ಶ್ರೀಕಾಂತ ಪೂಜಾರಿ ಬಂಧನ ವಿರೋಧಿಸಿ ಧರಣಿ: ಬಿಜೆಪಿ ಶಾಸಕ ಸುರೇಶ್ ಕುಮಾರ್ ಪೊಲೀಸ್ ವಶಕ್ಕೆ!
ಬೆಂಗಳೂರು ಜನವರಿ 5: ಶ್ರೀಕಾಂತ ಪೂಜಾರಿ ಬಂಧನ ವಿರೋಧಿಸಿ ರಾಜ್ಯದೆಲ್ಲೆಡೆ ಬಿಜೆಪಿ ಪ್ರತಿಭಟನೆ ಮುಂದುವರೆದಿದೆ. ಇಂದು ಕೂಡ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಏಕಾಂಗಿಯಾಗಿ ಮಲ್ಲೇಶ್ವರಂ ಠಾಣೆ ಎದುರು ಧರಣಿ ನಡೆಸಿದರು. ಈ ವೇಳೆ ಸುರೇಶ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
'ಹಿಂದುಗಳನ್ನು ಬಂಧಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ. ನಾವೂ ಹಿಂದುಗಳೇ ನಮ್ಮನ್ನೂ ಬಂಧಿಸಿ' ಎಂದು ಘೋಷಣೆ ಕೂಗುವ ಮೂಲಕ ಸುರೇಶ್ ಕುಮಾರ್ ಪ್ರತಿಭಟನೆಗೆ ಮುಂದಾದರು. 'ನಾನು ಕ್ರಿ.ಶ1992 ಡಿಸೆಂಬರ್ 6ರ ಅಯೋಧ್ಯೆ ಶ್ರೀರಾಮ ಮಂದಿರದ ಕರಸೇವಕ ನನ್ನನ್ನೂ ಬಂಧಿಸಿ' ಎಂಬ ಫಲಕವನ್ನು ಹಿಡಿದು ಏಕಾಂಗಿಯಾಗಿ ಧರಣಿ ಕುಳಿತರು. ಈ ವೇಳೆ ಬಿಜೆಪಿ ಕಾರ್ಯಕರ್ತರು ತಮ್ಮ ಶಾಸಕರ ಬೆಂಬಲಕ್ಕೆ ನಿಂತರು.

'ನಾವೂ ಕೂಡ ಶ್ರೀರಾಮನ ಭಕ್ತರು. ನಮ್ಮನ್ನೂ ಬಂಧಿಸಿ' ಎಂದು ಕೂಗಲು ಆರಂಭಿಸಿದರು. ಈ ವೇಳೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಈ ವೇಳೆ ಪೊಲೀಸ್ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಯಿತು. ಕೂಡಲೆ ಸುರೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಇನ್ನೂ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ 1992ರಲ್ಲಿ ದೇಶಾದ್ಯಂತ ನಡೆದಿದ್ದ ಗಲಭೆಗಳ ವೇಳೆ ಹುಬ್ಬಳ್ಳಿಯಲ್ಲಿ ಸಂಭವಿಸಿದ್ದ ಕೋಮುಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕಾಂತ ಪೂಜಾರಿ ವಿರುದ್ಧದ ಜಾಮೀನು ಅರ್ಜಿಯ ಆದೇಶವನ್ನು ಹುಬ್ಬಳ್ಳಿ ನ್ಯಾಯಾಲಯವು ಶುಕ್ರವಾರ ಪ್ರಕಟಿಸಲಿದೆ.
ಈ ನಡುವೆ ಶ್ರೀಕಾಂತ್ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಈಗ ಜಾಮೀನು ನೀಡಿದರೆ ನ್ಯಾಯಾಲಯಕ್ಕೆ ಗೈರಾಗುವ ಸಾಧ್ಯತೆ ಇರುತ್ತದೆ. ಶ್ರೀಕಾಂತ್ ಅವರ ವಿರುದ್ಧ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ 13 ಕ್ರಿಮಿನಲ್ ಪ್ರಕರಣ ಹಾಗೂ 3 ಮುಂಜಾಗ್ರತಾ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.
ಶ್ರೀಕಾಂತ್ ಪೂಜಾರಿ ಬಂಧನವಾಗಿದ್ದು ಯಾಕೆ?
ಹಜರೇಸಾಬ್ ಮಲಿಕ್‌ಸಾಬ್ ಅಂಗಡಿ ಅವರು ಸಲ್ಲಿಸಿದ ದೂರಿನ ಅನ್ವಯ ಮೂರನೇ ಆರೋಪಿಯಾಗಿರುವ ಶ್ರೀಕಾಂತ್ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147, 436, 427 ಜೊತೆಗೆ 149 ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಸಂಬಂಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ಮುಂದೆ ಪ್ರಕರಣವನ್ನು ವಿಭಜಿಸಿ ಶ್ರೀಕಾಂತ್ ಮತ್ತಿತರರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು ಎಂದು ಅರ್ಜಿದಾರರು ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿದೆ. ಮುಂದುವರೆದು ಇತರೆ ಆರೋಪಿಗಳ ವಿರುದ್ಧದ ಮೂಲ ಪ್ರಕರಣವನ್ನು ಸತ್ರ ನ್ಯಾಯಾಲಯ ಇತ್ಯರ್ಥಪಡಿಸಿದ್ದು, ಆರೋಪಿಗಳನ್ನು ಖುಲಾಸೆಗಳಿಸಿತ್ತು. ಈ ಪ್ರಕರಣದ ದೂರು ಮತ್ತು ಎಫ್‌ಐಆರ್ ಅನ್ನು ನಾಶಪಡಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಹೀಗಾಗಿ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಪ್ರಸ್ತುತ ಶ್ರೀಕಾಂತ್‌ನನ್ನು ಬಂಧಿಸಿದ್ದು, ಎಫ್‌ಐಆರ್ ಮತ್ತಿತರ ದೂರಿನ ಪ್ರತಿ ಇಲ್ಲದಿದ್ದರೂ ಆತನನ್ನು ಡಿಸೆಂಬರ್ 29ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ಕೋರುತ್ತಿರುವುದಾಗಿ ಅರ್ಜಿಯಲ್ಲಿ ಹೇಳಿದ್ದಾರೆ.












Click it and Unblock the Notifications