ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ "ಆರ್‌ಎಸ್‌ಎಸ್ ನಿರ್ಬಂಧ" ಈ ಕೆಲಸ ಪ್ರಾರಂಭಿಸಿದ್ದೇ ಬಿಜೆಪಿ: ಪ್ರಿಯಾಂಕ್ ಖರ್ಗೆ
ಕರ್ನಾಟಕದ ಶಾಲೆಗಳು ಹಾಗೂ ಶಾಲೆಗಳ ಆವರಣಗಳು ಯಾವುದೇ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಂದ ಮುಕ್ತವಾಗಿರಬೇಕು, ಶಾಲೆಗಳು ಶಿಕ್ಷಣೇತರ ಚಟುವಟಿಕೆಗಳಿಂದ ಮುಕ್ತವಾಗಿರಬೇಕು. ಶಾಲೆಗಳ ಆವರಣವು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಿರಬೇಕು. ಈ ಆದೇಶವನ್ನು ಹೊರಡಿಸಿದ್ದು 2013ರಲ್ಲಿ ಬಿಜೆಪಿ ಸರ್ಕಾರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಬಿಜೆಪಿ ಕರ್ನಾಟಕಕ್ಕೆ ತನ್ನದೇ ಸರ್ಕಾರ ಹೊರಡಿಸಿದ ಆದೇಶ, ತಾವೇ ರೂಪಿಸಿದ ನಿಯಮಗಳ ಬಗ್ಗೆ ಅರಿವಿಲ್ಲವೇ? ಅಥವಾ ಈ ಆದೇಶ ಆರ್ಎಸ್ಎಸ್ ಗೆ ಅನ್ವಯಿಸುವುದಿಲ್ಲವೇ, RSS ಸಂಘಟನೆಯು ಈ ದೇಶದ ಸಂವಿಧಾನ, ಕಾನೂನು, ನೀತಿ ನಿಯಮಗಳಿಗೆ ಅತೀತವಾಗಿದೆ ಎಂದು ಭಾವಿಸಿದೆಯೇ ಬಿಜೆಪಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಈ ಆದೇಶ ಜಾರಿಯಲ್ಲಿದ್ದರೂ ಆರ್ಎಸ್ಎಸ್ ಎಂಬ ಸಂಘಟನೆಯು ಯಾವ ಅಂಜಿಕೆ ಇಲ್ಲದೆ ಶಾಲೆಗಳು ಹೆಡ್ಗೆವಾರ್ ಅವರ ವಂಶಸ್ಥರ ಆಸ್ತಿ ಎಂಬಂತಹ ಧೋರಣೆಯಲ್ಲಿ ತನ್ನ ಚಟುವಟಿಕೆ ನಡೆಸುತ್ತಿದೆ. ಕೂಗುಮಾರಿಗಳಂತೆ ಕೂಗುತ್ತಿರುವ ಬಿಜೆಪಿಯವರು ತಮ್ಮ ಸರ್ಕಾರದ ಆದೇಶವನ್ನು ಒಮ್ಮೆ ಅವಲೋಕನ ಮಾಡಿ ನಂತರ ತಾವೇನು ಮಾತಾಡಬೇಕು ಎಂದು ನಿರ್ಧರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಅವಧಿಯ ಆದೇಶದಲ್ಲಿ ಏನಿದೆ ?
ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಹಂಚಿಕೊಂಡಿರುವಂತೆ ಹಳೆಯ ಆದೇಶದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಮೈದಾನಗಳನ್ನು ಅನುಮತಿ ನೀಡುವ ಬಗ್ಗೆ ಇದೆ. ಬೆಂಗಳೂರು ದಕ್ಷಿಣ ಜಿಲ್ಲೆ ಖಾಸಗಿ ಸಂಸ್ಥೆಗಳ ಮನವಿಯ ಮೇರಗೆ ಖಾಸಗಿ ಕಾರ್ಯಕ್ರಮಗಳಿಗೆ ಸರ್ಕಾರಿ ಪ್ರೌಢಶಾಲೆ, ಕೋಟೆ, ಚಾಮರಾಜಪೇಟೆ, ಬೆಂಗಳೂರು ಈ ಶಾಲೆಯ ಮೈದಾನದಲ್ಲಿ ನಡೆಸುವ ಬಗ್ಗೆ ಅನುಮತಿ ಕೋರಿರುತ್ತಾರೆ.
ಈ ಕುರಿತು ಪರಿಶೀಲಿಸಲಾಗಿ, ಶಾಲಾ ಆವರಣವು ಶಾಲೆಯಲ್ಲಿ ಮಕ್ಕಳಿಗೆ ದೈನಂದಿನ ಪಾಠಪ್ರವಚನಗಳೊಂದಿಗೆ ಪತ್ಯೇತರ ಚಟುವಟಿಕೆಗಳು ಮತ್ತು ಆಟೋಟ ಕಾರ್ಯಕ್ರಮಗಳು, ಶಾರೀರಿಕ ಶಿಕ್ಷಣ ಹಾಗೂ ವ್ಯಾಯಾಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸದ್ವಿವಿನಿಯೋಗವಾಗಬೇಕು.
ಆದ್ದರಿಂದ, ಶಾಲಾ ಮೈದಾನ / ಆವರಣವನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣಕ್ಕಾಗಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ / ಉದ್ದೇಶಗಳಿಗೆ ಬಳಸಬಾರದಾಗಿ ಹಾಗೂ ಅನುಮತಿಯನ್ನು ನೀಡಬಾರದಾಗಿ ಸೂಚಿಸಿದೆ. ಅಲ್ಲದೇ ಮುಂದುವರಿದು, ಈ ರೀತಿಯ ಖಾಸಗಿ/ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಶಾಲಾ ಮೈದಾನ / ಆವರಣವನ್ನು ಬಳಸಲು ಅನುಮತಿಗಾಗಿ ಈ ಕಚೇರಿಗೆ ಪ್ರಸ್ತಾವನೆಗಳು/ಮನವಿಗಳನ್ನು ಸಲ್ಲಿಸಬಾರದಾಗಿಯೂ ಸಹ ಸೂಚಿಸಿದೆ ಎಂದು ಆ ಹಳೆಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications