ಮೋದಿ ಬಲವೇ ಮಹಾಮಂತ್ರ! ಪೆಟ್ರೋಲ್, ಗ್ಯಾಸ್ ಕಥೆ ಏನು?

ಬೆಂಗಳೂರು: ಚುನಾವಣೆ ರಂಗೇರಿರುವ ಬೆನ್ನಲ್ಲೇ ಪಿಎಂ ಮೋದಿ ಅಖಾಡ ಪ್ರವೇಶಿಸಿದ್ದಾರೆ. ಇದು ಬಿಜೆಪಿ ನಾಯಕರಿಗೆ ಆನೆಬಲ ತಂದಿದ್ದು, ಕಮಾಲ್ ಮಾಡುವ ಪ್ಲ್ಯಾನ್ ಕಮಲ ಪಾಳಯದ್ದಾಗಿದೆ. ಹಾಗಾದರೆ ಬಿಜೆಪಿ ವಿರುದ್ಧ ಕೇಳಿಬಂದ ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಆರೋಪಗಳ ಕಥೆ ಏನು? ಇದ್ಯಾವುದೂ ಚುನಾವಣೆ ಮೇಲೆ ಎಫೆಕ್ಟ್ ಆಗಲ್ವಾ? ಈ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ.

ಯಾವುದೇ ಸರ್ಕಾರ ಮರು ಆಯ್ಕೆ ಆಗುವಲ್ಲಿ ಆ ಸರ್ಕಾರದ ಹಿನ್ನೆಲೆ ಬಹುಮುಖ್ಯ. ಅದರಲ್ಲೂ ಒಂದು ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದರೆ, ಆ ಸರ್ಕಾರ ಮರು ಆಯ್ಕೆ ಆಗೋದು 100ಕ್ಕೆ 100 ಆಗೋದಿಲ್ಲ. ಅದ್ರಲ್ಲೂ ವಿಪಕ್ಷಗಳ ನಾಯಕರು ಬಿಜೆಪಿ ವಿರುದ್ಧ ಮಾಡಿದ ಆರೋಪಗಳು ಒಂದೆರಡಲ್ಲ. ಇದರಲ್ಲಿ ಜನರ ದಿನನಿತ್ಯದ ಬದುಕಿ ಅತ್ಯಗತ್ಯ ಎನಿಸಿಕೊಂಡಿರುವ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯೇ ದಾಳವಾಗಿತ್ತು. ಹಾಗಾದರೆ ಪ್ರಧಾನಿ ಮೋದಿ ಬಂದ ಮೇಲೆ ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಆರೋಪವನ್ನ ಜನ ಮರೆಯುತ್ತಾರಾ? ತಿಳಿಯೋಣ ಬನ್ನಿ.

Price hike issue is key point in Karnataka Assembly Elections 2023

ರಷ್ಯಾ-ಉಕ್ರೇನ್ ಯುದ್ಧದಿಂದ ಬೆಲೆ ಏರಿಕೆ?

ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಆರೋಪ ಕೇಳಿಬಂದರೆ ಇಂತಹ ಉತ್ತರಗಳನ್ನ ಕೆಲವು ಬುದ್ಧಿವಂತರು ನೀಡಿ ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಸಮರ್ಥಿಸಿಕೊಳ್ಳುತ್ತಾರೆ. ಆದರೆ ವಿಪಕ್ಷಗಳ ಆರೋಪ ಬೇರೆ. ರಷ್ಯಾ-ಉಕ್ರೇನ್ ಯುದ್ಧದ ನಂತರ ಭಾರತಕ್ಕೆ ನಷ್ಟವಾಗಿಲ್ಲ, ಲಾಭವೇ ಆಗಿದೆ. ರಷ್ಯಾ ಭಾರಿ ಪ್ರಮಾಣದ ಕಚ್ಚಾ ತೈಲವನ್ನ ಭಾರತಕ್ಕೆ ತುಂಬಾ ಕಡಿಮೆ ಬೆಲೆಗೆ ನೀಡುತ್ತಿದೆ. ಸ್ಥಿತಿ ಹೀಗಿದ್ದಾಗ ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಇಳಿಕೆ ಆಗಬೇಕಿತ್ತು ಅಲ್ವಾ? ಆದರೆ ಬೆಲೆ ಏರಿಕೆ ಆಗಿದ್ದು ಹೇಗೆ? ಎಂದು ವಿಪಕ್ಷಗಳು ಪ್ರಶ್ನಿಸುತ್ತಿವೆ, ಅದರ ಸಂಪೂರ್ಣ ವಿವರ ಇಲ್ಲಿದೆ.

ಭಾರತಕ್ಕೆ ಭರ್ಜರಿ ಲಾಭವಾಯ್ತಾ?

2022ರ ಫೆಬ್ರವರಿ 24ರಂದು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡುತ್ತಿದ್ದಂತೆ ಜಗತ್ತೇ ಒಂದು ಕ್ಷಣ ಸ್ತಬ್ಧವಾಗಿತ್ತು. ಯಾವ ಕ್ಷಣದಲ್ಲಿ ಇದು ಮತ್ತೊಂದು ಮಹಾಯುದ್ಧವಾಗಿ, ಜಗತ್ತನ್ನೇ ಬಲಿ ಪಡೆಯುತ್ತದೋ? ಎಂಬ ಚಿಂತೆ ಶುರುವಾಗಿತ್ತು. ಮತ್ತೊಂದ್ಕಡೆ ರಷ್ಯಾ ವಿರುದ್ಧ ಆರ್ಥಿಕ ಯುದ್ಧ ಸಾರಿದ್ದ ಅಮೆರಿಕ ಮತ್ತದರ ಯುರೋಪ್ ಮಿತ್ರ ರಾಷ್ಟ್ರಗಳು ರಷ್ಯಾದಿಂದ ಯುರೋಪ್‌ಗೆ ಬರುತ್ತಿದ್ದ ತೈಲವನ್ನು ತಕ್ಷಣ ನಿಲ್ಲಿಸಿದ್ದವು. ಆದರೆ ಇದೇ ನಿರ್ಧಾರ ಭಾರತಕ್ಕೆ ವರವಾಗಿ ಪರಿಣಮಿಸಿತ್ತು. ಕೋಟ್ಯಂತರ ರೂಪಾಯಿ ತೈಲ ರಫ್ತಿನಿಂದ ಲಾಭವಾಗಿತ್ತು.

ಅಮೆರಿಕಗೆ ರಷ್ಯಾ-ಭಾರತ ಶಾಕ್!

ಐರೋಪ್ಯ ರಾಷ್ಟ್ರಗಳು ರಷ್ಯಾ ತೈಲಕ್ಕೆ ನಿಷೇಧ ಹೇರಿದ್ದವು ನಿಜ. ಆದರೆ ನೇರವಾಗಿ ತೈಲ ಸರಬರಾಜು ಮಾಡುವ ಬದಲು, ಪರೋಕ್ಷವಾಗಿ ರಷ್ಯಾ ತನ್ನ ತೈಲವನ್ನ ಯುರೋಪ್ ದೇಶಗಳಿಗೆ ಕಳುಹಿಸುತ್ತಿದೆ. ಯುರೋಪ್ ದೇಶಗಳ ತೈಲ ಹಸಿವು ತುಂಬಾ ಹೆಚ್ಚು. ಹೀಗಾಗಿ ರಷ್ಯಾ ತೈಲ ಇಲ್ಲದೆ ಯುರೋಪ್ ದೇಶಗಳು ಬದುಕಲ್ಲ. ಹೀಗಾಗಿ ರಷ್ಯಾ ಒಂದು ಪ್ಲ್ಯಾನ್ ಮಾಡಿ, ಭಾರತದ ಮೂಲಕ ಮತ್ತೊಂದು ದಾರಿ ಹುಡುಕಿತ್ತು. ಯಾವುದು ಆ ದಾರಿ? ಅದರಿಂದ ಭಾರತಕ್ಕೆ ಲಾಭವಾಗಿದ್ದು ಹೇಗೆ? ನೋಡೋಣ ಬನ್ನಿ.

ಹಿಂಬಾಗಿಲ ಮೂಲಕ ತೈಲ ಎಂಟ್ರಿ

ರಷ್ಯಾದ ಕಚ್ಚಾ ತೈಲ ಭಾರತದಲ್ಲಿ ಸಂಸ್ಕರಣೆ ಆಗಿ ಯುರೋಪ್ ರಾಷ್ಟ್ರಗಳಿಗೆ ತಲುಪುತ್ತಿದೆ. ರಷ್ಯಾ-ಉಕ್ರೇನ್ ಯುದ್ಧಕ್ಕೆ ಮೊದಲು ಭಾರತದಿಂದ ನಿತ್ಯ 1 ಲಕ್ಷ 54 ಸಾವಿರ ಬ್ಯಾರಲ್ ಶುದ್ಧ ತೈಲ ಯುರೋಪ್ ದೇಶಗಳಿಗೆ ಸಪ್ಲೈ ಆಗುತ್ತಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ತೈಲ ರಫ್ತಿನ ಪ್ರಮಾಣ 2 ಲಕ್ಷ ಬ್ಯಾರಲ್ ತಲುಪಿದೆ. ಈ ಮೂಲಕ ರಷ್ಯಾ ಕೂಡ ಭಾರತದ ಸಹಾಯದಿಂದ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾ ತೈಲ ಭಾರತಲ್ಲಿ ಸಂಸ್ಕರಣೆಯಾಗಿ ಭಾರಿ ಪ್ರಮಾಣದಲ್ಲಿ ಯುರೋಪ್ ತಲುಪುತ್ತಿದೆ.

ಭಾರತ ತೈಲ ಮಾರುಕಟ್ಟೆ ಕಿಂಗ್!

2021-22ಕ್ಕೆ ಹೋಲಿಸಿದರೆ 2022-23ರ ಅವಧಿಯಲ್ಲಿ ಭಾರತದಿಂದ ಶೇಕಡಾ 12ರಿಂದ 16ರಷ್ಟು ಹೆಚ್ಚು ಡೀಸೆಲ್ ಯುರೋಪ್ ರಾಷ್ಟ್ರಗಳಿಗೆ ರಫ್ತಾಗಿದೆ. ಗ್ಯಾಸ್ ಉತ್ಪನ್ನಗಳ ರಫ್ತಿನಲ್ಲಿ ಭರ್ಜರಿ ಶೇ.30ರಷ್ಟು ಏರಿಕೆ ಕಂಡುಬಂದಿದೆ. ಜೆಟ್ ವಿಮಾನಗಳಿಗೆ ಬಳಸುವ ತೈಲ ರಫ್ತಿನಲ್ಲೂ ಶೇ.50ರಷ್ಟು ಏರಿಕೆ ಕಂಡುಬಂದಿದೆ. ಅಮೆರಿಕ ಕೂಡ ಭಾರತದಿಂದ ರಫ್ತಾಗುತ್ತಿರುವ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, 2022-23ರ ಅವಧಿಯಲ್ಲಿ ಆಮದು ಪ್ರಮಾಣ ಭಾರಿ ಏರಿಕೆ ಕಂಡಿದೆ. ಹಾಗಾದರೆ ಭಾರತ ಸರ್ಕಾರ ಬೆಲೆ ಕಡಿಮೆ ಮಾಡುತ್ತಿಲ್ಲ ಏಕೆ ಎಂಬುದು ವಿಪಕ್ಷಗಳ ಪ್ರಶ್ನೆ??

ಭಾರತಕ್ಕೆ ಲಾಭ, ಜನರಿಗೆ ಏಕಿಲ್ಲ?

ಇಷ್ಟೆಲ್ಲಾ ಅಂಕಿ-ಅಂಶಗಳ ಆಧಾರದಲ್ಲೇ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡುತ್ತಿವೆ. ಈ ಮಧ್ಯೆ ಅತ್ಯಂತ ಕಡಿಮೆ ಬೆಲೆಗೆ ಕಚ್ಚಾತೈಲ ಸಿಕ್ಕರೂ, ಅದನ್ನ ಯುರೋಪ್ ರಾಷ್ಟ್ರಗಳಿಗೆ ಸಪ್ಲೈ ಮಾಡಿ ಭರ್ಜರಿ ಲಾಭ ಮಾಡಿಕೊಂಡರೂ ಸಾಮಾನ್ಯ ಜನರಿಗೆ ಹೊರೆ ಯಾಕೆ? ರಷ್ಯಾ-ಉಕ್ರೇನ್ ಯುದ್ಧ ಶುರುವಾದ ನಂತರ ಭಾರತಕ್ಕೆ ಭಾರಿ ಕಡಿಮೆ ಬೆಲೆಗೆ ಕಚ್ಚಾತೈಲ ಸಿಗುತ್ತಿದ್ದು, ಬೆಲೆ ಕಡಿಮೆ ಮಾಡಬೇಕು ಅದನ್ನ ಬಿಟ್ಟು ಏರಿಕೆ ಮಾಡಿದ್ದು ಏಕೆ? ಎಂಬ ಪ್ರಶ್ನೆಯನ್ನ ವಿಪಕ್ಷ ನಾಯಕರು ಕೇಳುತ್ತಿದ್ದಾರೆ. ಹಾಗಾದರೆ ಇದು ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ವಾ?

ಚುನಾವಣೆ ಮೇಲೆ ಕರಿನೆರಳು ಇದೆ!

