Breaking: ಗೃಹ ಸಚಿವರ ಮನೆ ಮುತ್ತಿಗೆ: ಎಬಿವಿಪಿಯ 40 ಕಾರ್ಯಕರ್ತರು ಪೊಲೀಸ್ ವಶಕ್ಕೆ
ಬೆಂಗಳೂರು ಜುಲೈ 30: ಬೆಂಗಳೂರಿನ ಜಯಮಹಲ್ ರಸ್ತೆ ಬಳಿ ಇರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸದ ಮೇಲೆ ಮುತ್ತಿಗೆಗೆ ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ್ದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪ್ರತಿಭಟನಾ ನಿರತ 40 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆಗಳು ಮುಂದುವರಿದರೂ ಬಿಗಿ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಸಿಡಿದೆದ್ದ ಎಬಿವಿಪಿ ಸದಸ್ಯರು ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಗೃಹಸಚಿವ ಆರಗ ಜ್ಞಾನೇಂದ್ರರಿಗೆ ಮನವಿ ಸಲ್ಲಿಸಲು ಶನಿವಾರ ತೆರಳಿದ್ದಾರೆ. ಸಚಿವರ ನಿವಾಸದ ಬಳಿ ಮೊದಲು ಮೌನ ಪ್ರತಿಭಟನೆ ಮಾಡುತ್ತಿದ್ದ ಎಬಿವಿಪಿ ಸದಸ್ಯರು ಏಕಾಏಕಿ ನಿವಾಸದ ಮುಂದಿನ ಗೇಟ್ ಹಾರಿ ಮನೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.
ನಂತರ ಮನೆಯ ಬಾಗಿಲು ತೆರೆಯಲು ನಾಮುಂದು ತಾಮುಂದು ಓಡಿದ್ದಾರೆ. ಪರಿಸ್ಥಿತಿ ಅರಿತ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ನಿವಾಸದ ಮುಂದೆ ಹೈಡ್ರಾಮ ಸೃಷ್ಟಿಯಾಗಿದೆ. ನಂತರ ಸುಮಾರು 40ಮಂದಿ ಎಬಿವಿಪಿ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದಿದ್ದಾರೆ.

ಹಿಂದುಗಳ ಮಾರಣಹೋಮ ನಡೆದರೂ ಸಹ ಸರ್ಕಾರ ಕೇವಲ ಕ್ರಮದ ಭರವಸೆ ನೀಡುತ್ತಿದೆ. ಕೇವಲ ಸೂಕ್ತ ಕ್ರಮ, ತಪ್ಪಿತಸ್ಥರ ಬಂಧನ, ಯುಪಿ ಮಾದರಿ ಜಾರಿ ಎಂದು ಹೇಳುತ್ತಿದೆ ಹೊರತು ಆ ನಿಟ್ಟಿನಲ್ಲಿ ನಡೆದುಕೊಂಡಿಲ್ಲ. ಇನ್ನು ಎಷ್ಟು ಜನರ ಜೀವ ಕಳೆದುಕೊಳ್ಳಬೇಕು ಎಂದು ಪ್ರತಿಭಟನಾ ನಿರತರು ದೂರಿದರು. ಮನೆ ಮುಂದಿನ ಹೂ ಕುಂಡ ಒಡೆದು ಹಾಕಿ ನ್ಯಾಯ ಒದಗಿಸಿ ಎಂದು ಆಕ್ರೋಶ ಹೊರಹಾಕಿದರು.
ಎಬಿವಿಪಿ ಸಂಘಟನೆಯ ಕೇಸರಿ ಭಾವುಟ, ಧಿಕ್ಕಾರದ ನಾಮಫಕ ಹಿಡಿದು ಬಂದು ಮುತ್ತಿಗೆ ಮುಂದಾದವರನ್ನು ಪೊಲೀಸರು ಎಳೆದೊಯ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಎಬಿವಿಪಿ ಸಂಘಟನೆ ಇಂದು ಆರಗ ಜ್ಞಾನೇಂದ್ರ ಅವರ ಮನೆ ಮುತ್ತಿಗೆ ಬರುವ ಬಗ್ಗೆ ಪೊಲೀಸ್ ಇಲಾಖೆಗೆ ತಡವಾಗಿ ಗೊತ್ತಾಗಿದ್ದೆ ಘಟನೆ ಜರುಗಲು ಕಾರಣವಾಗಿದೆ. ಎಬಿವಿಪಿ ಸದಸ್ಯರ ಬಂಧನ ಬಳಿಕ ಸದ್ಯ ಆರಗ ಜ್ಞಾನೇಂದ್ರ ಅವರ ಮನೆ ಸುತ್ತಮುತ್ತಲಿನ ವಾತಾವರಣ ಸಹಜ ಸ್ಥಿತಿ ಬಂದಿದೆ ಎನ್ನಲಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ:
ಡಿ ಜಿ ಹಳ್ಳಿ, ಕೆಜಿ ಹಳ್ಳಿ ಗಳಭೆಗಳಿಂದ ಹಿಡಿದು, ಇತ್ತೀಚಿಗಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯಂತಹ ಘಟನೆಗಳ ಹಿನ್ನಲೆಯಲ್ಲಿ, ಎಸ್ ಡಿ ಪಿ ಐ ಯಂಥ ಸಂಸ್ಥೆಗಳ ಮೇಲೆ ನಿಷೇಧ ಹೇರಬೇಕು ಎಂಬ ಬೇಡಿಕೆಯೊಂದಿಗೆ, ಪ್ರತಿಭಟನೆಯನ್ನು ಎಬಿವಿಪಿ ಕಾರ್ಯಕರ್ತರು, ನಡೆಸಿದ್ದಾರೆ ನಾನು ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ, ಹಾಗೂ ಸರಕಾರವೂ ಆ ನಿಟ್ಟಿನಲ್ಲಿ ಯೋಚಿಸುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮನೆಯಲ್ಲಿ ನನ್ನನ್ನು ಭೇಟಿಯಾಗಲು ಬಂದಿದ್ದ ಎಬಿವಿಪಿ ಕಾರ್ಯಕರ್ತರು, ನನ್ನ ಅನುಪಸ್ಥಿತಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಎಬಿವಿಪಿಯ ಸದಸ್ಯರನ್ನು ನಾನೇ ಆಹ್ವಾನಿಸಿ ಮಾತನಾಡುತ್ತೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ.












Click it and Unblock the Notifications