ಮಧು, ಹರೀಶ್ ಬಾಬುವನ್ನು ಬೆಂಗಳೂರಿಗೆ ಕರೆತಂದ ಪೊಲೀಸರು
ಬೆಂಗಳೂರು, ಅಕ್ಟೋಬರ್ 22 : ದೊಡ್ಡಬಳ್ಳಾಪುರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಮಧು ಮತ್ತು ಹರೀಶ್ ಬಾಬು ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ಗುರುವಾರ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಅಕ್ಟೋಬರ್ 19ರ ಸೋಮವಾರ ಸಂಜೆ ನಾಗ್ಪುರ ರೈಲು ನಿಲ್ದಾಣದಲ್ಲಿ ಆರೋಪಿಗಳಾದ ಮಧು ಮತ್ತು ಹರೀಶ್ ಬಾಬು ಅವರನ್ನು ಬಂಧಿಸಲಾಗಿತ್ತು. ನಾಗ್ಪುರಕ್ಕೆ ತೆರಳಿದ್ದ ಕರ್ನಾಟಕ ಪೊಲೀಸರ ತಂಡ ಬುಧವಾರ ರಾತ್ರಿ 11 ಗಂಟೆಯ ವೇಳೆಗೆ ಆರೋಪಿಗಳನ್ನು ಬೆಂಗಳೂರಿಗೆ ಕರೆತಂದರು. [ಜಗದೀಶ್ ಹಂತಕರ ಬಂಧನ : ನಾಗ್ಪುರ ಪೊಲೀಸರು ಹೇಳುವುದೇನು?]

ಬೆಂಗಳೂರು ಗ್ರಾಮಾಂತರ ಎಸ್ಪಿ ರಮೇಶ್ ಬಾನೋತ್ ನೇತೃತ್ವದ ಪೊಲೀಸರ ತಂಡ, ನಾಗ್ಪುರದಿಂದ ರಾತ್ರಿ 9.30ಕ್ಕೆ ಹೊರಟ ವಿಮಾನದಲ್ಲಿ ಆರೋಪಿಗಳನ್ನು ಕರೆತಂದರು. ರಾತ್ರಿ 10.45ರ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರೋಪಿಗಳನ್ನು ಕರೆದುಕೊಂಡು ಬರಲಾಯಿತು. ಅಲ್ಲಿಂದ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಕೇಂದ್ರ ವಲಯದ ಐಜಿಪಿ ಕಚೇರಿಗೆ ಕರೆದು ಹೋಗಲಾಗಿದೆ. [ನಾಗ್ಪುರದಲ್ಲಿ ಸಿಕ್ಕಿಬಿದ್ದ ಮಧು, ಹರೀಶ್ ಬಾಬು]
ಗುರುವಾರ ಆರೋಪಿಗಳನ್ನು ನೆಲಮಂಗಲದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡುವಂತೆ ಮನವಿ ಮಾಡಲಾಗುತ್ತದೆ.












Click it and Unblock the Notifications