ಈಗ ಬಿಜೆಪಿಯ ವರಿಷ್ಠರು ಹಾಗೂ ಕೇಂದ್ರದ ನಾಯಕರು ಪ್ರಚಾರಕ್ಕೆ ಬಂದ ತಕ್ಷಣ ಎಲ್ಲಾ ಬದಲಾಗಿದೆ ಅಂತಾ ಏನು ಇಲ್ಲ. ಯಾಕಂದ್ರೆ ಈಗಲೂ ಜನರ ಮನಸ್ಸಿನಲ್ಲಿ ಬೆಲೆ ಏರಿಕೆಯ ಆಕ್ರೋಶ ಇದ್ದೇ ಇದೆ. ಅದರಲ್ಲೂ ಕಾಂಗ್ರೆಸ್ ಜನರ ಆಕ್ರೋವನ್ನು ಜಾಹೀರಾತುಗಳ ಮೂಲಕ ಡಬಲ್ ಮಾಡುತ್ತಿದೆ. 2014ರಲ್ಲಿ ಇದ್ದ ಗ್ಯಾಸ್ ಬೆಲೆ 400, ಆದರೆ ಈಗ ಅದು 1000ದ ಗಡಿ ದಾಟಿದೆ ಎಂಬ ಅಂಕಿ-ಅಂಶ ಹಿಡಿದು ತಂದು ಜನರಿಗೆ ತೋರಿಸುತ್ತಿದೆ. ಹೀಗಾಗಿ ಜನರ ಮನಸ್ಸಲ್ಲೂ ಈ ವಿಚಾರ ಮರೆಯಾಗದು. ಮತ್ತೊಂದು ಕಡೆ ಮತದಾನದ ದಿನ ಜನರ ನಿರ್ಧಾರ ಅಂತಿಮವಾಗಲಿದೆ.

ಬೆಲೆ ಏರಿಕೆ ಎಂಬುದು ದೊಡ್ಡ ಪಿಡುಗು. ಆಟೋ ಚಾಲಕರು, ಕ್ಯಾಬ್ ಚಾಲಕರಿಗೆ ಗ್ಯಾಸ್ ಬೆಲೆಯಲ್ಲಿ 1 ರೂಪಾಯಿ ಏರಿಕೆಯಾದ್ರೂ ತಳಮಳ. ಇನ್ನು ಬೀದಿಬದಿ ಹೋಟೆಲ್ ನಡೆಸುವವರಿಗೆ ಗ್ಯಾಸ್ ಬೆಲೆ ಎಂಬುದೇ ನುಂಗಲಾರದ ತುತ್ತು. 10-20 ರೂಪಾಯಿ ಉಳಿಸಿಕೊಂಡು ಜೀವನ ಮಾಡುವವರಿಗೆ ಬೆಲೆ ಏರಿಕೆ ಮಾಡಿ, ಈ ರೀತಿ ಹಿಂಸೆ ನೀಡುವುದು ಏಕೆ? ಎಂಬ ಪ್ರಶ್ನೆ ವಿಪಕ್ಷ ನಾಯಕರದ್ದು. ಇದೀಗ ಬಿಜೆಪಿ ಕೇಂದ್ರ ನಾಯಕರು ರಾಜ್ಯಕ್ಕೆ ಬಂದು ಪ್ರಚಾರ ನಡೆಸುತ್ತಿದ್ದಾರೆ, ಮತ್ತೊಂದ್ಕಡೆ ಬೆಲೆ ಏರಿಕೆ ಸಂಕಷ್ಟವನ್ನು ಜನ ಮರೆತುಬಿಡ್ತಾರಾ ಎಂಬ ಚಿಂತೆ ಕೂಡ ವಿಪಕ್ಷಗಳನ್ನ ಕಾಡುತ್ತಿದೆ.

ಒಟ್ನಲ್ಲಿ ರಣಕಣವಾಗಿ ಮಾರ್ಪಟ್ಟಿರುವ ಕರ್ನಾಟಕ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಒಂದೆಡೆ ಬೆಲೆ ಏರಿಕೆಯ ಸಂಕಷ್ಟ ಜನರನ್ನ ಕಾಡುತ್ತಿದೆ, ಮತ್ತೊಂದು ಕಡೆ ಚುನಾವಣಾ ಸಮೀಕ್ಷೆಗಳು ಕೂಡ ಬಿಜೆಪಿಗೆ ಮುಳುವಾಗಿದೆ. ಕಮಲ ಪಾಳಯದ ನಾಯಕರು ಇದನ್ನೆಲ್ಲಾ ಹೇಗೆ ನಿಭಾಯಿಸುತ್ತಾರೆ? ದಿಲ್ಲಿಯಿಂದ ದೊಡ್ಡ ದೊಡ್ಡ ನಾಯಕರು ಬಂದ ತಕ್ಷಣ ಈ ಡ್ಯಾಮೇಜ್ ಕಂಟ್ರೋಲ್ ಆಗುತ್ತಾ ಕಾದು ನೋಡಬೇಕು. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಅಂದೇ ಬೆಲೆ ಏರಿಕೆ ರಿಸಲ್ಟ್ ಕೂಡ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+