Property Prices: ಬೆಂಗಳೂರಿನ ಈ ಭಾಗಗಳಲ್ಲಿ ವರ್ಷದೊಳಗೆ ಆಸ್ತಿ ದರ ಶೇ 12ರಷ್ಟು ಏರಿಕೆ, ಕಾರಣ ಇಲ್ಲಿದೆ
ಬೆಂಗಳೂರಿನಲ್ಲಿ ತೀರಾ ಹಿಂದುಳಿದಿದ್ದ ಪ್ರದೇಶಗಳಾಗಿ ಗುರುತಿಸಿಕೊಂಡಿದ್ದ ಕೆಲವು ಏರಿಯಾಗಳು ಕೆಲವೇ ವರ್ಷಗಳಲ್ಲಿ ಗುರುತೇ ಸಿಗದಷ್ಟು ಬದಲಾಗಿವೆ. ಇದಕ್ಕೆ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮ ಕೂಡ ಪ್ರಮುಖ ಕಾರಣ ಎನ್ನಲಾಗಿದೆ. ಜಾಗತಿಕ ಕಂಪನಿಗಳಿಗೆ ನೆಲೆಯಾಗಿರುವ ಬೆಂಗಳೂರಿನಲ್ಲಿ ಎಲ್ಲೆಡೆಯಿಂದ ಜನ ಬಂದು ಸೆಟಲ್ ಆಗುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಪ್ರಮುಖ ಪ್ರದೇಶಗಳೆಲ್ಲ ಅಭಿವೃದ್ಧಿಯಲ್ಲಿ ದಾಪುಗಾಲಿಟ್ಟಿವೆ. ಕ್ರಮೇಣ ಈ ಭಾಗದಲ್ಲಿನ ಭೂಮಿಗೂ ಬಂಗಾರದ ಬೆಲೆ ಬಂದು, ವರ್ಷದಿಂದ ವರ್ಷಕ್ಕೆ ಗಗನಕ್ಕೇರುತ್ತಿವೆ. ಸದ್ಯ ಬೆಂಗಳೂರಿನ ಟಾಪ್ ಮೂರು ಪ್ರದೇಶಗಳಲ್ಲಿ ಭೂಮಿ ಬೆಲೆ ದುಬಾರಿಯಾಗುತ್ತಲೇ ಇವೆ ಎಂದು ತಿಳಿದುಬಂದಿದೆ. ಅವುಗಳ ಸಂಪೂರ್ಣ ವಿವರ ಇಲ್ಲಿದೆ..
ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಸಂಘಗಳ ಒಕ್ಕೂಟದ (ಕ್ರೆಡೈ) ಪ್ರಮುಖರು ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹಲವು ಪ್ರದೇಶಗಳು ಕ್ಷಿಪ್ರಗತಿಯಲ್ಲಿ ಮುಂದುವರಿಯುತ್ತಿವೆ. ಈ ಪೈಕಿ ಸದ್ಯ ನಗರದಲ್ಲಿ ಟಾಪ್ ಮೂರು ಪ್ರದೇಶಗಳಲ್ಲಿ ಆಸ್ತಿ ಮೌಲ್ಯವು ನಿರಂತರ ಏರಿಕೆ ಕಾಣುತ್ತಿದ್ದು, ಮತ್ತಷ್ಟು ಹೆಚ್ಚಳ ಕಾಣಲಿದೆ ಎಂದೂ ಅವರು ಅಂದಾಜಿಸಿದ್ದಾರೆ. ಇವರ ಪ್ರಕಾರ ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್, ಹೆಬ್ಬಾಳ ಹಾಗೂ ದೇವನಹಳ್ಳಿಗಳಲ್ಲಿ ಆಸ್ತಿ ಮೌಲ್ಯವು ವಾರ್ಷಿಕವಾಗಿ ಶೇ 8ರಿಂದ ಶೇ 12ರವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಸದ್ಯ ಬೆಂಗಳೂರಿನಲ್ಲಿ ಬಳಕೆಗಿಂತಲೂ ಹೆಚ್ಚಾಗಿ ಹೂಡಿಕೆಗಾಗಿ ಜನ ಮನೆಗಳನ್ನು ಖರೀದಿಸುವಂತೆ ಮಾಡಬಹುದಾ ಎಂಬ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇಲ್ಲಿವರೆಗಿನ ಬೆಂಗಳೂರಿನ ಮಾರುಕಟ್ಟೆ ಪ್ರವೃತ್ತಿಯನ್ನ ಗಮನಿಸಿದರೆ ಇದು ಅಸಾಧ್ಯ ಎಂದೂ ಅವರು ಹೇಳಿದ್ದಾರೆ. ಒಬ್ಬ ವ್ಯಕ್ತಿಗೆ ಹೆಚ್ಚಿನ ಮನೆಗಳನ್ನು ಖರೀದಿಸಲು ಪ್ರೋತ್ಸಾಹ ನೀಡಲಾಗುವುದಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಉತ್ತರ ಭಾಗವು ಕಳೆದ ಎರಡು ಮೂರು ವರ್ಷಗಳಲ್ಲಿ ಅಭಿವೃದ್ಧಿಯಲ್ಲಿ ಉತ್ತಮ ವೇಗವನ್ನು ಕಂಡಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿರುವುದು ಹಾಗೂ ಈಗ ಮೆಟ್ರೋ ಸಂಪರ್ಕ ವಿಮಾನ ನಿಲ್ದಾಣಕ್ಕೂ ಬರುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಇದರಿಂದ ವಾಸ್ತವದಲ್ಲಿ ಅಭಿವೃದ್ಧಿ ಸಾಕಷ್ಟು ಅವಕಾಶಗಳು ಮತ್ತು ವಿವಿಧ ವಲಯಗಳಲ್ಲಿ ಬೇಡಿಕೆಯನ್ನು ಕೂಡ ಸೃಷ್ಟಿಸಿದೆ ಎಂದು ವಿವರಿಸಿದ್ದಾರೆ.

