕಾಲೇಜಿನಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರಕ್ಷಿತ್ ಬ್ಯಾಗಿನಲ್ಲಿದ್ದ ಚಾಕು ತೆಗೆದು ದಯಾಸಾಗರ್ ಇರಿದಿದ್ದಾನೆ. ದಯಾಸಾಗರ್ ನನ್ನು ಸಹಪಾಠಿಗಳು ಹಾಗೂ ಅಧ್ಯಾಪಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೀವ್ರ ರಕ್ತಸ್ರಾವ ಉಂಟಾಗಿ ದಯಾಸಾಗರ್ ಮೃತಪಟ್ಟಿದ್ದಾನೆ.
ರಕ್ಷಿತ್ (18) ತನ್ನ ಸಹಪಾಠಿ ದಯಾಸಾಗರ್ (18)ನನ್ನು ಚಾಕುಯಿಂದ ಇರಿದು ಕೊಲೆ ಮಾಡಿದ್ದಾನೆ. ದಯಾಸಾಗರ್ ಹಾಗೂ ರಕ್ಷಿತ್ ಇಬ್ಬರು ಪಿಯುಸಿ ವಿದ್ಯಾರ್ಥಿಗಳಾಗಿದ್ದು, ಸೌಂದರ್ಯ ಕಾಲೇಜಿನಲ್ಲಿ ಓದುತ್ತಿದ್ದರು. ದಯಾಸಾಗರ್ ವಿದ್ಯಾರ್ಥಿನಿಯೊಬ್ಬಳಿಗೆ ಮೆಸೇಜ್ ಮಾಡುತ್ತಿದ್ದನು. ಈ ಬಗ್ಗೆ ರಕ್ಷಿತ್ ಹಲವು ಬಾರಿ ಗುಂಪು ಕಟ್ಟಿಕೊಂಡು ದಯಾಸಾಗರ್ ಗೆ ವಾರ್ನ್ ಕೂಡ ಮಾಡಿದ್ದನು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸರು ರಕ್ಷಿತ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.











Click it and Unblock the Notifications