ಬೆಂಗಳೂರಿನ ಈ ಭಾಗದ ಆಸ್ತಿದಾರರಿಗೆ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ!
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬಿಗ್ ಶಾಕ್ ಕೊಟ್ಟಿದೆ. ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲಿ 608 ಆಸ್ತಿಗಳಿಂದ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದವರ ಆಸ್ತಿಗಳ ಮಾರಾಟಕ್ಕೆ ಪಾಲಿಕೆ ಮುಂದಾಗಿದೆ. ಆಸ್ತಿ ತೆರಿಗೆ ವಸೂಲಿಗಾಗಿ ಸ್ಥಿರ ಆಸ್ತಿಗಳ ಹರಾಜು ಮಾರಾಟ ಮಾಡಲಾಗುತ್ತಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ವಿಚಾರವಾಗಿ ಕಾರಣ ಕೇಳಿ ನೋಟಿಸ್, ಬೇಡಿಕೆ ನೋಟಿಸ್, ಆಸ್ತಿಗಳ ಮುಟ್ಟೊಗೋಲು, ವಸತಿಯೇತರ ಆಸ್ತಿಗಳಿಗೆ ಬೀಗಮುದ್ರೆ ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಸಹ ಸಾಕಷ್ಟು ಆಸ್ತಿ ಮಾಲೀಕರು ದೀರ್ಘಕಾಲದಿಂದ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಈ ಸಂಬಂಧ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡುವ ಸಲುವಾಗಿ ಆಸ್ತಿ ತೆರಿಗೆ ಪಾವತಿಸದ ಭಾರೀ ಬಾಕಿ ಉಳಿಸಿಕೊಂಡ ಆಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತು ಮಾರಾಟ ಮಾಡಲು ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಬಿಬಿಎಂಪಿಯು ಹೇಳಿದೆ.

ಇನ್ನು ಈ ಹರಾಜು ಪ್ರಕ್ರಿಯೆಯನ್ನು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 156 ಉಪಪ್ರಕರಣವಾದ 5ರ ಅಡಿಯಲ್ಲಿ ಮಾಡಲಾಗುತ್ತಿದೆ. ಹರಾಜಿನಲ್ಲಿ ಸ್ವೀಕರಿಸಿದ ಯಾವುದೇ ಹೆಚ್ಚುವರಿ ಹಣವನ್ನು ಪಾಲಿಕೆಗೆ ಸಂದಾಯವಾಗಬೇಕಿರುವ ಪೂರ್ಣ ಬಾಕಿ ವಸೂಲಿ ಮಾಡಿದ ನಂತರ ಮಾಲೀಕರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ.
ಪೂರ್ವ ವಲಯ: ಪೂರ್ವ ವಲಯದಲ್ಲಿ ಬರುವ ಜೆ.ಸಿ ನಗರ, ಮಾರುತಿ ಸೇವಾನಗರ, ಹೆಚ್.ಬಿ.ಆರ್ ಲೇಔಟ್, ಜೀವನ್ ಭೀಮಾನಗರ, ಸಿ.ವಿ ರಾಮನ್ ನಗರ, ಶಾಂತಿನಗರ ವಸಂತನಗರ ಉಪ ವಿಭಾಗಗಳಲ್ಲಿ ತಲಾ 10, ಹೆಬ್ಬಾಳ, ಕೆ.ಜಿ ಹಳ್ಳಿ ಉಪ ವಿಭಾಗಗಳಲ್ಲಿ ತಲಾ 11, ಪುಲೇಶಿನಗರ, ದೊಮ್ಮಲೂರು ಉಪ ವಿಭಾಗಗಳಲ್ಲಿ ತಲಾ 9 ಹಾಗೂ ಶಿವಾಜಿನಗರ ಉಪ ವಿಭಾಗದಲ್ಲಿ 8 ಸೇರಿದಂತೆ ಒಟ್ಟು 118 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ಪಶ್ಚಿಮ ವಲಯ: ಪಶ್ಚಿಮ ವಲಯದಲ್ಲಿ ಬರುವ ಚಿಕ್ಕಪೇಟೆ, ಚಂದ್ರ ಲೇಔಟ್, ಚಾಮರಾಜಪೇಟೆ, ಗಾಂಧಿ ನಗರ, ಗೋವಿಂದರಾಜಪುರ, ಜೆ.ಜೆ.ಆರ್ ನಗರ, ಮಲ್ಲೇಶ್ವರ, ಮಹಾಲಕ್ಷ್ಮಿಪುರ, ಮತ್ತಿಕೆರೆ, ನಾಗಪುರ, ರಾಜಾಜಿನಗರ ಹಾಗೂ ಶ್ರೀರಾಮಮಂದಿರ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 120 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ದಕ್ಷಿಣ ವಲಯ: ದಕ್ಷಿಣ ವಲಯದಲ್ಲಿ ಬರುವ ಬಿಟಿಎಂ ಲೇಔಟ್, ಕೋರಮಂಗಲ, ಬನಶಂಕರಿ, ಪದ್ಮನಾಭನಗರ, ಜಯನಗರ, ಜೆ.ಪಿ ನಗರ, ಗಾಳಿ ಆಂಜನೇಯ ದೇವಸ್ಥಾನ, ವಿಜಯನಗರ, ಹೊಂಬೇಗೌಡ ನಗರ ಉಪವಿಭಾಗಳಲ್ಲಿ ತಲಾ 10, ಗಿರಿನಗರ ಉಪ ವಿಭಾಗದಲ್ಲಿ 8, ಬಸವನಗುಡಿ ಉಪ ವಿಭಾಗದಲ್ಲಿ 6 ಹಾಗೂ ಕೆಂಪೇಗೌಡ ನಗರ ಉಪ ವಿಭಾಗದಲ್ಲಿ 5 ಸೇರಿದಂತೆ ಒಟ್ಟು 109 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ಮಹದೇವಪುರ ವಲಯ: ಮಹದೇವಪುರ ವಲಯದಲ್ಲಿ ಬರುವ ಹೊರಮಾವು, ಹೆಚ್.ಎ.ಎಲ್, ಕೆ.ಆರ್ ಪುರ, ಮಾರತಹಳ್ಳಿ, ಹೂಡಿ ಹಾಗೂ ವೈಟ್ ಫೀಲ್ಡ್ ಸೇರಿದಂತೆ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 60 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ಬೊಮ್ಮನಹಳ್ಳಿ ವಲಯ: ಬೊಮ್ಮನಹಳ್ಳಿ ವಲಯದಲ್ಲಿ ಬರುವ ಬೇಗೂರು, ಉತ್ತರ ಹಳ್ಳಿ, ಯಲಚೇನಹಳ್ಳಿ, ಬೊಮ್ಮನಹಳ್ಳಿ, ಅರಕೆರೆ, ಹೆಚ್.ಎಸ್.ಆರ್ ಲೇಔಟ್ ಹಾಗೂ ಅಂಜನಾಪುರ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 70 ಆಸ್ತಿಗಳನ್ನು 14ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ಯಲಹಂಕ ವಲಯ: ಯಲಹಂಕ ವಲಯದಲ್ಲಿ ಬರುವ ಯಲಹಂಕ, ಯಲಹಂಕ ಸ್ಯಾಟಲೈಟ್ ಟೌನ್, ಬ್ಯಾಟರಾಯನಪುರ ಹಾಗು ವಿದ್ಯಾರಣ್ಯಪುರ ಉಪ ವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 40 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ಆರ್.ಆರ್ ನಗರ ವಲಯ: ಆರ್.ಆರ್ ನಗರ ವಲಯದಲ್ಲಿ ಬರುವ ಲಗ್ಗೆರೆ, ಆರ್.ಆರ್ ನಗರ, ಲಕ್ಷ್ಮಿದೇವಿನಗರ, ಯಶವಂತಪುರ ಉಪವಿಭಾಗಳಲ್ಲಿ ತಲಾ 10, ಕೆಂಗೇರಿ ಹಾಗೂ ಹೇರೋಹಳ್ಳಿ ಉಪ ವಿಭಾಗಗಳಲ್ಲಿ ತಲಾ 5 ಸೇರಿದಂತೆ ಒಟ್ಟು 50 ಆಸ್ತಿಗಳನ್ನು 10ನೇ ಫೆಬ್ರವರಿ 2025 ರಂದು ಹರಾಜು ಹಾಕಲಾಗುತ್ತದೆ.
ದಾಸರಹಳ್ಳಿ ವಲಯ: ದಾಸರಹಳ್ಳಿ ವಲಯದಲ್ಲಿ ಬರುವ ಶೆಟ್ಟಿಹಳ್ಳಿ, ದಾಸರಹಳ್ಳಿ, ಪೀಣ್ಯ ಉಪವಿಭಾಗಳಲ್ಲಿ ತಲಾ 10 ಹಾಗೂ ಹೆಗ್ಗನಹಳ್ಳಿ ಉಪ ವಿಭಾಗದಲ್ಲಿ 11 ಸೇರಿದಂತೆ ಒಟ್ಟು 41 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಬಿಬಿಎಂಪಿಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಶಾಕ್ ನೀಡಲಾಗಿದೆ.
ಕಂಗಾಲಾದ ಆಸ್ತಿದಾರರು: ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೊಟ್ಟಿರುವ ಶಾಕ್‌ಗೆ ಬೆಂಗಳೂರಿನ ಆಸ್ತಿದಾರರು ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ ಆಸ್ತಿದಾರರ ಆಸ್ತಿ ಹರಾಜು ಹಾಕುವುದಕ್ಕೆ ಬಿಬಿಎಂಪಿ ಮುಂದಾಗಿರುವುದು ಹಲವು ಆಸ್ತಿದಾರರಿಗೆ ಶಾಕ್ ಕೊಟ್ಟಿದೆ.
ಇದಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಅಂದಾಜು 2 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಬಿಬಿಎಂಪಿಯು ಎಚ್ಚರಿಕೆ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ 2 ಲಕ್ಷ ಆಸ್ತಿದಾರರಿಗೂ ಆಸ್ತಿ ಕಳೆದುಕೊಳ್ಳುವ ಆತಂಕ ಎದುರಾಗಿದೆ.












Click it and Unblock the Notifications