ಈ ಭಾಗದಲ್ಲಿ ವಿಶೇಷವಾಗಿ ಇನ್ಫರ್ಮೇಷನ್ ಟೆಕ್ನಾಲಜಿ (ಐಟಿ), ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು (ಐಟಿಇಎಸ್), ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯದ ಕಂಪನಿಗಳು ಕೂಡ ತಮ್ಮ ಕಚೇರಿಗಳನ್ನು ಆರಂಭಿಸಲು ಇಲ್ಲಿ ಪೂರಕವಾದ ವಾತಾವರಣವಿದೆ. ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (ಎಸ್‌ಟಿಆರ್‌ಆರ್) ಕೂಡ ಈ ಬೆಳವಣಿಗೆಗೆ ಸಾಥ್ ನೀಡುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಬೆಳವಣಿಗೆಯಿಂದ ನಗರ ಉಳಿದ ಭಾಗಗಳಂತೆ ಈ ಪ್ರದೇಶದಲ್ಲೂ ಭೂಮಿಯಿಂದ ಸಮಸ್ಯೆ ಉಂಟಾಗುತ್ತದೆಯೇ ಎಂಬುದನ್ನು ವಿವರಿಸಿರುವ ಅವರು, ಯಲಹಂಕದಂತಹ ಪ್ರದೇಶಗಳನ್ನು ಹೊರತುಪಡಿಸಿ, ಬೆಂಗಳೂರು ಉತ್ತರ ಹಾಗೂ ಮತ್ತು ಇತರೆ ಪ್ರದೇಶಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡೆವಲಪರ್ಸ್ ಈಗಾಗಲೇ ಭೂಮಿ ವಿಚಾರದಲ್ಲಿ ಸ್ಪಷ್ಟ ನಿಲುವು ತಾಳಿದ್ದಾರೆ. ಭೂಮಿಯ ವಿಚಾರದಲ್ಲಿ ಭೂ ದಾಖಲೆಗಳು, ವಂಶಾವಳಿ ಮತ್ತು ಇತಿಹಾಸದ ಸ್ಪಷ್ಟ ತಿಳುವಳಿಕೆ, ಯಾವುದೇ ವಿಭಜನಾ ಮೊಕದ್ದಮೆಗಳಿಲ್ಲದಿರುವುದು ಸೇರಿದಂತೆ ಪ್ರಮುಖ ಅಂಶಗಳ ಬಗ್ಗೆ ಗಮನ ಹರಿಸಿರುವುದಾಗಿ ತಿಳಿಸಿದ್ದಾರೆ.
ಯಾವ ಕಡೆ ಯಾವುದಕ್ಕೆ ಡಿಮ್ಯಾಂಡ್?
ಇನ್ನುಳಿದಂತೆ ಬೆಂಗಳೂರು ದಕ್ಷಿಣ, ಆಗ್ನೇಯ ಮತ್ತು ಪೂರ್ವ ಭಾಗದ ಪ್ರದೇಶಗಳು ಹೆಚ್ಚಿನ ಸಂಖ್ಯೆಯ ಯೋಜನೆಗಳು, ಉದ್ಯೋಗ ಸೃಷ್ಟಿ, ನಾಗರಿಕ ಸೌಲಭ್ಯಗಳು, ಆಹಾರ ಮತ್ತು ಪಾನೀಯ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಉದ್ಯಮಗಳು ಬೇಡಿಕೆಯಲ್ಲಿವೆ. ಇದರಿಂದಲೂ ಈ ಭಾಗದಲ್ಲಿ ಆಸ್ತಿ ಮೌಲ್ಯವು ಏರಿಕೆ ಕಾಣುತ್ತಿದೆ ಎನ್ನಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಬೇಡಿಕೆಯು ಹೆಚ್ಚಾಗಿದ್ದು ಇದು ಪೂರೈಕೆ ಮಟ್ಟವನ್ನು ಮೀರಿಸುತ್ತಿದೆ ಎಂದೂ ಕ್ರೆಡೈನ ಕಿಶೋರ್ ಜೈನ್ ಹೇಳಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications