"ಸರ್ಕಾರ ಗ್ಯಾರಂಟಿ ಯೋಜನೆಗಳಂತೆ ಜೈಲಿನಲ್ಲಿ ಫ್ರೀಯಾಗಿ ಆತಿಥ್ಯ ನೀಡುತ್ತಿದೆ''
ಬೆಂಗಳೂರು, ನವೆಂಬರ್ 10: ಜೈಲಿನ ಒಳಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ವಿಚಾರ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಇತ್ತ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಭಯೋತ್ಪಾದಕರನ್ನು ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಅವರಿಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ರೇಸ್ ಕೋರ್ಸ್ ರಸ್ತೆ ಬಳಿ ಪ್ರತಿಭಟನೆ ನಡೆಸಿದರು. ಪಕ್ಷ ಕಾರ್ಯಕರ್ತರು, ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಿಎಂ ಮನೆಗೆ ಮುತ್ತಿಗೆ ವಿಫಲ ಯತ್ನ ನಡೆಸಿದರು. ಪೊಲೀಸರು ನಾಯಕರನ್ನು ಬಂಧಿಸಿದೆ. ಪ್ರತಿಭಟನೆ ವೇಳೆ ಮಾತನಾಡಿದರು ಅವರು, ದೇಶ ವಿಭಜನೆ ಮಾಡುವ, ಹಿಂದೂಗಳನ್ನು ಕೊಲ್ಲುವ ಭಯೋತ್ಪಾದಕರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ ಅವರನ್ನು ಬ್ರದರ್ ಎಂದರು.

ಕಾಂಗ್ರೆಸ್ ಪರೋಕ್ಷವಾಗಿ ಉಗ್ರರಿಗೆ ಬೆಂಬಲ ನೀಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದವರಿಗೆ ಬಿರಿಯಾನಿ ಊಟ ಹಾಕಿಸಿದ್ದರು. 5 ಕೋಟಿ ರೂಪಾಯಿ ಖರ್ಚು ಮಾಡಿ, ಜೈಲಿನಲ್ಲಿ ನೂರಾರು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದರೂ, ಅವುಗಳನ್ನು ಆಫ್ ಮಾಡಲಾಗಿದೆ. ಒಂದೇ ಬಾರಿಗೆ ಎಲ್ಲ ಕ್ಯಾಮರಾಗಳು ಆಫ್ ಆಗಿದ್ದು ಹೇಗೆ? ಎಂದು ಅವರು ಪ್ರಶ್ನಿಸಿದರು.
ಕೈದಿಗಳು ಟಿವಿಯಲ್ಲಿ ಐಟಂ ಸಾಂಗ್ ನೋಡುವುದು ತಿಳಿಯುವುದಿಲ್ಲ. ಜೈಲಿನೊಳಗೆ ಬಾಂಬ್, ಮಾಂಸ, ಗಾಂಜಾ. ಮೊಬೈಲ್ ಹೋಗುವುದು ಗೊತ್ತಾಗುವುದಿಲ್ಲ. ಗುಪ್ತಚರ ತಂಡಕ್ಕೆ ಮಾಹಿತಿ ಸಿಗುವುದಿಲ್ಲ. ಕೈದಿಗಳು ಮೊಬೈಲ್ ಬಳಸಿ ಬ್ಲಾಕ್‌ಮೇಲ್ ಮಾಡುತ್ತಿದ್ದು, ಅದರಿಂದ ಹಣ ಸಂಪಾದಿಸುತ್ತಿದ್ದಾರೆ. ಇಷ್ಟೆಲ್ಲ ಅನಾಚಾರಗಳು ನಡೆಯುತ್ತಿದ್ದರು ಈವರೆಗೆ ಸುಮ್ಮನ್ನಿದ್ದಿದ್ದೇಕೆ?. ಪೊಲೀಸರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಉಗ್ರರನ್ನು ಫ್ರೀಯಾಗಿ ಬಿಟ್ಟಿದೆ. ಗ್ಯಾರಂಟಿಗಳಂತೆಯೇ ಜೈಲಿನಲ್ಲಿ ರಾಜಾತಿಥ್ಯ ಉಚಿತವಾಗಿ ದೊರೆಯುತ್ತಿದೆ, ಇದೊಂದು ಗ್ಯಾರಂಟಿ ಎಂದು ಸರ್ಕಾರಿ ಯೋಜನೆಗಳಿಗೆ ಹೋಲಿಸಿ ಲೇವಡಿ ಮಾಡಿದರು.
ಸರ್ಕಾರ ಬಂದು ಎರಡು ವರ್ಷ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಅವಧಿಯಲ್ಲಿ ಜೈಲಿಗೆ ಸಂಬಂಧಿಸಿದ ವರದಿ ತರಿಸಿಕೊಂಡಿಲ್ಲ. ನಟ ದರ್ಶನ್ ಸಿಗರೇಟು ಸೇದಿದ್ದಕ್ಕೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಆದರೆ ಭಯೋತ್ಪಾದಕರ ವಿರುದ್ಧ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಜನತೆಗೆ ತಿಳಿಸಬೇಕು. ಇದು ಕಾಂಗ್ರೆಸ್ ಪ್ರಾಯೋಜಿತವಾದ ಕೃತ್ಯ. ಮುಸ್ಲಿಮರ ವಿರುದ್ಧ ಮೃದುವಾದ ಧೋರಣೆಯಿಂದಾಗಿ ಹೀಗೆಲ್ಲ ಆಗುತ್ತಿದೆ. ಇದು ಇಡೀ ಕರ್ನಾಟಕಕ್ಕೆ ಕೆಟ್ಟ ಹೆಸರು ತಂದಿದೆ. ಬಿಹಾರದಲ್ಲೂ ಇಂತಹ ಪರಿಸ್ಥಿತಿ ಇಲ್ಲ ಎಂದು ಅವರು ಗುಡುಗಿದರು.
ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಚ್ಚಾಟದಲ್ಲಿ ಸಿಎಂ, ಡಿಸಿಎಂ ನಾಯಕರು ನಿರತರಾಗಿದ್ದಾರೆ. ಇದರ ನಡುವೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಅವರು ದೂರಿದರು.












Click it and Unblock the Notifications